ಬಿಜೆಪಿ ಸರ್ಕಾರ ಪರಿಶಿಷ್ಟರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಮೋಸ ಮಾಡಿದೆ. 

ಬೆಂಗಳೂರು(ಆ.06): ‘ಬಿಜೆಪಿಯೇ ಮೋಸ, ಮೋಸಕ್ಕೆ ಮತ್ತೊಂದು ಹೆಸರು ಬಿಜೆಪಿ. ಅವರಿಗೆ ಅನುಕೂಲವಾಗುವ ರೀತಿ ಬಿಬಿಎಂಪಿ ಮೀಸಲಾತಿ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಅನ್ಯಾಯದ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಯ ಮೀಸಲಾತಿ ಪಟ್ಟಿ ಜನಸಂಖ್ಯೆಗೆ ಅನುಗುಣವಾಗಿ ಮಾಡಬೇಕಿತ್ತು. ಆದರೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬಾರದು ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸಾಮಾಜಿಕ ನ್ಯಾಯ ಗಾಳಿಗೆ ತೂರಿ ಪಟ್ಟಿ ಪ್ರಕಟಿಸಲಾಗಿದೆ ಎಂದು ಕಿಡಿ ಕಾರಿದರು.

ಬಿಜೆಪಿ ಸರ್ಕಾರ ಪರಿಶಿಷ್ಟರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಮೋಸ ಮಾಡಿದೆ. ಬಿಜೆಪಿಯವರು ಏನೇ ಮಾಡಲಿ, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರ ನಿರ್ಧಾರ ಖಂಡಿಸಿ ಕಾಂಗ್ರೆಸ್‌ ನಾಯಕರು ನಗರಾಭಿವೃದ್ಧಿ ಕಚೇರಿಗೆ ಹೋಗಿ ಅಲ್ಲಿ ಬಿಜೆಪಿ ಕಚೇರಿ ಎಂದು ನಾಮಫಲಕ ಹಾಕಿ ಬಂದಿದ್ದಾರೆ. ಇದು ನಮ್ಮ ಪಕ್ಷದ ಒಗ್ಗಟ್ಟಿನ ಹೋರಾಟ. ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಬೆಂಗಳೂರು ನಾಯಕರ ಹೋರಾಟ ಮುಂದುವರಿಯಲಿದೆ ಎಂದರು.

ನಾನು ಕೈ ಎತ್ತಿಸಿಕೊಂಡು ಹಾಕಿಸಿಕೊಳ್ಳಲಿಲ್ಲವೇ, ಸಿದ್ದು-ಡಿಕೆಶಿಗೆ ತಿವಿದ ಕುಮಾರಸ್ವಾಮಿ

ವಾಮ ಮಾರ್ಗದಲ್ಲಿ ಪಾಲಿಕೆ ಅಧಿಕಾರ ಹಿಡಿಯಲು ಬಿಜೆಪಿ ಯತ್ನ: ಕಾಂಗ್ರೆಸ್‌

ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲಿನ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿಗಳು ಸ್ಪರ್ಧೆ ಮಾಡಬಾರದು ಎಂಬ ಉದ್ದೇಶವನ್ನು ಇಟ್ಟುಕೊಂಡು ಮೀಸಲಾತಿ ಪಟ್ಟಿಮಾಡಿದ್ದಾರೆ. ತನ್ಮೂಲಕ ಷಡ್ಯಂತ್ರ ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ವಿವಿಧ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾರ್ಡ್‌ ವಿಂಗಡಣೆ ವೇಳೆ 3 ಸಾವಿರ ಆಕ್ಷೇಪಣೆಗಳು ಬಂದರೂ ನಿಯಮ ಬಾಹಿರವಾಗಿ ವಿಂಗಡಣೆ ಮಾಡಿದ್ದರು. ಇದೀಗ ನಿಯಮ ಬಾಹಿರವಾಗಿ ಬಿಬಿಎಂಪಿ ಮೀಸಲಾತಿ ಪ್ರಕಟಿಸಿದ್ದಾರೆ ಎಂದು ಹೇಳಿದರು.

