ಮುಸುಕುಧಾರಿಯ ವಿರುದ್ದ ಪೋಲಿಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಎಸ್‍ಐಟಿ ರಚನೆ ಮಾಡುವ ಮೂಲಕ ಸರ್ಕಾರ ಕೂಡ ಈ ವಿಚಾರದಲ್ಲಿ ವಿಚಲಿತವಾಗಿದೆ ಎಂದರು ಶಾಸಕ ಆರಗ ಜ್ಞಾನೇಂದ್ರ.

ತೀರ್ಥಹಳ್ಳಿ (ಆ.20): ಹಿಂದೂ ಧಾರ್ಮಿಕ ಭಾವನೆಯ ಪ್ರತೀಕದಂತಿರುವ ಧರ್ಮಸ್ಥಳ ಕ್ಷೇತ್ರದ ಘನತೆಗೆ ಎಡಪಂಥೀಯರಿಂದ ಷಡ್ಯಂತ್ರದ ಮೂಲಕ ಧಕ್ಕೆ ಉಂಟು ಮಾಡುವ ಯತ್ನದ ಬಗ್ಗೆ ಕ್ಷೇತ್ರದ ಭಕ್ತಾದಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಧರ್ಮಸ್ಥಳ ಭಕ್ತಾದಿಗಳ ವೇದಿಕೆ ವತಿಯಿಂದ ತೀರ್ಥಹಳ್ಳಿ ಪಟ್ಟಣದ ತಾಲೂಕು ಕಚೇರಿ ಎದುರು ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಎಡಪಂಥೀಯರ ಕಾರಸ್ತಾನದಿಂದ ಧರ್ಮಸ್ಥಳ ಕ್ಷೇತ್ರದ ಘನತೆಗೆ ಧಕ್ಕೆ ತರುವ ಮೂಲಕ ಸನಾತನ ಧರ್ಮ ಮತ್ತು ಹಿಂದೂ ಧಾರ್ಮಿಕ ಭಾವನೆಗಳ ನಾಶಕ್ಕೆ ಬುದ್ದಿಜೀವಿಗಳೆನಿಸಿಕೊಂಡ ನಕ್ಸಲ್ ಬೆಂಬಲಿಗರಿಂದ ಷಡ್ಯಂತ್ರ ನಡೆಯುತ್ತಿದ್ದು ಈ ಬಗ್ಗೆ ಹಿಂದೂಗಳು ಜಾಗೃತರಾಗುವ ಅನಿವಾರ್ಯತೆ ಇದೆ ಎಂದರು.

ಧರ್ಮಸ್ಥಳ ಕ್ಷೇತ್ರದ ಮೇಲಿರುವ ಧಾರ್ಮಿಕ ಭಾವನೆಯನ್ನು ಜನರ ಮನಸ್ಸಿನಿಂದ ಯಾರಿಂದಲೂ ಅಳಿಸಲಾಗದು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರ ಮಾಡಲಾಗದ ಕೆಲಸವನ್ನು ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಕ್ಷೇತ್ರದಿಂದ ನಡೆಸಲಾಗುತ್ತಿದ್ದು ಮದ್ಯವರ್ಜನ ಶಿಬಿರ ಮುಂತಾದ ಕಾರ್ಯಗಳ ಮೂಲಕ ಸಾವಿರಾರು ಕುಟುಂಬಗಳಿಗೆ ಬದುಕು ನೀಡಲಾಗಿದೆ ಎಂದರು. ತಲೆ ಬುರುಡೆಯನ್ನು ತಂದ ಮುಸುಕುಧಾರಿಯ ಕೃತ್ಯವನ್ನು ಪರಿಶೀಲಿಸದೆ ಸಿನಿಮಾ ರೀತಿಯ ಕಥೆ ಹೆಣೆದು ಷಡ್ಯಂತ್ರವನ್ನು ಹೂಡುವ ಮೂಲಕ ಧರ್ಮಸ್ಥಳದ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ.

