ಬಿಜೆಪಿಯವರು 40 ಪರ್ಸೆಂಟ್‌ ಭ್ರಷ್ಟಾಚಾರದ ಹಣದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಪತನಗೊಳಿಸಬಹುದು ಎಂದುಕೊಂಡಿದ್ದಾರೆ. ಅದು ಅಸಾಧ್ಯದ ಮಾತು. ಬಿಜೆಪಿ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌ ಆರೋಪಿಸಿದರು. 

ಹುಬ್ಬಳ್ಳಿ (ಆ.16): ಬಿಜೆಪಿಯವರು 40 ಪರ್ಸೆಂಟ್‌ ಭ್ರಷ್ಟಾಚಾರದ ಹಣದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಪತನಗೊಳಿಸಬಹುದು ಎಂದುಕೊಂಡಿದ್ದಾರೆ. ಅದು ಅಸಾಧ್ಯದ ಮಾತು. ಬಿಜೆಪಿ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌ ಆರೋಪಿಸಿದರು. ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಂಕಾರದಿಂದ ಬಿಜೆಪಿಯವರು ಮಾತನಾಡುತ್ತಿದ್ದಾರೆ. ತಮ್ಮ ಬಳಿ ಜಮಾ ಇರೋ 40 ಪರ್ಸೆಂಟ್‌ ಹಣವನ್ನು ಕಾಂಗ್ರೆಸ್‌ ಸರ್ಕಾರ ಪತನಗೊಳಿಸಲು ಬಳಸಬೇಕೆಂದಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಒಗ್ಗಟ್ಟಾಗಿದೆ ಎಂದರು.

ದೇಶ ಎಲ್ಲರಿಗೂ ಸೇರಿದೆ: ಭಾರತ ಹಿಂದೂ ರಾಷ್ಟ್ರ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲಾನಾಥ್‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದಿಗ್ವಿಜಯ ಸಿಂಗ್‌, ಕಮಲಾನಾಥ್‌ ಆ ರೀತಿ ಹೇಳಿಲ್ಲ. ಭಾರತೀಯ ಸಂವಿಧಾನದಲ್ಲಿ ಎಲ್ಲ ವ್ಯಕ್ತಿಗಳಿಗೂ ತನ್ನ ಧರ್ಮ ಪಾಲನೆಗೆ ಅವಕಾಶವಿದೆ. ಭಾರತದಲ್ಲಿ ಸಂವಿಧಾನವೇ ಸರ್ವಸ್ವ. ನೇಪಾಳದಲ್ಲಿ ಅತಿ ಹೆಚ್ಚು ಹಿಂದುಗಳೇ ಇದ್ದಾರೆ. ನೇಪಾಳ ಹಿಂದೂ ರಾಷ್ಟ್ರ ಅಂತ ಘೋಷಿಸಿಕೊಂಡಿಲ್ಲ. ನಮ್ಮದು ಜಾತ್ಯತೀತ ಸಂವಿಧಾನ. ಇಸ್ಲಾಂ ರಾಷ್ಟ್ರ ಅಂತ ಘೋಷಿಸಿಕೊಂಡ ನಂತರ ಪಾಕಿಸ್ತಾನ ಏನಾಗಿದೆ? 

ಬೆಳಗಾವಿ ವಿಭಜಿಸಿ ಮೂರು ಜಿಲ್ಲೆ ಮಾಡಲು ಕೋರಿದ್ದೇವೆ: ಸಚಿವ ಸತೀಶ್‌ ಜಾರಕಿಹೊಳಿ

ಅಲ್ಲಿ ಮುಸ್ಲಿಮರೇ ಮುಸ್ಲಿಮರರನ್ನು ಹೊಡೆದು ಹಾಕಿದ್ದಾರೆ. ಇಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ಪ್ರಶ್ನೆಯಿಲ್ಲ. ದೇಶ ಎಲ್ಲರಿಗೂ ಸೇರಿದ್ದಾಗಿದೆ. ಎಲ್ಲ ಧರ್ಮೀಯರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದರು. ಹಿಂದುತ್ವದ ಪರಿಕಲ್ಪನೆ ತಂದ ಸಾವರ್ಕರ್‌ ಅವರೇ ಹಿಂದುತ್ವಕ್ಕೂ ಸನಾತನ ಧರ್ಮಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದವರು ಹಿಂದುತ್ವದ ಮಾತುಗಳನ್ನು ಆಡೋದು ಸರಿಯಲ್ಲ ಎಂದರು.

