ರಾಮನಗರ ವಾರ್ಡುವಾರು ಸಮಸ್ಯೆಗಳನ್ನು ಪರಿಹರಿಸದಿದ್ದರೆ ಶಿಸ್ತು ಕ್ರಮ: ಸಂಸದ ಡಿ.ಕೆ.ಸುರೇಶ್

24-7 ಕುಡಿಯುವ ನೀರು ಯೋಜನೆ ಪೂರ್ಣಗೊಳ್ಳುವವರೆಗೆ 10 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ, ಅರ್ಕಾವತಿ ನದಿಗೆ ಕಲ್ಪಿಸಿರುವ ಯುಜಿಡಿ ಸಂಪರ್ಕ ಕಡಿತಗೊಳಿಸಿ ಎಸ್ ಟಿಪಿ ಪ್ಲಾಂಟ್ , ಸಾರ್ವಜನಿಕ ಶೌಚಾಲಯ ನಿರ್ಮಾಣ, ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

Disciplinary action if not remedied Says MP DK Suresh At Ramanagara gvd

ರಾಮನಗರ (ಜ.14): 24-7 ಕುಡಿಯುವ ನೀರು ಯೋಜನೆ ಪೂರ್ಣಗೊಳ್ಳುವವರೆಗೆ 10 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ, ಅರ್ಕಾವತಿ ನದಿಗೆ ಕಲ್ಪಿಸಿರುವ ಯುಜಿಡಿ ಸಂಪರ್ಕ ಕಡಿತಗೊಳಿಸಿ ಎಸ್ ಟಿಪಿ ಪ್ಲಾಂಟ್ , ಸಾರ್ವಜನಿಕ ಶೌಚಾಲಯ ನಿರ್ಮಾಣ, ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರಸಭೆಯ ಪ್ರಶಸ್ತಿ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರಿಂದ ವಾರ್ಡುವಾರು ಸಮಸ್ಯೆಗಳನ್ನು ಆಲಿಸಿದ ಡಿ.ಕೆ.ಸುರೇಶ್, ಪ್ರತಿಯೊಂದು ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ವಾರ್ಡುಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುತ್ತಿಲ್ಲ. ಎರಡು - ಮೂರು ಅಂತಸ್ತಿನ ಮನೆಗಳಲ್ಲಿ 2 -3 ಕುಟುಂಬಗಳಿದ್ದರು 24-7 ಕುಡಿಯುವ ನೀರು ಯೋಜನೆ ಅಡಿಯಲ್ಲಿ ಕೇವಲ ಒಂದು ಕೊಳಾಯಿ ಸಂಪರ್ಕ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಲಮಂಡಳಿ ಅಧಿಕಾರಿ ಕುಸುಮಾ, 24-7 ಕುಡಿಯುವ ನೀರು ಯೋಜನೆ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ನಿಯಮಾವಳಿ ಪ್ರಕಾರ ಒಂದು ಮನೆಗೆ ಒಂದು ಕೊಳಾಯಿ ಸಂಪರ್ಕ ನೀಡಲಾಗುತ್ತಿದೆ. ಈಗ ಶಿಂಷಾ ಹಾಗೂ ಅರ್ಕಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿರುವ ಕಾರಣ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸದ್ಯಕ್ಕೆ ನಗರದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕೇಳಿ ಬಂದಿಲ್ಲ. ಇತ್ತೀಚೆಗಷ್ಟೇ ನಗರಸಭೆ ಬೋರ್ ವೆಲ್ ಕೊರೆಸಲು ಅನಮತಿ ನೀಡಿದೆ ಎಂದರು.

ರಾಮಮಂದಿರ ನಿರ್ಮಾಣ ಸಂಬಂಧ ಸ್ಥಳದ ಸರ್ವೆ ವರದಿ ಕೇಳಿದ್ದೇನೆ: ಸಂಸದ ಡಿ.ಕೆ.ಸುರೇಶ್

ಇದರಿಂದ ಆಕ್ರೋಶಗೊಂಡ ಸದಸ್ಯರು, 7-8 ದಿನಗಳಾದರು ನೀರು ಸರಬರಾಜು ಮಾಡುತ್ತಿಲ್ಲ. ಬಹುತೇಕ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಬೋರ್‌ ವೆಲ್ ದುರಸ್ತಿ ಪಡಿಸುವಂತೆ ಕೇಳಿದರು ಸ್ಪಂದಿಸುತ್ತಿಲ್ಲ. ಜನರು ನಮ್ಮ ಮನೆಗಳ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸುವಂತೆ ಕೋರಿದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ನೀರಿನ ಯೋಜನೆಗೆ ಎಲ್ಲಿ ತೊಡಕಾಗಿದೆ. ಎಷ್ಟು ಕಿ.ಮೀ. ಪೈಪ್ ಲೈನ್ ಅಳವಡಿಸಲಾಗಿದೆ. ನಗರದಲ್ಲಿ ಎಷ್ಟು ಕೊಳಾಯಿ ಸಂಪರ್ಕ, ಬೋರ್‌ ವೆಲ್‌ ಗಳು ಎಷ್ಟಿವೆ. ನೀರಿನ ತೆರಿಗೆ ಎಷ್ಟು ಸಂಗ್ರಹ ಮಾಡಲಾಗುತ್ತಿದೆ. 

