ಬೆಂಗಳೂರು ಗ್ರಾಮಾಂತರ: ಹ್ಯಾಟ್ರಿಕ್ ಸಂಸದ ಡಿ.ಕೆ.ಸುರೇಶ್ 4ನೇ ಬಾರಿ ಸ್ಪರ್ಧೆ..!

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಸುರೇಶ್, 2019ರ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಸಂಸದರಾಗಿದ್ದರು. ಕಾಂಗ್ರೆಸ್ ವರಿಷ್ಠರು ಅವರಿಗೆ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಅಷ್ಟಕ್ಕೂ ಕ್ಷೇತ್ರದಲ್ಲಿ ಸುರೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ಕಾಂಗ್ರೆಸ್‌ ಟಿಕೆಟ್ ಗೆ ಆಕಾಂಕ್ಷಿ ಆಗಿರಲಿಲ್ಲ. ಹೀಗಾಗಿ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ಖಾತ್ರಿಯಾಗಿದೆ.

DK Suresh 4th time Contest at Ramanagara in Loksabha Elections grg

ರಾಮನಗರ(ಮಾ.10):  ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಹ್ಯಾಟ್ರಿಕ್ ಸಂಸದ ಡಿ.ಕೆ.ಸುರೇಶ್ ಹೆಸರನ್ನು ಘೋಷಿಸಿದೆ. ಆದರೆ, ಎನ್ ಡಿಎ ಮೈತ್ರಿಕೂಟದಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರೆದಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಸುರೇಶ್, 2019ರ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಸಂಸದರಾಗಿದ್ದರು. ಕಾಂಗ್ರೆಸ್ ವರಿಷ್ಠರು ಅವರಿಗೆ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಅಷ್ಟಕ್ಕೂ ಕ್ಷೇತ್ರದಲ್ಲಿ ಸುರೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ಕಾಂಗ್ರೆಸ್‌ ಟಿಕೆಟ್ ಗೆ ಆಕಾಂಕ್ಷಿ ಆಗಿರಲಿಲ್ಲ. ಹೀಗಾಗಿ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ಖಾತ್ರಿಯಾಗಿದೆ.

ಆದರೆ, ಡಿ.ಕೆ.ಸುರೇಶ್ ಅವರು ಕೆಲ ತಿಂಗಳ ಹಿಂದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ. ಗೊಂದಲದಲ್ಲಿಯೇ ಇದ್ದೇನೆ. ರಾಜಕಾರಣ ಬೇಕೋ ಬೇಡವೋ ಎನ್ನುವ ಹಂತಕ್ಕೆ ಬಂದಿದ್ದೇನೆ ಎಂದು ವೈರಾಗ್ಯದ ಮಾತುಗಳನ್ನು ಆಡಿದ್ದರು. ಅಲ್ಲದೆ, ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋಗುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈಗ ಟಿಕೆಟ್ ಘೋಷಣೆಯಾಗುವ ಮೂಲಕ ವದಂತಿಗಳಿಗೆಲ್ಲ ತೆರೆ ಬಿದ್ದಿದೆ.

Loksabha Elections 2024: ದುಡ್ಡಿದ್ದರಷ್ಟೇ ಚುನಾವಣೆ ಗೆಲ್ಲಲಾಗದು: ಸ್ಟಾರ್ ಚಂದ್ರು

ಕೈಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು :

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಗೆಲವು ಸಾಧಿಸಿದ ಏಕೈಕ ಕ್ಷೇತ್ರವಾಗಿತ್ತು. ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಿರಾಶಾದಾಯಕ ಪ್ರದರ್ಶನ ನೀಡಿದ್ದರೂ ಕ್ಷೇತ್ರದ ಮತದಾರರು ಡಿ.ಕೆ.ಸುರೇಶ್ ಕೈ ಹಿಡಿದಿದ್ದರು. ಅಂದು ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುರೇಶ್ ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡ ವಿರುದ್ಧ ನಿರೀಕ್ಷಿತ ಅಂತರದ ಗೆಲುವು ಸಾಧಿಸಲಿಲ್ಲ. ಆದರೂ ಅವರಿಗೆ ಸಿಕ್ಕ ಗೆಲವು ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಾಲಿಗೆ ಅಮೂಲ್ಯದಾಗಿತ್ತು.

ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿದ್ದು, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದಾರೆ. ಈ ಬಾರಿ ಮತ್ತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಮತ್ತು ಸವಾಲು ಎದುರಾಗಿದೆ. ಹೀಗಾಗಿಯೇ ಟಿಕೆಟ್ ಘೋಷಣೆಗೂ ಮುಂಚೆಯೇ ಸುರೇಶ್ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದೀಗ ಟಿಕೆಟ್ ಘೋಷಣೆಯು ಪ್ರಚಾರ ಕಾರ್ಯಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬಲಿದೆ.

ಬಿಜೆಪಿ - ಜೆಡಿಎಸ್ ಮಿತ್ರ ಪಕ್ಷಗಳ ತಂತ್ರ ಏನು? :

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿದೆ. ಇಲ್ಲಿ ಜಯ ದಾಖಲಿಸಿ, ಹೊಸ ಇತಿಹಾಸ ನಿರ್ಮಿಸಬೇಕು ಎನ್ನುವುದು ಜೆಡಿಎಸ್ ಮತ್ತು ಬಿಜೆಪಿ ನಾಯಕರ ಗುರಿ. ಇದಕ್ಕೆ ಕಾರಣವೆಂದರೆ ಸತತವಾಗಿ 3 ಬಾರಿ ಗೆದ್ದಿರುವ ಡಿ.ಕೆ. ಸುರೇಶ್ ಅವರು, ಮತ್ತೊಮ್ಮೆ ಗೆದ್ದು ಬೀಗಿದರೆ 4ನೇ ಬಾರಿ ಗೆದ್ದಂತೆ ಆಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಪಣತೊಟ್ಟಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರು ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ರಣತಂತ್ರ ರೂಪಿಸಿದ್ದಾರೆ. ಹೀಗಾಗಿ ಭಾರಿ ಹಣಾಹಣಿ ನಿರೀಕ್ಷೆ ಮಾಡಲಾಗಿದೆ.