ನಮಗೆ ನ್ಯಾಯಾಲಯದ ಮೊರೆ ಹೋಗಲು ಹಾಗೂ ಚುನಾವಣೆ ಮುಂದೂಡಲು ಇಷ್ಟವಿಲ್ಲ. ನಾವು ಚುನಾವಣೆ ಎದುರಿಸಲು ಸಿದ್ಧವಿದ್ದೇವೆ. ಆದರೆ, ಈ ಮಟ್ಟಿಗೆ ಅನ್ಯಾಯವನ್ನು ಸಹಿಸಲೂ ಸಾಧ್ಯವಿಲ್ಲ. ಹೋಗಾಗಿ ಹೋರಾಟ ಮಾಡುತ್ತೇವೆ ಎಂದರು.

ಬಿಟಿಎಂ ಬಡಾವಣೆಯಲ್ಲಿ ಕ್ಷೇತ್ರದಲ್ಲಿ 9 ವಾರ್ಡ್‌ಗಳಲ್ಲಿ 8 ವಾರ್ಡ್‌ ಮಹಿಳೆಯರಿಗೆ ಮೀಸಲು ಮಾಡಿದ್ದಾರೆ. ಜಯನಗರದಲ್ಲಿ 6ರಲ್ಲಿ 5, ಗಾಂಧಿ ನಗರ ಕ್ಷೇತ್ರದಲ್ಲಿ 7ಕ್ಕೆ 7, ಚಾಮರಾಜ ಪೇಟೆಯಲ್ಲಿ 6ರಲ್ಲಿ 5 ವಾರ್ಡ್‌ ಮಹಿಳಾ ಮೀಸಲಾತಿ ನೀಡಿದ್ದಾರೆ. ಕಾಂಗ್ರೆಸ್‌ ಶಾಸಕರಿರುವ ಒಟ್ಟು 87 ವಾರ್ಡ್‌ಗಳಲ್ಲಿ 67 ವಾರ್ಡ್‌ ಮಹಿಳಾ ಮೀಸಲು ಮಾಡಲಾಗಿದೆ. ಜೆಡಿಎಸ್‌ನ 1 ವಿಧಾನಸಭಾ ಕ್ಷೇತ್ರದ 12 ವಾರ್ಡ್‌ಗಳಲ್ಲಿ 9 ವಾರ್ಡ್‌ ಮಹಿಳೆಯರಿಗೆ ಮೀಸಲಿಸಲಾಗಿದೆ. ತನ್ಮೂಲಕ ಬಿಜೆಪಿಯವರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಇನ್ನು ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿಯನ್ನು ಜನಸಂಖ್ಯೆ ಅನುಗುಣವಾಗಿ ಮಾಡಬೇಕಿತ್ತು. ಆದರೆ ಆ ರೀತಿ ಮಾಡದೇ ಮನಸ್ಸಿಗೆ ಬಂದಂತೆ ಮಾಡಿದ್ದಾರೆ. ತನ್ಮೂಲಕ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. ನಾವು ಈ ಮೀಸಲಾತಿ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತೇವೆ. ಚುನಾವಣೆ ಮುಂದೂಡುವುದು ನಮಗೆ ಇಷ್ಟವಿಲ್ಲದಿದ್ದರೂ, ಅನ್ಯಾಯ ಪ್ರಶ್ನಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಎಚ್‌.ಎಂ.ರೇವಣ್ಣ, ಶಾಸಕ ರಿಜ್ವಾನ್‌ ಅರ್ಷದ್‌ ಸೇರಿದಂತೆ ಹಲವರು ಹಾಜರಿದ್ದರು.

ಸಿದ್ದರಾಮಯ್ಯ- ಡಿಕೆಶಿ ನಡುವೆ ದೋಸ್ತಿ ಬೆಸೆಯಿತಾ ಸಿದ್ದರಾಮೋತ್ಸವ...?

