Karnataka Politics: ಡಿಕೆ ಸುರೇಶ್-ಅಶ್ವತ್ಥ್ ನಾರಾಯಣ ಕಿತ್ತಾಟ, ಗುಡುಗಿದ ಡಿಕೆ ಶಿವಕುಮಾರ್
* ಡಿಕೆ ಸುರೇಶ್ ಹಾಗೂ ಅಶ್ವತ್ಥ್ ನಾರಾಯಣ ಮಧ್ಯೆ ಜಗಳ
* ರಾಮನಗರದ ಬಹಿರಂಗ ಕಾರ್ಯಕ್ರಮದ ವೇದಿಕೆಯಲ್ಲಿ ಕಿತ್ತಾಡಿಕೊಂಡ ನಾಯಕರು
* ಉಭಯ ನಾಯಕರ ಕಿತ್ತಾಟಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಮೈಸೂರು, (ಜ.03): ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಎದುರೇ ಸಚಿವ ಅಶ್ವತ್ಥ ನಾರಾಯಣ(Dr CN Ashwath narayan) ಹಾಗೂ ಸಂಸದ ಡಿ.ಕೆ.ಸುರೇಶ್ ನಡುವೆ ನಡೆದ ಗಲಾಟೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗಿದದ್ದಾರೆ.
ಇಂದು (ಸೋಮವಾರ) ಮೈಸೂರಿನಲ್ಲಿ(Mysuru) ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ರಾಮನಗರಕ್ಕೂ ಸಚಿವ ಅಶ್ವತ್ಥ ನಾರಾಯಣ ಅವರಿಗೂ ಏನು ಸಂಬಂಧ, ರಾಮನಗರ ಜಿಲ್ಲೆಗೆ ಇವರ ಕೊಡುಗೆ ಏನು ಎಂದು ಪಟ್ಟಿ ಬಿಡುಗಡೆ ಮಾಡಲಿ ಎಂದು ಅಶ್ವತ್ಥ ನಾರಾಯಣಗೆ ಸವಾಲು ಹಾಕಿದರು.
Political Fight: ಮುಖ್ಯಮಂತ್ರಿ ಎದುರೇ ಹೊಡೆದಾಟಕ್ಕೆ ಮುಂದಾದ ಸಂಸದ-ಮಿನಿಸ್ಟರ್
ರಾಮನಗರ(Ramanagara) ಜಿಲ್ಲೆಗೂ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಏನು ಗೊತ್ತು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೊತ್ತು ಹಾಗಾಗಿ ಅವರು ತಾಲ್ಲೂಕು ಕಚೇರಿ ಸೇರಿದಂತೆ ಹಲವು ಕಟ್ಟಡಗಳನ್ನು ನೀಡಿದ್ದಾರೆ. ಆದರೆ ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ ಎಂದು ಹೇಳಿದರು.
ಬಿಜೆಪಿ ಯವರು ಬರೀ ಸುಳ್ಳುಗಳನ್ನೇ ಹೇಳುತ್ತಾರೆ. ಅವರ ಮಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬಾರದು, ಸಚಿವ ಅಶ್ವತ್ಥ ನಾರಾಯಣ ಏನು ಸಾಧನೆ ಮಾಡಿದ್ದಾರೆ ಎಂದು ತಿಳಿಸಲಿ ಎಂದು ಒತ್ತಾಯಿಸಿದರು.
ಅಷ್ಟಕ್ಕೂ ಆಗಿದ್ದೇನು?
ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ' ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು ಗಂಡಸು ಅನ್ನೋನು' ಎಂದು ಪ್ರಚೋದಿಸಿದರು.
ಇದರಿಂದ ಕುಪಿತಗೊಂಡ ಸುರೇಶ್ ' ನನ್ನ ಗಂಡಸ್ಥನ ತೋರಿಸಲ' ಎಂದು ಅಶ್ವತ್ಥನಾರಾಯಣರತ್ತ ನುಗ್ಗಿದರು. ಇದರಿಂದ ಗಲಾಟೆ ಜೋರಾಯಿತು. ಬಳಿಕ ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು.
ಡಿಕೆ ಸುರೇಶ್ ಸ್ಪಷ್ಟನೆ
ಮಂತ್ರಿಗಳು ಮಂತ್ರಿಗಳ ರೀತಿ ನಡೆದುಕೊಳ್ಳಲಿಲ್ಲ. ಸಚಿವರು ಸವಾಲೆಸೆದು ಕರೆದಾದ ಸುಮ್ಮನೆ ಕೂರಲು ಆಗಲಿಲ್ಲ. ಇದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಆದರೆ, ಇದು ಬಿಜೆಪಿ ಕಾರ್ಯಕ್ರಮದಂತೆ ಕಾಣುತ್ತಿತ್ತು. ರಾಮನಗರ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಪಡೆದಿದ್ದಾರೆ. ಇಲ್ಲಿ ಹಾಕಿರುವ ಎಲ್ಲಾ ಕಲ್ಲುಗಳನ್ನು ನಾವು ತಂದಿದ್ದೆವು. ಸಚಿವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ವೀರಾವೇಷ ಪ್ರದರ್ಶಿಸಿದಾಗ ಸುಮ್ಮನಿರಲಾಗಲಿಲ್ಲ. ಸಿಎಂ ಸಮ್ಮುಖದಲ್ಲಿ ವೇದಿಕೆಯಲ್ಲೇ ಅವರಿಗೆ ಉತ್ತರ ಕೊಟ್ಟಿದ್ದೇವೆ ಎಂದು ಘಟನೆ ಬಳಿಕ ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ತಮ್ಮ ಎದುರಲ್ಲೇ ಸಚಿವ ಡಾ, ಸಿಎನ್ ಅಶ್ವತ್ಥ ನಾರಾಯಣ (Dr CN Ashwath Narayan) ಹಾಗೂ ಡಿಕೆ ಸುರೇಶ್(DK Suresh) ನಡುವೆ ಗಲಾಟೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಈ ಘಟನೆಗಳು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲ್ಲ. ಚುನಾವಣೆಗೆ 1 ತಿಂಗಳಿರುವಾಗ ರಾಜಕಾರಣ ಮಾಡೋಣ ಎಂದರು.
ರಾಮನಗರ(Ramanagara) ಜಿಲ್ಲೆ ಕರ್ನಾಟಕಕ್ಕೆ ಮಾದರಿಯಾಗುವ ಜಿಲ್ಲೆ. ಅಭಿಮಾನ, ಸಂತಸದಿಂದ ರಾಮನಗರಕ್ಕೆ ಬಂದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಚುನಾವಣೆಯ 1 ತಿಂಗಳು ಮಾತ್ರ ರಾಜಕಾರಣ ಮಾಡೋಣ. ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ. ರಾಮನಗರ ಜಿಲ್ಲೆಗೆ ಕೊಡುಗೆ ಕೊಡಲು ಇಲ್ಲಿಗೆ ಬಂದಿದ್ದೇನೆ. ಹಲವಾರು ವಿಚಾರಗಳು ನನೆಗುದಿಗೆ ಬಿದ್ದಿರುವುದು ಗೊತ್ತಿದೆ. ಜನರು ರಾಜಕಾರಣ ಮಾಡುವುದನ್ನು ಕಲಿಯಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.