ಟ್ಯಾಂಕರ್ ನೀರು ಪೂರೈಸಲು ಎಷ್ಟು ಖರ್ಚಾಗುತ್ತದೆ ಎಂದು ಪ್ರಶ್ನಿಸಿದಾಗ ಕುಸುಮಾ, ಖಾಸಗಿ ಜಮೀನು ಮತ್ತು ರೈಲ್ವೆ ಹಳಿ ಬಳಿ ಮಾತ್ರ ಪೈಪ್ ಲೈನ್ ಅಳವಡಿಕೆ ಕಾಮಗಾರಿಗೆ ತೊಂದರೆಯಾಗಿದೆ. ಇನ್ನು 212 ಕಿ.ಮೀ. ಪೈಪ್ ಲೈನ್ ಅಳವಡಿಸಲಾಗಿದ್ದು, 2.5 ಕಿ.ಮೀ. ಕಾಮಗಾರಿ ಮಾತ್ರ ಬಾಕಿಯಿದೆ. 31 ವಾರ್ಡುಗಳಲ್ಲಿ 18,239 ಪೈಕಿ 15 ಸಾವಿರ ಕೊಳಾಯಿ ಸಂಪರ್ಕ ಕಲ್ಪಿಸಲಾಗಿದೆ. 270ರ ಪೈಕಿ 235 ಬೋರ್ ವೆಲ್ ಗಳು ಚೆನ್ನಾಗಿದ್ದು, ಇದರಲ್ಲಿ 35 ಬೋರ್‌ವೆಲ್ ಗಳನ್ನು ದುರಸ್ತಿ ಪಡಿಸಬೇಕಿದೆ. ನೀರಿನ ತೆರಿಗೆ 40 ಲಕ್ಷ ರು. ಪೈಕಿ 23 ಲಕ್ಷ ಮಾತ್ರ ಸಂಗ್ರಹ ಆಗುತ್ತಿದೆ. ಟ್ಯಾಂಕರ್ ನೀರು ಪೂರೈಸಲು ತಿಂಗಳಿಗೆ 4 -5 ಲಕ್ಷ ವೆಚ್ಚ ತಗಲುತ್ತದೆ ಎಂದು ವಿವರಿಸಿದರು.

ಇದಕ್ಕೆ ಸುರೇಶ್, ಖಾಸಗಿ ಜಮೀನಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ. ರೈಲ್ವೆ ಹಳಿ ಸಮಸ್ಯೆ ಸಂಬಂಧ ನಾನೇ ಖುದ್ದಾಗಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಇನ್ನು ಕುಡಿಯುವ ನೀರು ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಕೊಳಾಯಿ ಸಂಪರ್ಕ ಕಲ್ಪಿಸಬೇಕು. ಈ ಯೋಜನೆ ಪೂರ್ಣಗೊಳ್ಳುವವರೆಗೂ ನಗರದ ಬಡಾವಣೆಗಳಿಗೆ 10 ಟ್ಯಾಂಕರ್ ಗಳಲ್ಲಿ ನೀರು ಪೂರೈಸುವುದು. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಪಡಿಸುವುದನ್ನು ಬಿಟ್ಟು ಆ ಹಣವನ್ನು ನಗರಸಭೆಗೆ ವರ್ಗಾಯಿಸುವಂತೆ ಸೂಚಿಸಿದರು.

ಎಚ್‌.ಡಿ.ಕುಮಾರಸ್ವಾಮಿಯನ್ನು ಒಮ್ಮೆ ಗವರ್ನರ್ ಮಾಡಬೇಕು: ಶಾಸಕ ಇಕ್ಬಾಲ್ ಹುಸೇನ್ ವ್ಯಂಗ್ಯ

ನಗರದಲ್ಲಿ ಹಾದು ಹೋಗಿರುವ ಅರ್ಕಾವತಿ ನದಿ ಯುಜಿಡಿ ನೀರು ಹರಿದು ಕಲುಷಿತಗೊಳ್ಳುತ್ತಿದೆ. ಆ ನೀರನ್ನು ಶುದ್ಧೀಕರಿಸಲು ಎಸ್ ಟಿಪಿ ಪ್ಲಾಂಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 20 ಕೋಟಿ ರು ಬಿಡುಗಡೆಯೂ ಆಗಿದೆ. ಕೂಡಲೇ ನದಿಗೆ ಕಲ್ಪಿಸಿರುವ ಯುಜಿಡಿ ಸಂಪರ್ಕಗಳನ್ನು ಮುಚ್ಚಬೇಕು. ಯುಜಿಡಿ ನೀರನ್ನು ಪ್ರತ್ಯೇಕ ಪೈಪ್‌ ಲೈನ್‌ ನಲ್ಲಿ ಹರಿಸಿ, ಅದನ್ನು ಶುದ್ದೀಕರಿಸಿ ನದಿಗೆ ಹರಿಸಬೇಕಾಗಿದೆ. ಎಸ್ ಟಿಪಿ ಪ್ಲಾಂಟ್ ನಿರ್ಮಾಣ ಕುರಿತು ವರದಿ ಸಲ್ಲಿಸುವಂತೆ ಸುರೇಶ್ ಜಲ ಮಂಡಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ, ಉಪಾಧ್ಯಕ್ಷ ಸೋಮಶೇಖರ್ , ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತ್ , ಆಯುಕ್ತ ನಾಗೇಶ್ ಇತರರಿದ್ದರು.

Latest Videos
Follow Us:
Download App:
  • android
  • ios