ಬೆಂಗಳೂರು, (ಮೇ.04): ಕರ್ನಾಟಕ ಕಾಂಗ್ರೆಸ್‌ನಿಂದ ಕೆಎಸ್‌ಆರ್‌ಟಿಸಿ ಕೊಡಲು ಬಂದ 1 ಕೋಟಿ ರೂ. ಚೆಕ್‌ ನಕಲಿ ಎಂದಿರುವ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ಉತ್ತರ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿ ಡಿಕೆಶಿ, ಅಶೋಕಣ್ಣ ನಮ್ಮ ಚೆಕ್ ನಕಲಿ ಎಂದಿದ್ದಾರೆ. ಚೆಕ್ ಮೇಲೆ ನನ್ನ ಸಹಿ ಇಲ್ಲ ಸರಿ. ಆದ್ರೆ, ದಿನೇಶ್ ಗುಂಡೂರಾವ್ ಅವರ ಸಹಿ ಇದೆಯಲ್ಲ. ಅಲ್ಲಿ ಯಾರ ಸಹಿ ಇದೆ ಎಂಬುವುದು ನಮ್ಮ ಪಕ್ಷದ ವಿಚಾರ ಎಂದು ಸ್ಪಷ್ಟಪಡಿಸಿದರು. 

'ಕೆಎಸ್‌ಆರ್‌ಟಿಸಿಗೆ ಕಾಂಗ್ರೆಸ್ ಕೊಟ್ಟ 1 ಕೋಟಿ ರೂ. ಚೆಕ್ ನಕಲಿ'

ಚೆಕ್‌ನ್ನು ನಕಲಿ ಎಂದು ಹೇಳುವುದು ಎಷ್ಟು ಸರಿ? ನಮ್ಮ ಪಕ್ಷದ ಮುಖಂಡರ ಹಿನ್ನೆಲೆ ನೋಡಿ ಅವರು ಮಾತನಾಡಬೇಕು ಎಂದು ತಿರುಗೇಟು ನೀಡಿದರು. ಇದೇ ವೇಳೆ ಕಾಂಗ್ರೆಸ್‌ನವರು 100 ಕೋಟಿ ರೂ. ನೀಡಲಿ ಎಂದು ಅಶೋಕ್ ಹಾಕಿರುವ ಸವಾಲಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಅಶೋಕ್ ನಮಗೆ ಬೆಲೆ ಕಟ್ಟುತ್ತಿದ್ದಾರೆ. ಆದ್ರೆ, ನಾವು ಆಗೆ ಬೆಲೆ ಕಟ್ಟೋದಿಲ್ಲ ಎಂದು ಹೇಳಿದರು.

ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ವಲಸಿಗ ಕಾರ್ಮಿಕರಿಗೆ ತಮ್ಮ ಗೂಡಿಗೆ ತೆರಳಲು ಅನುಮತಿ ನೀಡಿ, ರಾಜ್ಯದಲ್ಲಿ ನಿಗದಿತ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಇದಕ್ಕೂ ಮೊದಲು ರಾಜ್ಯ ಸರ್ಕಾರ ದುಪ್ಪಟ್ಟು ದರ ನಿಗದಿ ಮಾಡಿತ್ತು. 

ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್, ಮೆಜೆಸ್ಟಿಕ್‌ಗೆ ಲಗ್ಗೆ ಇಟ್ಟು ಕಾರ್ಮಿಕರನ್ನು ಸಂತೈಹಿಸುವ ಕೆಲಸ ಮಾಡಿತ್ತು.ಅಲ್ಲದೇ ಕಾರ್ಮಿಕರಿಗೆ ಉಚಿತವಾಗಿ ಹೋಗಲು ಒಂದು ಕೋಟಿ ರೂ. ಚೆಕ್ ನೀಡುವುದಾಗಿ ಹೇಳಿ ಗಮನಸೆಳೆದಿತ್ತು.