‘ಸಿಎಂ’ ಬಿಜೆಪಿ ಶಾಸಕರ ಕೈ ಗೊಂಬೆ: ಡಿಕೇಸು

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಬಿಜೆಪಿಯು ಸೋಲಿನ ಭೀತಿಯಿಂದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಮೀಸಲಾತಿ ಪಟ್ಟಿಪ್ರಕಟಿಸಿದೆ. ಆ ಮೂಲಕ ಇಡೀ ಬೆಂಗಳೂರು ಜನರಿಗೆ ದ್ರೋಹ ಎಸಗಿದೆ. ಇದರಲ್ಲಿ ಬೆಂಗಳೂರು ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳ ಕೈವಾಡ ಕಾಣುತ್ತಿದ್ದು, ಅವರು ಬಿಜೆಪಿ ಶಾಸಕರ ಕೈಗೊಂಬೆಯಾಗಿದ್ದಾರೆ. ಮೀಸಲಾತಿ ಪಟ್ಟಿಪ್ರಕಟಿಸಲು ಏಳು ದಿನಗಳ ಗಡುವು ನೀಡಿದ್ದರೂ ಕಾಂಗ್ರೆಸ್‌ ಸೋಲಿಸಲು ರಾಜಕೀಯ ಉದ್ದೇಶದಿಂದ ಈ ರೀತಿ ಮೀಸಲಾತಿ ಘೋಷಿಸಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯಲ್ಲಿ ಆಂತರಿಕ ಗದ್ದಲ: ದಿನೇಶ್‌

ದಿನೇಶ್‌ಗುಂಡೂರಾವ್‌ ಮಾತನಾಡಿ, ಬಿಜೆಪಿಯವರು ಅವರಲ್ಲಿರುವ ಪ್ರಬಲ ನಾಯಕರನ್ನೇ ಮುಗಿಸಲು ಮುಂದಾಗಿದ್ದಾರೆ. ಬಿಜೆಪಿ ಶಾಸಕರಿಗೆ ಸವಾಲಾಗಬಲ್ಲ ಬಿಬಿಎಂಪಿಯ ಬಿಜೆಪಿ ಹಿರಿಯ ಸದಸ್ಯರಾಗಿದ್ದವರಿಗೆ ಟಿಕೆಟ್‌ ತಪ್ಪಿಸಲಾಗಿದೆ. ಹೀಗಾಗಿ ಆಂತರಿಕ ಗದ್ದಲ ಜೋರಾಗಿದೆ. ಕಾಂಗ್ರೆಸ್‌ ಸರ್ಕಾರ ಇದ್ದಾಗ ಆಗದ ಅನ್ಯಾಯ ಬಿಜೆಪಿಯಲ್ಲಿ ಆಗುತ್ತಿದೆ. ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ನಗರವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಿಜೆಪಿಯವರೇ ಟೀಕಿಸುತ್ತಿದ್ದಾರೆ ಎಂದರು.
ಜಮೀರ್‌ ಅಹಮದ್‌ಖಾನ್‌ ಮಾತನಾಡಿ, ನನ್ನ ಕ್ಷೇತ್ರದಲ್ಲಿ 6ಕ್ಕೆ 6 ಮಹಿಳಾ ಮೀಸಲು ಮಾಡಿದ್ದಾರೆ. ಆಜಾದ್‌ ನಗರದಲ್ಲಿ ಎಸ್‌.ಟಿ. ಜನಸಂಖ್ಯೆ 350ರಿಂದ 400 ಇರಬಹುದು. ಅಲ್ಲಿ ಎಸ್‌ಟಿಗೆ ನೀಡಿದ್ದಾರೆ. ಕಾಂಗ್ರೆಸ್‌ ಗೆಲ್ಲಲಿದೆ ಎಂಬ ಭಯಕ್ಕೆ ಈ ರೀತಿ ಮಾಡಿದ್ದಾರೆ ಎಂದು ಕಿಡಿ ಕಾರಿದರು.