ಮಣಿಪುರ ದಂಗೆಯ ಪಿತೂರಿ: ನನಗೆ ತಿಳಿದ ಮಟ್ಟಿಗೆ ಮಧ್ಯಪ್ರದೇಶದಲ್ಲಿ ಭ್ರಷ್ಟಾಚಾರ ಶೇ. 50ರಷ್ಟುದಾಟಿದೆ. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಮಣಿಪುರದಲ್ಲಿ ಗಲಭೆ ಮುಂದುವರಿಕೆಯ ಪಿತೂರಿ ಮಾಡಿದೆ. ಮಣಿಪುರದ ತಂತ್ರವನ್ನೇ ಈಗ ಜಮ್ಮು-ಕಾಶ್ಮೀರದಲ್ಲಿ ಪ್ರಯೋಗ ಮಾಡಲು ಹೊರಟಿದೆ. ಇದನ್ನು ಅರ್ಥ ಮಾಡಿಕೊಳ್ಳೋದು ಸದ್ಯದ ಅವಶ್ಯಕತೆಯಾಗಿದೆ ಎಂದು ದಿಗ್ವಿಜಯಸಿಂಗ್‌ ಹೇಳಿದರು. ನಾನು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಲು ಬಂದಿದ್ದೆ. ಕಳೆದ ವರ್ಷ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದೆ. 

ಆಗ ಗಣೇಶ ದರ್ಶನ, ಮಹಾಬಲೇಶ್ವರ ದರ್ಶನ ಮಾಡಿಕೊಂಡಾಗ ಆತ್ಮತೃಪ್ತಿ ಎನಿಸಿತ್ತು. ಆ ಸಂದರ್ಭದಲ್ಲಿ ಪ್ರತಿ ವರ್ಷ ಇಲ್ಲಿಗೆ ಭೇಟಿ ಕೊಡಲು ನಿರ್ಧರಿಸಿದ್ದೆ, ಅದರ ಪ್ರಕಾರ ನಾನು ಅಲ್ಲಿಗೆ ಭೇಟಿ ನೀಡಿ ವಾಪಾಸ್ಸಾಗಿದ್ದೇನೆ. ಮನಸ್ಸಿಗೂ ಸಮಾಧಾನವಾಗಿದೆ ಎಂದರು. ಈ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ, ನಗರ ಅಧ್ಯಕ್ಷ ಅಲ್ತಾಫ ಹಳ್ಳೂರ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಪಾಲ್ಗೊಂಡಿದ್ದರು.

ರಾಜ್ಯದ ಚುನಾವಣೆ ದೇಶಕ್ಕೆ ದಿಕ್ಸೂಚಿ: ಕರ್ನಾಟಕ ವಿಧಾನಸಭೆ ಫಲಿತಾಂಶ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ಬಿಜೆಪಿ ಜನ ಬಲವನ್ನು ಧನಬಲದ ಮೂಲಕ ಖರೀದಿಸಲು ಮುಂದಾಗಿತ್ತು. ಧನ ಬಲದ ಮೂಲಕ ಈ ಹಿಂದೆ ಸರ್ಕಾರವನ್ನು ಪತನಗೊಳಿಸಿತ್ತು. ಅದರ ಪರಿಣಾಮ ಏನಾಯ್ತು ಅಂತ ಎಲ್ಲರಿಗೂ ಗೊತ್ತಿದೆ. ಮಹಾತ್ಮ ಗಾಂಧೀಜಿ ಅವರು ಅಹಿಂಸೆ ದಾರಿ ಹಿಡಿದು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. 

ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿಗಿಲ್ಲ: ಶೆಟ್ಟರ್‌ ಕಿಡಿ

ಆದರೆ, ಇಂದು ಭಾವೈಕ್ಯತೆ ಕಿತ್ತೊಗೆದು ದೇಶ ಒಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಾಮ ಮಾರ್ಗದ ಮೂಲಕ ಸರ್ಕಾರ ರಚಿಸಬೇಕು ಎಂದುಕೊಂಡವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಧರ್ಮಾಧಾರಿತ ಸರ್ಕಾರ ರಚಿಸಬೇಕೆಂದುಕೊಂಡವರಿಗೆ ಜನ ಸೂಕ್ತ ಉತ್ತರ ಕೊಟ್ಟಿದ್ದಾರೆ. ಹೀಗಾಗಿ, ಕರ್ನಾಟಕದ ಜನತೆಗೆ ನಾನು ಸಲಾಂ ತಿಳಿಸುತ್ತೇನೆ. ಈ ಗೆಲುವು ಕಾಂಗ್ರೆಸ್‌ ಗೆಲುವು. ಸನಾತನ ಧರ್ಮದ ಗೆಲುವಾಗಿದೆ, ಎಲ್ಲ ಧರ್ಮೀಯರ ಗೆಲುವಾಗಿದೆ ಎಂದು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್‌ ಹೇಳಿದರು.