ಮುಸುಕುಧಾರಿಯ ವಿರುದ್ದ ಪೋಲಿಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಎಸ್‍ಐಟಿ ರಚನೆ ಮಾಡುವ ಮೂಲಕ ಸರ್ಕಾರ ಕೂಡ ಈ ವಿಚಾರದಲ್ಲಿ ವಿಚಲಿತವಾಗಿದೆ ಎಂದರು. ಧರ್ಮಸ್ಥಳದ ವಿರುದ್ದ ನಡೆದಿರುವ ಬೆಳವಣಿಗೆ ಅತಿರೇಕದ ಪರಮಾವಧಿ ಕೃತ್ಯವಾಗಿದ್ದು ಇದನ್ನು ಸಹಿಸಲಾಗದು. ಇದರ ಹಿಂದೆ ಮಿಷನರಿಗಳ ಪಾತ್ರವೂ ಇದೆ. ಗ್ರಾಮಾಭಿವೃದ್ದಿ ಯೋಜನೆ ಆರಂಭವಾದ ನಂತರ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆಯುತ್ತಿದ್ದ ಮುಗ್ಧ ಹಿಂದೂಗಳ ಮತಾಂತರ ಈಚೆಗೆ ಸ್ಥಗಿತಗೊಂಡಿದೆ. ಅನ್ಯ ಧರ್ಮಿಯರ ಬಗ್ಗೆ ಧ್ವನಿ ಎತ್ತಲಾಗದ ಎಡ ಪಂಥೀಯರು ಮತ್ತು ಬುದ್ಧಿಜೀವಿಗಳೆನಿಸಿಕೊಂಡವರ ಸಿನಿಕತನ ಇದಕ್ಕೆ ಪ್ರೇರಣೆಯಾಗಿದೆ. ಸೌಮ್ಯವಾದಿಗಳಾದ ಹಿಂದುಗಳ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ ನಡೆಯುವುದಿಲ್ಲ ಎಂದೂ ಎಚ್ಚರಿಸಿದರು.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ವಿರುದ್ದದ ಕಾರ್ಯಾಚರಣೆ ಬಹಳ ಕಾಲದಿಂದ ನಡೆಯುತ್ತಿದ್ದು ಇದರ ವಿರುದ್ದ ಹಾಗೂ ಧರ್ಮ ರಕ್ಷಣೆಯ ಪರವಾದ ಹೋರಾಟ ಅನಿವಾರ್ಯವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರೂ ಇದನ್ನು ಪ್ರತಿಪಾದಿಸಿದ್ದಾರೆ. ಷಡ್ಯಂತ್ರ ನಡೆಸಿದವರ ವಿರುದ್ದ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಸಂತ ಗಿಳಿಯಾರ್, ಸೌಜನ್ಯ ಪ್ರಕರಣದ ಹೆಸರಿನಲ್ಲಿ ಹಣ ಗಳಿಸುವ ತಂತ್ರಗಾರಿಕೆ ನಡೆದಿದ್ದು ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸಿಡಿಸಿದ ಭಯೋತ್ಪಾದಕ ತಂಡ ಮತ್ತು ನಕ್ಸಲರ ತಂಡದ ಗುರಿಯೂ ಧರ್ಮಸ್ಥಳವಾಗಿತ್ತು.

ಭೂ ಸುಧಾರಣೆ ಕಾಯ್ದೆ ಜಾರಿಯಾದ ಅವಧಿಯಲ್ಲಿ 3800 ಎಕರೆ ಜಾಗವನ್ನು ಗೇಣಿದಾರರಿಗೆ ಬಿಟ್ಟು ಕೊಟ್ಟಿರುವ ಕ್ಷೇತ್ರದ ವಿರುದ್ಧ ಜಾತಿಗಳನ್ನು ಎತ್ತಿ ಕಟ್ಟುವ ಪ್ರಯತ್ನ ಕೂಡ ನಡೆದಿದೆ ಎಂದರು. ಧಾರ್ಮಿಕ ಮುಖಂಡ ಡಾ.ಜೀವಂಧರ ಜೈನ್, ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಪ್ರತಿಭಟನೆಯ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಚಂದವಳ್ಳಿ ಸೋಮಶೇಕರ್ ಇದ್ದರು. ಎಪಿಎಂಸಿ ಆವರಣದಿಂದ ಮೆರವಣಿಗೆ ಸಾಗಿ ಬಂದ ಮಾರ್ಗದಲ್ಲಿ ಹಿಂದೂ ಸಮುದಾಯದವರು ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಪ್ರತಿಭಟನೆಗೆ ಸಹಕರಿಸಿದರು.