ಬೆಂಗಳೂರು, (ಅ.31): ರಾಜ್ಯ ರಾಜಕಾರಣದಲ್ಲಿ ಪ್ರತಿಷ್ಠೆಗೆ ಕಾರಣವಾಗಿದ್ದ ವೈದ್ಯಕೀಯ ಕಾಲೇಜು ಯುದ್ಧದಲ್ಲಿ ಕೊನೆಗೂ ಕಾಂಗ್ರೆಸ್ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಮೇಲುಗೈ ಸಾಧಿಸಿದ್ದಾರೆ.

 ಸುಧಾಕರ್ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ, ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡೋ ಮೂಲಕ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಗೆ ಮೆಡಿಕಲ್ ಶಾಕ್ ಕೊಟ್ಟಿದೆ. ಇದೊಂದೇ ಮಾತ್ರವಲ್ಲದೇ ಸುಧಾಕರ್ ಗೆ ಮತ್ತೊಂದು ದೀಪಾವಳಿ ಗಿಫ್ಟ್ ನೀಡಿದೆ.

ಡಿಕೆಶಿಗೆ 'ಮೆಡಿಕಲ್' ಶಾಕ್: ಕಾಲೇಜು ಯುದ್ಧದಲ್ಲಿ ಗೆದ್ದ ಸುಧಾಕರ್..!

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಗ್ರಾಮವನ್ನು ತಾಲೂಕಾಗಿ ರಾಜ್ಯ ಸರ್ಕಾರ  ಘೋಷಣೆ ಮಾಡಿದೆ. ಈ ಮೂಲಕ ಸುಧಾಕರ್ ಗೆ ದೀಪಾವಳಿ ಡಬಲ್ ಧಮಕ ಸಿಕ್ಕಂತಾಗಿದೆ.

ವೈದ್ಯಕೀಯ ಕಾಲೇಜು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಡಿಕೆಶಿ ಹಾಗೂ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಸುಧಾಕರ್ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಪ್ರಾಣ ಬೇಕಾದರೂ ಬಿಡುತ್ತೇನೆ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಬಿಟ್ಟುಕೊಡುವುದಿಲ್ಲ ಎಂದು ಡಿಕೆಶಿ ಸಮರ ಸಾರಿದ್ದರು. 

ಮೆಡಿಕಲ್ ಕಾಲೇಜು ಕಿಚ್ಚು: ಡಿಕೆಶಿ-ಸುಧಾಕರ್ ಮಧ್ಯೆ ಕಿಡಿ ಇಟ್ಟ ಯಡಿಯೂರಪ್ಪ..!

ಮೈತ್ರಿ ಸರ್ಕಾರದ ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ, ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು. ಆದ್ರೆ, ಇಂದು [ಗುರುವಾರ] ನಡೆದ ಸಚಿವ ಸಂಪುಟ ಸಭೆಯಲ್ಲಿ ಮೆಡಿಕಲ್ ಕಾಲೇಜನ್ನು ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಲು ನಿರ್ಧರಿಸಲಾಯಿತು. ಈ ಮೂಲಕ ಟ್ರಬಲ್ ಶೂಟರ್ ಡಿಕೆಶಿಗೆ ಹಿನ್ನಡೆಯಾದ್ರೆ ಸುಧಾಕರ್ ಮೆಡಿಕಲ್ ಯುದ್ಧದಲ್ಲಿ ಗೆದ್ದು ಬೀಗಿದರು.

 ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅನರ್ಹ ಶಾಸಕ ಸುಧಾಕರ್, ಮಂಚೇನಹಳ್ಳಿ ಜನರ ವನವಾಸ ಇಂದಿಗೆ ಕೊನೆಯಾಗಿದೆ. ಹಲವು ವರ್ಷಗಳ ಹೋರಾಟದ ಬೆನ್ನಲ್ಲೇ ಇಂದು ಮಂಚೇನಹಳ್ಳಿ ತಾಲೂಕು ಆಗಿ ಘೋಷಣೆಯಾಗಿದೆ. ನನ್ನ ಜನರಿಗೆ ನಾನು ನೀಡಿದ ಭರವಸೆ ಈಡೇರಿಸಿರುವ ನೆಮ್ಮದಿ ಇಂದು ನನಗಿದೆ ಎಂದು ಬರೆದುಕೊಂಡಿದ್ದಾರೆ.

ಪ್ರತಿಷ್ಠೆಯಾದ ಮೆಡಿಕಲ್ ಕಾಲೇಜ್: ಡಿಕೆಶಿಗೆ ಡಿಚ್ಚಿ ಕೊಡಲು ಸುಧಾಕರ್ ಮೈಲೇಜ್

ಇಂದು ನನಗೆ ದೀಪಾವಳಿ ಹಬ್ಬ, ವರ್ಷಗಳ ನಮ್ಮ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ನಮ್ಮ ಜಿಲ್ಲೆಯ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜು ಹಾಗೂ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿರುವ ಯಡಿಯೂರಪ್ಪ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. 

ಹಾಗೂ ಹೊಸ ತಾಲೂಕಿಗಾಗಿ ಸುದೀರ್ಘಾವಧಿಯ ಹೋರಾಟ ನಡೆಸಿದ ನನ್ನ ಮಂಚೇನಹಳ್ಳಿಯ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕುತೂಹಲ ಮೂಡಿಸಿದ ಡಿಕೆಶಿಯ ಮುಂದಿನ ನಡೆ..
ಹೌದು...ಡಿಕೆ ಶಿವಕುಮಾರ್ ರಾಜಕೀಯ ವಿಷಯದಲ್ಲಿ ಅಷ್ಟೂ ಸುಲಭವಾಗಿ ಸೋಲೋಪ್ಪಿಕೊಳ್ಳುವ ನಾಯಕ ಅಲ್ಲ. ಮೆಡಿಕಲ್ ಕಾಲೇಜು ಕಿತ್ತುಕೊಂಡಿದ್ದಕ್ಕೆ ಡಿಕೆಶಿ ಮುಂದಿನ ನಡೆ ಏನು ಎನ್ನುವುದು ಮಾತ್ರ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಯಾಕಂದ್ರೆ ಮೊನ್ನೇ ಅವರೇ ಹೇಳಿದಂತೆ ವಿಧಾನಸೌಧದಲ್ಲಿ ನನ್ನ ಪ್ರಾಣ ಹೋದರೂ ಪರವಾಗಿಲ್ಲ. ಆದ್ರೆ ಮೆಡಿಕಲ್ ಕಾಲೇಜನ್ನು ಮಾತ್ರ ಬಿಟ್ಟುಕೊಡಲ್ಲ. ಇದಕ್ಕಾಗಿ ಹೋರಾಟ ಮಾಡಲು ಸಿದ್ಧ ಎಂದು ಘಂಟಾಘೋಷವಾಗಿ ಹೇಳಿದ್ದರು. 

ಆದ್ರೆ, ಇದೀಗ ಮೆಡಿಕಲ್ ಕಾಲೇಜು ಕನಸು ನುಚ್ಚುನೂರಾಗಿದ್ದು, ಮುಂದಿನ ದಿನಗಳಲ್ಲಿ ಬಿಎಸ್ ವೈ ವಿರುದ್ಧ ಬೀದಿಗಿಳಿಯುತ್ತಾರಾ ಎನ್ನುವುದನ್ನು ಕಾದನೋಡಬೇಕಿದೆ.

ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: