ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿದ್ದು, ಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ರೀತಿಯ ಚರ್ಚೆ ಇಲ್ಲ. ಅಷ್ಟೇ ಅಲ್ಲ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಸಹ ಖಾಲಿ ಇಲ್ಲ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು.

ಹೊಸಕೋಟೆ (ಜು.06): ರಾಜ್ಯದಲ್ಲಿ ಪ್ರಸ್ತುತ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿದ್ದು, ಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ರೀತಿಯ ಚರ್ಚೆ ಇಲ್ಲ. ಅಷ್ಟೇ ಅಲ್ಲ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಸಹ ಖಾಲಿ ಇಲ್ಲ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದರು. ಬಮುಲ್‌ನ ಹೊಸಕೋಟೆ ಶಿಬಿರಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು, ಸಿಎಂ ಕುರ್ಚಿ ಖಾಲಿ ಇಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರದ ಸಂದರ್ಭ ಬಂದಾಗ ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಡಿ.ಕೆ.ಶಿವಕುಮಾರ್‌ ಸಿಎಂ ಆಗಿಯೇ ಆಗುತ್ತಾರೆ: ‘ಸಿದ್ದರಾಮಯ್ಯ ಅವರನ್ನು ಬೆಂಬಿಲಿಸುವುದು ಬಿಟ್ಟು ನನಗೆ ಬೇರೆ ಆಯ್ಕೆಗಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೀಡಿರುವ ಹೇಳಿಕೆ ಅಸಹಾಯಕತೆ ಅಲ್ಲ. ಅವರ ಪಕ್ಷ ನಿಷ್ಠೆ ಮತ್ತು ನಾಯಕತ್ವಕ್ಕೆ ಕೊಡುವ ಗೌರವ’ ಎಂದು ಮಾಜಿ ಸಂಸದ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ. ಅಲ್ಲದೆ, ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆ, ಆಗುತ್ತಾರೆಂಬ ಭರವಸೆ ಎರಡೂ ನನಗೆ ಇದೆ. ಮುಂದೊಂದು ದಿನ ಅವರ ಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ. ಇದನ್ನ ಹಿಂದೆಯೂ ಹೇಳಿದ್ದಾರೆ, ಈಗಲೂ ಹೇಳಿದ್ದಾರೆ. ಮುಂದೆಯೂ ಹೇಳುತ್ತಾರೆ. ಪಕ್ಷದ ಶಿಸ್ತನ್ನು ಪಾಲಿಸಿದ್ದಾರೆ. ನನಗೂ ಅವರು ಮುಖ್ಯಮಂತ್ರಿ ಆಗಬೇಕೆಂಬ ಆಸೆ, ಆಗುತ್ತಾರೆಂಬ ಭರವಸೆ ಇದೆ. ಯಾವಾಗ ಏನು ಎನ್ನುವುದನ್ನು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದರು.

ಇನ್ನು ʻಐದು ವರ್ಷ ನಾನೇ ಸಿಎಂʼ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತ ಪ್ರಶ್ನೆಗೆ, ಮುಖ್ಯಮಂತ್ರಿ ಆಗಿರುವವರು ಮುಖ್ಯಮಂತ್ರಿ ಆಗಿ ಮುಂದುವರೆಯುತ್ತೇನೆ ಎಂದು ಹೇಳಿದರೆ ತಪ್ಪೇನಿದೆ? ಅವರು ಶಾಸಕಾಂಗ ಪಕ್ಷದ ನಾಯಕರು. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಚೆನ್ನಾಗಿದ್ದಾರೆ. ಇವತ್ತೂ ಚೆನ್ನಾಗಿದ್ದಾರೆ, ನಾಳೆಯೂ ಚೆನ್ನಾಗಿರ್ತಾರೆ. ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ನಾವು ಜನರ ಹಿತವನ್ನು ಕಾಪಾಡಬೇಕು ಎಂದು ಹೇಳಿದರು.

ಶಾಸಕರಾಗಬೇಕು, ಸಂಸದರಾಗಬೇಕು, ಮಂತ್ರಿ, ಮುಖ್ಯಮಂತ್ರಿ ಯಾವುದೇ ಆಗಬೇಕಾದರೂ ಹಣೆಯಲ್ಲಿ ಬರೆದಿರಬೇಕು. ಅದು ಭಗವಂತನ ಇಚ್ಛೆ. ಜನರ ಆಶೀರ್ವಾದ ಯಾರ ಹಣೆಯಲ್ಲಿ ಏನು ಬರೆದಿದೆಯೋ? ಹಿಂದೆ ಸದಾನಂದಗೌಡರು ಕೆಎಂಎಫ್‌ ಅಧ್ಯಕ್ಷಗಿರಿಗೆ ಅಂಗಲಾಚುತ್ತಿರುವಾಗ ಮೂರೇ ತಿಂಗಳಲ್ಲಿ ಮುಖ್ಯಮಂತ್ರಿಯೇ ಆದರು. ಬಸವರಾಜ ಬೊಮ್ಮಾಯಿ ಕೂಡ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಆದರು.