ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗೋದು ಖಚಿತ: ಕೆ.ಎಸ್.ಈಶ್ವರಪ್ಪ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿರುವ ಸಿಬಿಐ ಕೇಸ್ ವಾಪಸ್ ಪಡೆಯಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅವರು ಜೈಲಿಗೆ ಹೋಗುವುದು ನಿಶ್ಚಿತ.
ಹಾವೇರಿ (ಡಿ.01): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲಿರುವ ಸಿಬಿಐ ಕೇಸ್ ವಾಪಸ್ ಪಡೆಯಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅವರು ಜೈಲಿಗೆ ಹೋಗುವುದು ನಿಶ್ಚಿತ. ಆದರೆ ಲೋಕಸಭೆ ಚುನಾವಣೆಗೆ ಮೊದಲೋ ಅಥವಾ ನಂತರವೋ ಎಂಬುದು ತೀರ್ಮಾನ ಆಗಬೇಕಷ್ಟೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರ ಜತೆಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ಕೇಸ್ ಮುಂದುವರೆಸಲು ಅಭ್ಯಂತರ ಇಲ್ಲ ಎಂದು ಕೋರ್ಟ್ ಹೇಳಿದೆ.
ಅವರ ಮೇಲಿನ ತನಿಖೆ ಶೇ.90 ಮುಗಿದಿದ್ದು. ಚಾರ್ಜ್ ಶೀಟ್ ಸಲ್ಲಿಕೆ ಮಾತ್ರ ಬಾಕಿ ಇದೆ. ಮೇಲ್ನೋಟಕ್ಕೆ ಸ್ಪಷ್ಟವಾಗಿ ಅಕ್ರಮ ಹಣ ಸಂಪಾದನೆ ಬಹಿರಂಗ ಆಗಿದೆ. ಹೀಗಾಗಿ ಅವರು ಜೈಲಿಗೆ ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು. ಸರ್ಕಾರವೇ ಬಿದ್ದು ಹೋಗುತ್ತೆ: ಜಾತಿಗಣತಿ ಬಿಡುಗಡೆ ಮಾಡಿದ ದಿನವೇ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ. ಜಾತಿ ಜನಗಣತಿ ವಿಚಾರದಲ್ಲಿ ಸಮಸ್ಯೆ ಸೃಷ್ಟಿ ಮಾಡಿದವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಕಿಡಿಕಾರಿದರು.
ಸೋನಿಯಾಗಾಂಧಿಗೆ ತಲೆಬಾಗಲಿಲ್ಲವೆಂದು ಜೈಲಿಗೆ ಹೋಗಬೇಕಾಯ್ತು: ಜನಾರ್ದನ ರೆಡ್ಡಿ
ಸಚಿವ ಸಂಪುಟವು ಕಳ್ಳರ ಗ್ಯಾಂಗ್: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಣಯ ಕಾನೂನು ಬಾಹಿರ, ಸಿದ್ದರಾಮಯ್ಯ ಅವರ ಸರ್ಕಾರದ ಇಡೀ ಸಂಪುಟ ಸಭೆಯು ಕಳ್ಳರ ಗ್ಯಾಂಗ್ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗಂಭೀರವಾದ ಆರೋಪ ಮಾಡಿದರು. ಅವರು ಸಮೀಪದ ಹುಲ್ಲೂರ ಗ್ರಾಮದಲ್ಲಿ ಅಮೋಘ ಸಿದ್ದೇಶ್ವರ ನೂತನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಪಟ್ಟಣದ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿಕೆಶಿ ಮೇಲಿನ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧ ಪಟ್ಟಂತೆ ಸಿಬಿಐಗೆ ವಹಿಸಿರುವ ಪ್ರಕರಣವನ್ನು ಸಿದ್ದರಾಮಯ್ಯ ಅವರ ಸಚಿವ ಸಂಪುಟವು ವಾಪಸ್ ತೆಗೆದುಕೊಳ್ಳಲು ನಿರ್ಣಯ ತೆಗೆದುಕೊಂಡಿರುವುದು ಕಾಂಗ್ರೆಸ್ ಅವನತಿಯ ಸೂಚಕವಾಗಿದೆ. ಅದಕ್ಕಾಗಿ ಸಿದ್ದರಾಮಯ್ಯ ಸರ್ಕಾರದ ಇಡೀ ಸಚಿವ ಸಂಪುಟ ಕಳ್ಳರ ಗ್ಯಾಂಗ್ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹಾಗೂ ಎಚ್. ಕೆ. ಪಾಟೀಲ ಅವರು ಕಾನೂನಿನ ಜ್ಞಾನವುಳ್ಳವರು, ಅವರು ಹೇಳಲಿ ನೋಡೋಣ, ಸಿಬಿಐಗೆ ವಹಿಸಿರುವ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುತ್ತಿರುವ ದೇಶದಲ್ಲಿ ಮೊದಲ ಪ್ರಕರಣ ಇದು. ಪ್ರಕರಣದ ತನಿಖೆ ಶೇ. 80ರಷ್ಟು ಮುಗಿದಿರುವ ಸಂದರ್ಭದಲ್ಲಿ ಪ್ರಕರಣ ತಡೆಹಿಡಿಯಲು ಡಿಕೆಶಿ ಅವರು ಕೋರ್ಟಿಗೆ ಹೋಗಿ ಬಂದಿದ್ದಾರೆ. ಎಲ್ಲ ಕೋರ್ಟುಗಳಲ್ಲಿ ಅದು ತಿರಸ್ಕೃತವಾಗಿದೆ ಎಂದರು.
ವಿಪಕ್ಷ ನಾಯಕ ಅಶೋಕ್‌ಗೆ ಅವರ ಪಕ್ಷದಲ್ಲೆ ನೆಲೆಯಿಲ್ಲ: ಸಚಿವ ಈಶ್ವರ ಖಂಡ್ರೆ ಲೇವಡಿ
ಡಿ.ಕೆ.ಶಿವಕುಮಾರ ಅವರು ₹ 163 ಕೋಟಿ ಅಕ್ರಮ ಆಸ್ತಿಗಳಿಕೆ ಮಾಡಿಕೊಂಡಿದ್ದಾರೆ. ಐದು ವರ್ಷದಲ್ಲಿ 140 ಕೋಟಿ ರು. ಹೆಚ್ಚುವರಿ ಆಸ್ತಿ ಮಾಡಿಕೊಂಡಿರುವ ಪ್ರಕರಣವನ್ನು ಸಿಬಿಐ ಎತ್ತಿ ತೋರಿಸಿದೆ. ಅಕ್ರಮವಾಗಿ ಲೂಟಿ ಮಾಡಿ ಆಸ್ತಿ ಮಾಡಿಕೊಂಡಿರುವ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು. ಸಿಬಿಐಗೆ ವಹಿಸಿದ್ದ ಪ್ರಕರಣವನ್ನು ವಾಪಸ್ ಪಡೆಯುವುದರ ವಿರುದ್ಧ ಬಿಜೆಪಿ ಕೋರ್ಟಿಗೆ ಹೋಗುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ ಅವರು, ಬಿಜೆಪಿದಲ್ಲಿ ಅಧ್ಯಕ್ಷ ಹುದ್ದೆಯ ಕೆಲ ಆಕಾಂಕ್ಷಿಗಳು ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವುದು ಸಹಜ, ಪಕ್ಷದ ಹಿರಿಯರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದೆ ಹೋಗುತ್ತಾರೆ ಎನ್ನುವ ವಿಶ್ವಾಸ ನಮ್ಮದಾಗಿದೆ ಎಂದರು.