ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ್‌, ಡಾ.ಎಚ್‌.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ಎಂ.ಕೃಷ್ಣಪ್ಪ, ಯು.ಟಿ.ಖಾದರ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಹಿರಿಯರು ಅಸಮಾಧಾನಗೊಂಡಿದ್ದರೂ ಅದನ್ನು ತೋರ್ಪಡಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರು(ಮೇ.21): ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ತಮ್ಮನ್ನು ಪರಿಗಣಿಸದೆ ಇರುವುದರಿಂದ ಬೇಸರಗೊಂಡಿದ್ದಾರೆ. ಆದರೆ ಮುಂಬರುವ ವಿಸ್ತರಣೆ ಸಮಯದಲ್ಲಾದರೂ ಸ್ಥಾನ ಸಿಗಬಹುದು ಎಂಬ ಕಾರಣಕ್ಕೆ ಯಾರೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲ.

ಸಂಪುಟದಲ್ಲಿ ಯಾರಾರ‍ಯರಿಗೆ ಅವಕಾಶ ನೀಡಬೇಕು ಎಂಬುದನ್ನು ಅಂತಿಮಗೊಳಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ದೆಹಲಿಗೆ ತೆರಳಿದ್ದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಸುಮಾರು 20 ಮಂದಿಯನ್ನು ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ವರಿಷ್ಠರೊಂದಿಗೆ ಈ ಉಭಯ ನಾಯಕರೂ ಚರ್ಚೆ ನಡೆಸಿದ್ದರು.

8 ಮಂದಿಗಷ್ಟೇ ಒಲಿದಿದ್ದೇಕೆ ಮಂತ್ರಿ ಪಟ್ಟ?: ಸಿದ್ದು- ಡಿಕೆ ಜಂಗೀಕುಸ್ತಿಗೆ ಕಾರಣರಾದ್ರಾ ಜಮೀರ್?

ಇದರಿಂದಾಗಿ ಸಂಪುಟದಲ್ಲಿ ಸೇರ್ಪಡೆಯಾಗಬಹುದಾದ ಸಂಭಾವ್ಯರಿಗೆ ಮೊದಲೇ ಮಾಹಿತಿಯನ್ನೂ ನೀಡಲಾಗಿತ್ತು. ಆದರೆ ಯಾರಾರ‍ಯರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡರಾತ್ರಿಯವರೆಗೂ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಚಿವರ ಸಂಖ್ಯೆಯನ್ನು ದಿಢೀರ್‌ 8ಕ್ಕೆ ಇಳಿಸಲಾಗಿದೆ ಎಂಬ ಅಸಮಾಧಾನ ಹಿರಿಯರಿಂದ ವ್ಯಕ್ತವಾಗಿದೆ.

ಯಾರಾರ‍ಯರಿಗೆ ಬೇಸರ?:

ಪಕ್ಷದ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ್‌, ಡಾ.ಎಚ್‌.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ಎಂ.ಕೃಷ್ಣಪ್ಪ, ಯು.ಟಿ.ಖಾದರ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಹಿರಿಯರು ಅಸಮಾಧಾನಗೊಂಡಿದ್ದರೂ ಅದನ್ನು ತೋರ್ಪಡಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಹೊಂದಾಣಿಕೆ ಮಾಡಿಕೊಂಡು ಒಮ್ಮತಕ್ಕೆ ಬಂದಿದ್ದರೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರ ಸಂಖ್ಯೆ 20 ಆಗುತ್ತಿತ್ತು. ಆದರೆ ಭಿನ್ನ ಅಭಿಪ್ರಾಯದಿಂದಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿಲ್ಲ ಎಂಬ ಬೇಸರ ಹಲವು ಮುಖಂಡರಲ್ಲಿದೆ. ಆದರೆ ಮುಂದಿನ ವಿಸ್ತರಣೆ ಸಮಯದಲ್ಲಾದರೂ ತಮ್ಮನ್ನು ಪರಿಗಣಿಸುವ ವಿಶ್ವಾಸ ಇರುವುದರಿಂದ ಈ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲ.