ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ಪಕ್ಷದ ಒಳಗೆ ಅಸಮಾಧಾನ ಸ್ಫೋಟಗೊಂಡಿದೆ. ಮೂಡಿಗೆರೆ ತಾಲ್ಲೂಕು ಬಿಜೆಪಿಯೊಳಗೆ ಅಸಮಾಧಾನದ ಬೇಗುದಿ ಭುಗಿಲೆದ್ದಿದೆ. ಪಕ್ಷದ ಇಬ್ಬರು ನಾಯಕರನ್ನು ಸಸ್ಪಂಡ್ ಮಾಡಿರುವ ವಿಚಾರ ಈಗ ಪಕ್ಷದಲ್ಲಿ ದೊಡ್ಡ ಸಂಚಲನ್ನೇ ಸೃಷ್ಟಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.23): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ಪಕ್ಷದ ಒಳಗೆ ಅಸಮಾಧಾನ ಸ್ಫೋಟಗೊಂಡಿದೆ. ಮೂಡಿಗೆರೆ ತಾಲ್ಲೂಕು ಬಿಜೆಪಿಯೊಳಗೆ ಅಸಮಾಧಾನದ ಬೇಗುದಿ ಭುಗಿಲೆದ್ದಿದೆ. ಪಕ್ಷದ ಇಬ್ಬರು ನಾಯಕರನ್ನು ಸಸ್ಪಂಡ್ ಮಾಡಿರುವ ವಿಚಾರ ಈಗ ಪಕ್ಷದಲ್ಲಿ ದೊಡ್ಡ ಸಂಚಲನ್ನೇ ಸೃಷ್ಟಿಸಿದೆ.
ತಾಲೂಕು ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮಾರಾಮಾರಿ ಪ್ರಕರಣ :
ಇತ್ತೀಚೆಗೆ ಮೂಡಿಗೆರೆ ಪಟ್ಟಣದಲ್ಲಿ ಬಿ.ಜೆ.ಪಿ. ಕಛೇರಿ ಎದುರು ನಡೆದಿದ್ದ ಗಲಾಟೆ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ.ರತನ್ ಅವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಬಿ.ಜೆ.ಪಿ. ಯ ಇಬ್ಬರು ಹೋಬಳಿ ಅಧ್ಯಕ್ಷರುಗಳನ್ನು ಅಮಾನತು ಮಾಡಲಾಗಿತ್ತು. ಬಣಕಲ್ ಹೋಬಳಿ ಅಧ್ಯಕ್ಷ ಮತ್ತು ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಜಿ. ಅನುಕುಮಾರ್ (ಪಟ್ಟದೂರು ಪುಟ್ಟಣ್ಣ) ಹಾಗೂ ಗೋಣಿಬೀಡು ಹೋಬಳಿ ಅಧ್ಯಕ್ಷ ಕನ್ನೇಹಳ್ಳಿ ಭರತ್ ಇವರುಗಳನ್ನು ಜಿಲ್ಲಾ ಅಧ್ಯಕ್ಷರು ಪಕ್ಷದಿಂದ ಅಮಾನತು ಮಾಡಿದ್ದಾರೆ.ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಈ ಇಬ್ಬರು ಮುಖಂಡರುಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣವೀಗ ಮೂಡಿಗೆರೆ ಬಿ.ಜೆ.ಪಿ.