ಈಗಾಗಲೇ ಕ್ಷೇತ್ರದ ಸಿದ್ಧತೆ, ಅಭ್ಯರ್ಥಿ ಆಯ್ಕೆ ಇನ್ನಿತರೆ ಅಂಶಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ನಿವಾಸದಲ್ಲಿ ಎನ್ ಡಿಎ ಮೈತ್ರಿಕೂಟದ ನಾಯಕರ ಜತೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಆ ಸಭೆಯಲ್ಲಿದ್ದ ನಾಯಕರೆಲ್ಲರು ಸಿ.ಪಿ.ಯೋಗೇಶ್ವರ್ ಅವರೇ ಅಭ್ಯರ್ಥಿ ಆಗಬೇಕೆಂದು ಹೇಳಿದರೆ, ಸಿ.ಪಿ.ಯೋಗೇಶ್ವರ್ ರವರು ನಾನು ರಾಜ್ಯ ರಾಜಕಾರಣದಲ್ಲಿ ಇರಲು ಇಷ್ಟ, ಡಾ.ಸಿ.ಎನ್.ಮಂಜುನಾಥ್ ಅವರನ್ನು ಎನ್ ಡಿಎ ಅಭ್ಯರ್ಥಿಯಾಗಲೆಂದು ಸಲಹೆ ನೀಡಿದ್ದಾರೆ. ಕೊನೆಗೆ ನಾಯಕರೆಲ್ಲರು ಅಭ್ಯರ್ಥಿ ಆಯ್ಕೆಯನ್ನು ವರಿಷ್ಠರ ತೀರ್ಮಾನಕ್ಕೆ ಬಿಡುವ ನಿರ್ಧಾರ ಕೈಗೊಂಡರು ಎಂದು ತಿಳಿದು ಬಂದಿದೆ.

ಸುರೇಶ್ ಅವರಿಗೆ ಪ್ರತಿಸ್ಪರ್ಧಿಯಾಗಿ ಮೈತ್ರಿ ಪಕ್ಷದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ. ಸದ್ಯಕ್ಕೆ ಜೆಡಿಎಸ್ ವರಿಷ್ಠರಾದ ಎಚ್‌.ಡಿ. ದೇವೇಗೌಡ ಅವರ ಅಳಿಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೆಸರು ಚಾಲ್ತಿಯಲ್ಲಿದೆ. ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳುವುದೇ ಅಥವಾ ಅಚ್ಚರಿಯ ಹೆಸರು ಹೊರಬೀಳುವುದೇ ಎಂಬುದನ್ನು ಕಾದು ನೋಡಬೇಕಿದೆ.

ಕ್ಷೇತ್ರದಲ್ಲಿ ಬಲ ಹೆಚ್ಚಿಸಿಕೊಂಡ ಕೈ ಪಡೆ :

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ನ ಭದ್ರಕೋಟೆಯಾಗಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಬೆಂಗಳೂರಿನ ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ 8 ಕ್ಷೇತ್ರಗಳ ಪೈಕಿ 5 ರಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, 2 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 1 ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ತನ್ನ ಬಲ ಹೆಚ್ಚಿಸಿಕೊಂಡಿದೆ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಯತ್ನಿಸಬೇಕಿದೆ: ಗೃಹ ಸಚಿವ ಪರಮೇಶ್ವರ್

ಡಿಕೆಸು ರಾಜಕೀಯ ಹಾದಿ :

ಸಂಸತ್ ಚುನಾವಣೆ ಮೂಕವೇ ಡಿ.ಕೆ.ಸುರೇಶ್ ರಾಜಕಾರಣಕ್ಕೆ ಪ್ರವೇಶ ಮಾಡಿದವರು. ಸಂಸದರಾಗುವುದಕ್ಕೂ ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಸ್ಥಳೀಯ ಸಂಸ್ಥೆಗಳಲ್ಲಿಯೂ ಸ್ಪರ್ಧೆ ಕೂಡ ಮಾಡಿದವರಲ್ಲ. ಕನಕಪುರ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಶಿವಕುಮಾರ್ ಅವರ ಗೆಲುವುಗಾಗಿ ರಣತಂತ್ರಗಳನ್ನು ಹೆಣೆದು ಗೆಲುವಿಗಾಗಿ ಶ್ರಮಿಸುತ್ತಿದ್ದರು.

2013 ರಲ್ಲಿ ಕ್ಷೇತ್ರದ ಸಂಸದರಾಗಿದ್ದ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಅವರನ್ನು ಡಿ.ಕೆ.ಸುರೇಶ್ ಮಣಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಪಿ.ಮುನಿರಾಜುಗೌಡ ಅವರನ್ನು ಸುರೇಶ್ ಸೋಲಿಸಿದರು. ಕಳೆದ (2019)ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ರವರು ಬಿಜೆಪಿಯ ಅಶ್ವತ್ಥ ನಾರಾಯಣಗೌಡ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ರಾಜ್ಯದಿಂದ ಆಯ್ಕೆಯಾದ ಕಾಂಗ್ರೆಸ್ ನ ಏಕೈಕ ಸಂಸದ ಎಂಬ ಹಿರಿಮೆಗೂ ಪಾತ್ರರಾದವರು.

Latest Videos
Follow Us:
Download App:
  • android
  • ios