ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ಸಿನಲ್ಲಿ ಧಗ ಧಗ: ತಾರಕಕ್ಕೇರಿದ ವೈಮನಸ್ಸು..!
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎಚ್. ಆರ್. ಶ್ರೀನಾಥ ಅವರ ನಡುವೆ ಇದ್ದ ಮುಸುಕಿನ ಗುದ್ದಾಟ ಈಗ ಜಗಜ್ಜಾಹೀರಾಗಿದೆ. ಎರಡೂ ಗುಂಪುಗಳು ಪ್ರತ್ಯೇಕ ಸಭೆ ನಡೆಸುವಷ್ಟರ ಮಟ್ಟಿಗೆ ವೈಮನಸ್ಸು ತಾರಕಕ್ಕೇರಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ(ಏ.10): ಲೋಕಸಭಾ ಚುನಾವಣೆ ಹೊಸ್ತಿಲಲ್ಲಿಯೇ ಗಂಗಾವತಿಯಲ್ಲಿ ಕಾಂಗ್ರೆಸ್ ಭಿನ್ನಮತ, ಗುಂಪುಗಾರಿಕೆ ತೀವ್ರವಾಗಿದ್ದು, ಪರಿಸ್ಥಿತಿ ತಣ್ಣಗಾಗುವ ಸಾಧ್ಯತೆ ಕಂಡು ಬರುತ್ತಿಲ್ಲ. ಇದು ಇಡೀ ಲೋಕಸಭಾ ಚುನಾವಣೆಯ ಮೇಲೆ ಅಡ್ಡಪರಿಣಾಮಕ್ಕೆ ದಾರಿಯಾಗುತ್ತಿದೆ. ಇದರಿಂದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಕಳವಳಕ್ಕೀಡಾಗಿದ್ದಾರೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಎಚ್. ಆರ್. ಶ್ರೀನಾಥ ಅವರ ನಡುವೆ ಇದ್ದ ಮುಸುಕಿನ ಗುದ್ದಾಟ ಈಗ ಜಗಜ್ಜಾಹೀರಾಗಿದೆ. ಎರಡೂ ಗುಂಪುಗಳು ಪ್ರತ್ಯೇಕ ಸಭೆ ನಡೆಸುವಷ್ಟರ ಮಟ್ಟಿಗೆ ವೈಮನಸ್ಸು ತಾರಕಕ್ಕೇರಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿನ ಉಳಿದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಇಲ್ಲದ ವಿವಾದ, ಹಗೆತನ ಮತ್ತು ಪರಸ್ಪರ ಮಾತಿನ ಚಕಮಕಿ ಇಲ್ಲಿದ್ದು, ಅದನ್ನು ನಿಭಾಯಿಸುವಲ್ಲಿ ಲೋಕಸಭಾ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹೈರಾಣಾಗಿದ್ದಾರೆ. ಎ. 3ರಂದು ಇಕ್ಬಾಲ್ ಅನ್ಸಾರಿ ಅವರ ನಿವಾಸದಲ್ಲಿ ಸಭೆ ನಡೆಸಿದ ಬೆನ್ನಲ್ಲೇ ಈಗ ಸೋಮವಾರ ಎಚ್.ಜಿ. ರಾಮುಲು ನಿವಾಸದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತ್ಯೇಕ ಸಭೆ ನಡೆಸಲಾಗಿದೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಯಾವ ಸಭೆಗೆ ಹೋಗಬೇಕು ಮತ್ತು ಹೋಗಬಾರದು ಎನ್ನುವ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
ಮೋದಿ ಬರೋ ಮೊದಲು ದೇಶಕ್ಕೆ ಭದ್ರತೆ ಇರಲಿಲ್ವಾ?: ಸಚಿವ ಶಿವರಾಜ ತಂಗಡಗಿ
ಈ ಸಭೆಗೆ ಹೋಗದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಿಯೋ ಮೂಲಕ ಮನವಿ ಮಾಡಿದ್ದರೂ ಕ್ಯಾರೆ ಎನ್ನದೇ ಸಭೆ ನಡೆಸಲಾಯಿತು. ಸಭೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಭಾಗವಹಿಸಿದ್ದರೆ, ಸಚಿವ ಶಿವರಾಜ ತಂಗಡಗಿ ದೂರ ಉಳಿಯುವ ಮೂಲಕ ತಟಸ್ಥ ನಿಲುವು ತಳೆದಿದ್ದಾರೆ.
ಇದು, ವಿಪ ಮಾಜಿ ಸದಸ್ಯ ಹಾಗೂ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರನ್ನು ಕೆಂಡಮಂಡಲವಾಗುವಂತೆ ಮಾಡಿದ್ದು, ಸಚಿವ ಶಿವರಾಜ ತಂಗಡಗಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲ, ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಅವರೇ ಕಾಂಗ್ರೆಸ್ ನಾಯಕ ಎಂದು ಹೇಳಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀನಾಥ ಹಾಗೂ ಮಲ್ಲಿಕಾರ್ಜುನ ನಾಗಪ್ಪ ಚುನಾವಣೆಯ ಬಳಿಕ ಶಿವರಾಜ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ದೂರು ನೀಡುವುದಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಥವಾ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಸಚಿವರನ್ನಾಗಿ ಮಾಡುವಂತೆ ಮನವಿ ಮಾಡುವುದಾಗಿ ಹೇಳಿದ್ದು, ಗಂಗಾವತಿಯ ಬಿಕ್ಕಟ್ಟು ಈಗ ಇಡೀ ಜಿಲ್ಲೆಯನ್ನು ಆವರಿಸುವ ಸಾಧ್ಯತೆ ದಟ್ಟವಾಗುತ್ತಿದೆ.
ಲೋಕಸಭೆ ಚುನಾವಣೆ 2024: ಗುಂಪುಗಾರಿಕೆಯಲ್ಲಿಯೇ ಕಾಂಗ್ರೆಸ್ ಕಾಲಹರಣ..!
ಈ ನಡುವೆ ಇಕ್ಬಾಲ್ ಅನ್ಸಾರಿ ಅವರಂತೂ ಎಚ್.ಜಿ. ರಾಮುಲು ನಿವಾಸದಲ್ಲಿ ನಡೆದ ಸಭೆ ಅಧಿಕೃತವೇ ಅಲ್ಲ ಎಂದಿದ್ದಾರೆ. ಅವರ ಹೆಸರು ಹೇಳದೆ, ಕೆಆರ್‌ಪಿಪಿ ಪಕ್ಷಕ್ಕಾಗಿ ದುಡಿದವರು ಕಾಂಗ್ರೆಸ್ ಸಭೆಯನ್ನು ಹೇಗೆ ನಡೆಸುತ್ತಾರೆ ? ಎಂದೆಲ್ಲ ಕಿಡಿಕಾರಿದ್ದಾರೆ.
ಕೊತ ಕೊತ:
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರ ನಡುವಿನ ಬಿಕ್ಕಟ್ಟು ಈಗ ಕಾಂಗ್ರೆಸ್ ಹೈಕಮಾಂಡ್‌ಗೂ ತಲೆನೋವಾಗಿದೆ. ಇದನ್ನು ಇತ್ಯರ್ಥ ಮಾಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಇಬ್ಬರನ್ನೂ ಕರೆಯಿಸಿ ತಿಳಿ ಹೇಳಿ ಕಳುಹಿಸಿದರೂ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿದ್ದು, ಭಿನ್ನಮತ ಉಲ್ಬಣಗೊಂಡಿದೆ.