ಯೊಳಗೆ ದೊಡ್ಡ ಬೇಗುದಿ ಸೃಷ್ಟಿಸಿದೆ. ಅಮಾನತು ಮಾಡಿರುವ ಕ್ರಮ ಸರಿಯಲ್ಲ, ಯಾವುದೇ ನೋಟೀಸ್ ನೀಡದೇ, ವಿವರಣೆ ಕೇಳದೇ, ಪ್ರಕರಣದ ತನಿಖೆ ನಡೆಸದೇ ಏಕಾಏಕಿ ಅಮಾನತು ಮಾಡಲಾಗಿದೆ ಎಂದು ಅನುಕುಮಾರ್ ಮತ್ತು ಭರತ್ ಅವರನ್ನು ಬೆಂಬಲಿಸಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ದೊಡ್ಡ ಪಡೆ ತಮ್ಮ ಅಸಮದಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರು: ಸಚಿವೆ ಕರಂದ್ಲಾಜೆಗೆ ಸ್ವಕ್ಷೇತ್ರದಲ್ಲೇ ವಿರೋಧ, ಬಿಜೆಪಿ ಕಾರ್ಯಕರ್ತರಿಂದ ಶೋಭಾ ವಿರುದ್ಧ ಪತ್ರ ಅಭಿಯಾನ
ಜಿಲ್ಲಾಧ್ಯಕ್ಷರ ವಿರುದ್ಧ ಕಿಡಿ :
ಈ ಸಂಬಂಧ ಪಿ.ಜಿ. ಅನುಕುಮಾರ್ ಅವರ ಪಟ್ಟದೂರು ಗ್ರಾಮದ ನಿವಾಸದಲ್ಲಿ ಸಭೆ ಸೇರಿದ್ದ ಸುಮಾರು 500ಕ್ಕೂ ಅಧಿಕ ಬಿ.ಜೆ.ಪಿ. ಮುಖಂಡರು ಮತ್ತು ಕಾರ್ಯಕರ್ತರು ಅನುಕುಮಾರ್ ಮತ್ತು ಭರತ್ ಅವರಿಗೆ ತಮ್ಮ ನೈತಿಕ ಬೆಂಬಲ ಸೂಚಿಸಿದ್ದಾರೆ ಮತ್ತು ಅಮಾನತು ಮಾಡಿರುವ ಜಿಲ್ಲಾಧ್ಯಕ್ಷರ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.ಅಲ್ಲದೆ ವಿಧಾನಪರಿಷತ್ ಸದಸ್ಯ ಎಂ ಕೆ ಪ್ರಾಣೇಶ್ ವಿರುದ್ದವೂ ಕೆಲವರು ಅಸಮಾಧನವನ್ನು ಹೊರಹಾಕಿದ್ದಾರೆ. ಈ ಸಭೆಯಲ್ಲಿ ತಾಲ್ಲೂಕಿನ ಅನೇಕ ಹಿರಿಯ ಬಿ.ಜೆ.ಪಿ. ಮುಖಂಡರು, ಪಕ್ಷದ ಬಹುತೇಕ ಸಕ್ರಿಯ ಕಾರ್ಯಕರ್ತರು ಭಾಗವಹಿಸಿ ಅಮಾನತಾಗಿರುವ ಮುಖಂಡರುಗಳನ್ನು ಬೆಂಬಲಿಸಿ ಮಾತನಾಡಿದ್ದಾರೆ.
ಈ ಬಗ್ಗೆ ಪ್ರಬಲವಾದ ಪ್ರತಿಭಟನೆ ಸೂಚಿಸಲು ತೀರ್ಮಾನಿಸಿದ್ದಾರೆ. ಅನುಕುಮಾರ್ ಮತ್ತು ಭರತ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷದ ವಿಚಾರದಲ್ಲಿ ಮುಂದೆ ನಿಂತು ಹೋರಾಟ ಮಾಡಿದ್ದಾರೆ. ಉತ್ತಮ ಜನಸಂಪರ್ಕ ಹೊಂದಿದ್ದಾರೆ. ಅವರನ್ನು ಯಾವುದೇ ಮಾರ್ಗಸೂಚಿ ಅನುಸರಿಸಿದೇ, ಕನಿಷ್ಟ ಅವರಿಂದ ವಿವರಣೆಯನ್ನು ಕೇಳದೇ ಏಕಾಏಕಿ ಜಿಲ್ಲಾಧ್ಯಕ್ಷರು ಅಮಾನತು ಮಾಡಿರುವ ಕ್ರಮವನ್ನು ಪಕ್ಷದ ಮುಖಂಡ ವಿ.ಕೆ.ಶಿವೇಗೌಡ ಸೇರಿದಂತೆ ಅನೇಕರು ಖಂಡಿಸಿದ್ದಾರೆ. ಈ ನಡುವೆ ಈ ಇಬ್ಬರು ಮುಖಂಡರುಗಳಿಗೆ ಬೆಂಬಲ ಸೂಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಒಟ್ಟಾರೆ ಪಕ್ಷದ ಮುಖಂಡರ ನಡೆಯ ವಿರುದ್ಧ ಮೂಡಿಗೆರೆಯಲ್ಲಿ ಬಿಜೆಪಿಯ ಪ್ರಬಲ ಪಡೆ ತಿರುಗಿ ಬಿದ್ದಿದ್ದು, ಪಕ್ಷದ ಮುಖಂಡರು ಈ ಪ್ರಕರಣವನ್ನು ಯಾವ ರೀತಿ ನಿಭಾಯಿಸುತ್ತಾರೆ ಕಾದು ನೋಡಬೇಕಾಗಿದೆ.