ಬೆಂಗಳೂರು, ಅ.15): ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್ ರಾಜ್ ರನ್ನು ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡುವಂತೆ ಪುಲಿಕೇಶಿ ನಗರ ಕೈ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮೇಯರ್ ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಬಳಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಬೆಂಗಳೂರು ಗಲಭೆ: 'ಸುಟ್ಟ ಶಾಸಕರ ಮನೆ ನೋಡಿ ಖುಷಿಪಟ್ಟ ಮಾಜಿ ಮೇಯರ್‌’ 

ಯಾರೇ ಆಗಲಿ ಅಪರಾಧಿ ಅಪರಾಧಿನೇ. ಯಾರೇ ಅಪರಾಧಿ ಆಗಿದ್ದರೂ ಶಿಕ್ಷೆ ಕೊಡಬೇಕು. ನಾನು ಯಾರ ಜೊತೆಗೂ ದ್ವೇಷದ ರಾಜಕಾರಣ ಮಾಡಿಲ್ಲ.  ಪಬ್ಲಿಕ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಗಲಭೆ ಪ್ರಕರಣ ಸಂಬಂಧ ತನಿಖೆ ಮಾಡುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಕ್ರಮವಾಗಲಿ, ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮವಾಗಲೇಬೇಕು ಎಂದರು.

ನನಗೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಿವೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ನಾನು ಯಾರೊಂದಿಗೂ ದ್ವೇಷದ ರಾಜಕಾರಣ ಮಾಡಲ್ಲ, ಈ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ. ಡಿಜೆ ಹಳ್ಳಿ ಗಲಭೆ ಬಳಿಕ ಸಂಪತ್ ರಾಜ್​ಗೆ ನಾನು ಕರೆ ಮಾಡಿಲ್ಲ, ಅವರೂ ನನಗೆ ಕರೆ ಮಾಡಿಲ್ಲ. ಆದ್ರೆ ಚಾರ್ಜ್ ಶೀಟ್ ಆಧರಿಸಿ ಕ್ರಮ ಕೈಗೊಳ್ಳಿ. ಪಕ್ಷಕ್ಕೆ ಡ್ಯಾಮೇಜ್ ಮಾಡುವವರನ್ನ ಹೊರ ಹಾಕಿ ಎಂದು ಕಾಂಗ್ರೆಸ್​ನ ಪ್ರಮುಖ ನಾಯಕರನ್ನು ಅಖಂಡ ಶ್ರೀನಿವಾಸಮೂರ್ತಿ ಆಗ್ರಹಿಸಿದರು.

ಬೆಂಗಳೂರು ಗಲಭೆ: ಶಾಸಕ ಅಖಂಡ ವಿರುದ್ಧ 3 ತಿಂಗಳಿಂದಲೇ ಮಸಲತ್ತು

3 ತಿಂಗಳ ಹಿಂದೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಪುಂಡರು ನಡೆಸಿದ್ದ ದಾಂಧಲೆಗೆ ರಾಜ್ಯ ರಾಜಧಾನಿಯೇ ಬೆಚ್ಚಿಬಿದ್ದಿತ್ತು. ಘಟನೆಯಲ್ಲಿ ಪುಲಿಕೇಶಿ ನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಂಪತ್ ರಾಜ್ ಅವರ ಹೆಸರು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪತ್ ರಾಜ್‌ ಅವರನ್ನ ಪಕ್ಷದಿಂದ ವಜಾ ಮಾಡಬೇಕೆಂದು ಅಖಂಡ ಒತ್ತಾಯಿಸುತ್ತಿದ್ದಾರೆ.