ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮುಂದುವರೆದಿದ್ದು, ಡಿಕೆಶಿಯವರನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಕುಮಾರಸ್ವಾಮಿ ಡ್ರಾಮಾ ಮಾಡುವುದರಲ್ಲಿ ಎಕ್ಸ್‌ಪರ್ಟ್ ಎಂದು ವ್ಯಂಗ್ಯವಾಡಿದ್ದಾರೆ.
ರಾಮನಗರ (ಜೂ.6): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಕೆಶಿಯವರನ್ನು ನಾಟಕದ ಕಣ್ಣೀರು ಎಂದು ಮಾಡಿದ ಟೀಕೆಗಳಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. 'ಡ್ರಾಮಾ ಮಾಡೋದರಲ್ಲಿ ಕುಮಾರಸ್ವಾಮಿ ಎಕ್ಸ್‌ಪರ್ಟ್' ಎಂದು ಡಿಕೆ ಸುರೇಶ್ ವ್ಯಂಗ್ಯವಾಡಿದರು.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಕೇಂದ್ರ ಸಚವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಾವ ಸಂದರ್ಭದಲ್ಲಿ ಹೇಗೆ ಡ್ರಾಮಾ ಮಾಡಬೇಕು ಎನ್ನುವುದರಲ್ಲೂ ಪರಿಣತರು. ಸತ್ತವರ ಬಗ್ಗೆ ಅವರ ಹೃದಯದಲ್ಲಿ ದುಃಖವಿದೆಯೋ ಅಥವಾ ರಾಜಕೀಯವಿದೆಯೋ ಗೊತ್ತಿಲ್ಲ. ಇಂಥದ್ದರಲ್ಲಿ ರಾಜಕಾರಣ ಮಾಡುತ್ತಾ ಬಂದವರು ಕುಮಾರಸ್ವಾಮಿಯವು ಎಂದು ತೀವ್ರ ವಾಗ್ದಾಳಿ ನಡೆಸಿದರು. ಇನ್ನು 'ಸರ್ಕಾರದ ಅಧಿಕೃತ ಕಾರ್ಯಕ್ರಮ ವಿಧಾನಸೌಧದಲ್ಲಿ ನಡೆಯುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅದನ್ನು ಪೂರ್ಣಗೊಳಿಸಿದ ಬಳಿಕವೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದರು. ಇದಾದ ನಂತರ ಘಟನೆ ಸಂಭವಿಸಿದೆ. ಅವರು ತಕ್ಷಣವೇ ಕಾರ್ಯಕ್ರಮ ಮುಗಿಸಲು ಸೂಚನೆ ನೀಡಿದ್ದರು. ಕೇವಲ 10 ನಿಮಿಷದಲ್ಲಿ ವೇದಿಕೆಯನ್ನು ಖಾಲಿ ಮಾಡಲಾಯಿತು.
ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಎ1, ಎ2 ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, 'ಮೊದಲು ಅವರು ತಮ್ಮ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಪ್ರಯಾಗ್ ರಾಜ್ ಘಟನೆ ಸಂಬಂಧ ಎ1, ಎ2 ಮಾಡಲಿ. ಪೆಹಲ್ಗಾಮ್ ದಾಳಿಯಲ್ಲಿ ಅಮಾಯಕರು ಬಲಿಯಾದಾಗ ನಿಮ್ಮ ನಾಯಕರು ರಾಜೀನಾಮೆ ಕೊಟ್ಟ್ರಾ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಎಲ್ಲಿಯೇ ಏನಾದರೂ ಆಯ್ತು ಅಂದರೆ ಡಿಕೆಶಿ ಕಾರಣ ಅಂತ ನಿಲ್ಲಿಸಿ ಬಿಡುವುದು ಸರಿಯಲ್ಲ. ಅವರು ಎಲ್ಲರಿಗೂ ಕಣ್ಣುಮುಂದೆ ಕಾಣ್ತಾರೆ ಅಂತಾನೆ ಟಾರ್ಗೆಟ್ ಮಾಡೋದು ತಾರತಮ್ಯ. ಮಾಧ್ಯಮಗಳು ನಿಜವಾದ ಕಾರಣ ಹುಡುಕಬೇಕು ಎಂದು ಒತ್ತಾಯಿಸಿದರು.
ಇದೊಂದು ದುರಂತ, ರಾಜಕೀಯ ಬೇಡ
ಡಿ.ಕೆ. ಸುರೇಶ್ ತಮ್ಮ ಹೇಳಿಕೆಯಲ್ಲಿ ಕಾಲ್ತುಳಿತ ಘಟನೆಗೆ ಎಲ್ಲರೂ ಒಂದು ಮಟ್ಟಿಗೆ ಜವಾಬ್ದಾರರು ಎಂಬ ಮಾತನ್ನೂ ಒಪ್ಪಿಕೊಂಡರು. 'ಇದು ಸರ್ಕಾರದ ವೈಫಲ್ಯ ಹೌದು, ಆದರೆ ಈ ಸಮಸ್ಯೆಗೆ ಪರಿಹಾರವನ್ನು ಹುಡುಕಬೇಕು. ರಾಜಕೀಯ ಮಾಡಿ ಲಾಭ ಹೊಂದಲು ಯತ್ನಿಸೋದು ತಪ್ಪು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಾ.ರಾಜಕುಮಾರ್ ಅಂತ್ಯಕ್ರಿಯೆ ವೇಳೆ ಘೋರ ಅವ್ಯವಸ್ಥೆ ಜರುಗಿತ್ತು. ಆಗ ಅವರು ರಾಜೀನಾಮೆ ಕೊಟ್ಟರಾ? ಎಂಬ ಪ್ರಶ್ನೆಯ ಮೂಲಕ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದು ದುರಂತ. ಸಾರ್ವಜನಿಕ ಜೀವನದಲ್ಲಿರುವ ಎಲ್ಲರೂ ತಲೆತಗ್ಗಿಸಬೇಕು ಎಂದರು.
ಮೃತರ ಕುಟುಂಬಕ್ಕೆ ಧೈರ್ಯ ತುಂಬಬೇಕು:
ಕುಮಾರಸ್ವಾಮಿಗೆ ಡಿ ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಅವರು ಮಾಡಿರೋ ಅನಾಹುತಗಳಿಗೆ ಮೊದಲು ರಾಜೀನಾಮೆ ಕೊಡಲಿ. ಚಿನ್ನಸ್ವಾಮಿಯಲ್ಲಿ ನಡೆದ ದುರ್ಘಟನೆಗೆ ರಾಜಕೀಯ ಬಣ್ಣ ಬಳಿಯಬಾರದು. ಸಂತಾಪ ಸೂಚಿಸಬೇಕಾದ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸಮಂಜಸವಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಮೃತಪಟ್ಟವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು.
