ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್‌ಗೆ ಕರ್ನಾಟಕದ ನೀರಾವರಿ ಅಭಿವೃದ್ಧಿ ಅರಿವಿಲ್ಲ: ಎಂ.ಬಿ.ಪಾಟೀಲ
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ರಾಜ್ಯದಲ್ಲಿ ನೀರಾವರಿ ಮಾಡುವುದನ್ನು ಬಿಟ್ಟು ನಮ್ಮ ಕೆಲಸಗಳ ಬಗ್ಗೆ ಟೀಕಿಸುತ್ತಿರುವುದು ಹಾಸ್ಯಾಸ್ಪದವಾಗಿದೆ: ಎಂ.ಬಿ.ಪಾಟೀಲ
ತಿಕೋಟಾ(ಮೇ.05): ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ರಾಜ್ಯದಲ್ಲಿ ನೀರಾವರಿ ಮಾಡುವುದನ್ನು ಬಿಟ್ಟು ನಮ್ಮ ಕೆಲಸಗಳ ಬಗ್ಗೆ ಟೀಕಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಫಡ್ನವೀಸ್‌ಗೆ ಈ ಭಾಗದಲ್ಲಿ ಆದ ನೀರಾವರಿ ಅಭಿವೃದ್ಧಿಯ ಅರಿವಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಕನಮಡಿಯಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಫಡ್ನವೀಸ್ ಇತ್ತೀಚೆಗೆ ಕನಮಡಿಯಲ್ಲಿ ಇಲ್ಲಸಲ್ಲದ ಮಾತುಗಳನ್ನು ಹೇಳಿದ್ದಾರೆ. ಅವರದೇ ರಾಜ್ಯದ ಮೈಶಾಳ ನೀರಾವರಿ ಯೋಜನೆಯನ್ನು 45 ವರ್ಷ ಕಳೆದರೂ ಕೈಗೆತ್ತಿಕೊಳ್ಳದೇ ಜತ್ತ ತಾಲೂಕಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಪಾನೀ ಏನಾರ ಆಹೇ (ನೀರು ಬರಲಿದೆ) ಎಂದು ಸುಳ್ಳು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಆದರೆ, ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮಾಡಿರುವ ನೀರಾವರಿ ಯೋಜನೆಗಳ ಫಲವಾಗಿ ಜತ್ತ ತಾಲೂಕಿನ 42 ಗ್ರಾಮಗಳಿಗೆ ಮತ್ತು 9 ಕೆರೆಗಳಿಗೆ ನೀರು ಬಂದಿದೆ. ಈ ಹಿನ್ನೆಲೆಯಲ್ಲಿ ಆ ಗ್ರಾಮಗಳ ಜನ ತಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಹೋರಾಟ ನಡೆಸಿದ್ದಾರೆ. ಇದರ ಅರಿವು ಫಡ್ನವೀಸ್ ಅವರಿಗೆ ಇಲ್ಲ. ಬಾಕಿ ಕಾಮಗಾರಿಗಳು ಪೂರ್ಣಗೊಂಡ ನಂತರ ಈ ಭಾಗ ಮತ್ತಷ್ಟು ಅಭಿವೃದ್ಧಿ ಆಗಲಿದೆ ಎಂದರು.
ಬಿಜೆಪಿ ಅಭ್ಯರ್ಥಿ ವಿಜುಗೌಡ ವಿರುದ್ಧ ಗೂಂಡಾಗಿರಿ ಆರೋಪ: ಫೈರಿಂಗ್ ವಿಡಿಯೋ !
