ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಡಿ.ಕೆ. ಶಿವಕುಮಾರ್ ಅವರು, ಸಿದ್ದರಾಮಯ್ಯ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ರಹಸ್ಯವಾಗಿ ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಆದರೆ, ತಾವು ಸಿದ್ದರಾಮಯ್ಯನವರನ್ನು ಬಿಟ್ಟು ಬರುವುದಿಲ್ಲ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ನ.26): ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ರಹಸ್ಯವಾಗಿ ಭೇಟಿ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ರಾತ್ರಿ (ನ.25) ಡಿ.ಕೆ.ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದು, ರಾಜಕೀಯದ ಈ ಸೂಕ್ಷ್ಮ ಘಟ್ಟದಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಡಿ.ಕೆ. ಶಿವಕುಮಾರ್ ಅವರು ಜಾರಕಿಹೊಳಿ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಿಎಂ ಆಗುವ ಅವಕಾಶ ಇದೆ, ಬೆಂಬಲಿಸಿ
ನಿನ್ನೆ ರಾತ್ರಿ ನಡೆದ ಮಾತುಕತೆಯ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು, 'ನನಗೆ ಸಿಎಂ ಆಗುವ ಅವಕಾಶ ಇದೆ. ಒಂದು ವೇಳೆ ಹೈಕಮಾಂಡ್ ನನ್ನನ್ನು ಸಿಎಂ ಎಂದು ನಿರ್ಧರಿಸಿದರೆ, ನೀವು ನನಗೆ ಸಂಪೂರ್ಣ ಬೆಂಬಲ ನೀಡಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಡಿಸಿಎಂ ಆಗಿ ಮುಂದುವರೆಯುವ ಕುರಿತು ಚರ್ಚೆ ನಡೆದಿದೆ. ನಿಮ್ಮ ವಿಶ್ವಾಸವನ್ನು ಹೀಗೆಯೇ ಮುಂದುವರೆಸುತ್ತೇನೆ' ಎಂದು ಕೋರಿದ್ದಾರೆ. ಅಲ್ಲದೆ, 'ಈ ಹಿಂದೆ ಐದು ಜನರ ಮುಂದೆ ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆದಿತ್ತು' ಎಂಬುದನ್ನೂ ಜಾರಕಿಹೊಳಿ ಅವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಬಿಟ್ಟು ಬರಲು ನಾವು ಆಗಲ್ಲ: ಜಾರಕಿಹೊಳಿ
ಡಿ.ಕೆ. ಶಿವಕುಮಾರ್ ಅವರ ಈ ಮನವಿಗೆ ಸತೀಶ್ ಜಾರಕಿಹೊಳಿ ಅವರು ಅತ್ಯಂತ ಸ್ಪಷ್ಟವಾದ ಉತ್ತರ ನೀಡಿದ್ದಾರೆ ಎನ್ನಲಾಗಿದೆ. 'ನಾವು ಸಿದ್ದರಾಮಯ್ಯನವರನ್ನು ಬಿಟ್ಟು ಬರಲು ಆಗುವುದಿಲ್ಲ. ನಾವಾಗಿಯೇ ಇವರನ್ನ ಮಾಡಿ, ಅವರನ್ನ ಮಾಡಿ ಎಂದು ಹೇಳುವುದಿಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ನೇರವಾಗಿಯೇ ತಿಳಿಸಿದ್ದಾರೆ. ಇದರೊಂದಿಗೆ, ತಮ್ಮ ರಾಜಕೀಯ ನಿರ್ಧಾರವು ಸಿದ್ದರಾಮಯ್ಯ ಅವರ ಜೊತೆಗಿನ ವಿಶ್ವಾಸವನ್ನು ಅವಲಂಬಿಸಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಭೇಟಿ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ
ರಾತ್ರಿ ನಡೆದ ಭೇಟಿ ಕುರಿತು ಇಂದು (ನ.26) ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ, ಯಾವುದೇ ರೀತಿಯ 'ಬದಲಾವಣೆ ಪರ್ವ' ಇಲ್ಲ ಎಂದು ಸ್ಪಷ್ಟಪಡಿಸಿದರು. ಡಿ.ಕೆ. ಶಿವಕುಮಾರ್ ಅವರು ಸಹಜವಾಗಿ ಎಲ್ಲರನ್ನೂ ಭೇಟಿ ಮಾಡುತ್ತಿದ್ದಾರೆ. ನನ್ನನ್ನೂ ಕೂಡ ಭೇಟಿ ಮಾಡಿದ್ದಾರೆ ಅಷ್ಟೇ. ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ತಕ್ಷಣ ನಮ್ಮ ವಿಚಾರಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ನಾವು ಪಕ್ಷದ ಜೊತೆಗೆ ಇರುತ್ತೇವೆ ಮತ್ತು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ನಾವು ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿದ್ದೇವೆ. ಹಿಂದೆಯೂ ಅವರ ಜೊತೆ ಇದ್ದೇವೆ, ಮುಂದೆಯೂ ಇರುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ' ಎಂದು ಸತೀಶ್ ಜಾರಕಿಹೊಳಿ ತಮ್ಮ ನಿಲುವನ್ನು ಪುನರುಚ್ಚರಿಸಿದರು.
ಒಟ್ಟಾರೆಯಾಗಿ, ಈ ರಹಸ್ಯ ಭೇಟಿಯು ರಾಜ್ಯ ಕಾಂಗ್ರೆಸ್‌ನೊಳಗೆ ನಾಯಕತ್ವ ಬದಲಾವಣೆಯ ಕುರಿತು ನಡೆಯುತ್ತಿರುವ ಆಂತರಿಕ ಚರ್ಚೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದು, ಸಿದ್ದರಾಮಯ್ಯ ಪಾಳಯ ತನ್ನ ನಿಲುವನ್ನು ಗಟ್ಟಿಯಾಗಿ ಉಳಿಸಿಕೊಂಡಿರುವುದು ಸ್ಪಷ್ಟವಾಗಿದೆ.