ಇದೇ ರೀತಿ ಲಕ್ಷ್ಮಣ ಸವದಿಯವರು ಅಥಣಿ ಭಾಗದಲ್ಲಿ ನೀರಾವರಿ ಮಾಡಿದ್ದಾರೆ. ನಾವಿಬ್ಬರೂ ಸೇರಿಕೊಂಡು ಜೋಡೆತ್ತಿನಂತೆ ದುಡಿಯುತ್ತೇವೆ. ನಾನು ತಮಗೆಲ್ಲರಿಗೂ ನೀರು ಕೊಟ್ಟಿದ್ದೇನೆ. ತಾವೆಲ್ಲರೂ ನನಗೆ ಮತ ಹಾಕಿ. ನಾನು ದುಡಿದಿದ್ದೇನೆ ನನಗೆ ಮತಗಳ ರೂಪದಲ್ಲಿ ಪಗಾರ ಕೊಡಿ. ಅದೇ ರೀತಿ ಅಥಣಿ ಮತಕ್ಷೇತ್ರದಲ್ಲಿ ಲಕ್ಷ್ಮಣ ಸವದಿಯವರನ್ನು ಗೆಲ್ಲಿಸಬೇಕು ಎಂದು ಎಂ.ಬಿ.ಪಾಟೀಲ ಹೇಳಿದರು.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಎಂ.ಬಿ.ಪಾಟೀಲರನ್ನು ಆಯ್ಕೆ ಮಾಡಲು ಈಗಾಗಲೇ ಮತದಾರರು ನಿರ್ಧರಿಸಿದ್ದಾರೆ. ಈ ಮುಂಚೆ ಬಿಜೆಪಿ ತತ್ವ ಮತ್ತು ಸಿದ್ಧಾಂತಗಳು ಬೇರೆಯಾಗಿದ್ದವು. ಈಗ ಬಿಜೆಪಿಯಲ್ಲಿ ವ್ಯಾಪಾರೀಕರಣ ಪ್ರಾರಂಭವಾಗಿದೆ. ರಾಜರು ವ್ಯಾಪಾರಕ್ಕೆ ನಿಂತರೆ ಪ್ರಜೆಗಳು ಭಿಕ್ಷುಕರಾಗುತ್ತಾರೆ ಎಂಬ ಮಾತಿನಂತೆ ಬಿಜೆಪಿಯಲ್ಲಿ ವ್ಯಾಪಾರೀಕಣರ ನಡೆಯುತ್ತಿದೆ. ಪಕ್ಷ ವಿರೋಧಿಗಳು, ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವವರು, ವ್ಯಭಿಚಾರದಲ್ಲಿ ತೊಡಗಿರುವವರು, ಭ್ರಷ್ಟಾಚಾರದಲ್ಲಿ ಮುಳುಗಿರುವವರಿಗೆ ಬಿಜೆಪಿಯಲ್ಲಿ ಮಾನ್ಯತೆ ಕೊಡಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಿಜೆಪಿ ತೊರೆಯಲು ನಿರ್ಧರಿಸಿದಾಗ ಎಂ.ಬಿ.ಪಾಟೀಲರು ನನಗೆ ಬೆಂಬಲ ನೀಡಿ ಕಾಂಗ್ರೆಸ್ ಸೇರಲು ಸ್ಫೂರ್ತಿಯಾಗಿದ್ದಾರೆ. ಈಗ ನಾವಿಬ್ಬರೂ ಕೂಡಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡುತ್ತಿದ್ದೇವೆ. ಬಬಲೇಶ್ವರ ಮತ್ತು ಅಥಣಿ ಮತದಾರರು ನಮ್ಮಿಬ್ಬರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಗಜಾನನ ಮಂಗಸೂಳಿ, ಶಂಕರಗೌಡ ಬಿರಾದಾರ, ಶಿವಪುತ್ರ ಅವಟಿ, ಎ.ಡಿ.ಮುಲ್ಲಾ, ಬಾಬುಗೌಡ ಬಿರಾದಾರ, ಸೋಮಣ್ಣ ಅಗ್ರಾಣಿ, ಸುರೇಶ ಬಾಬಾನಗರ, ಗಾಂಧಿಬಾಯಿ ಗಡಾಲೊಟ್ಟಿ, ಪ್ರಕಾಶಗೌಡ ಬಿರಾದಾರ, ಅಶೋಕಗೌಡ ಬಿರಾದಾರ, ಧರೆಪ್ಪ ಬಿರಾದಾರ, ಮಲ್ಲಪ್ಪ ಕೊಂಡಿ, ಬಾಳು ಜಗದಿ, ಸದಾಶಿವ ಬುಟಾಳೆ, ಬಸವರಾಜ ದೇಸಾಯಿ, ವಿ.ಎಸ್.ಪಾಟೀಲ, ಚನ್ನಪ್ಪ ಕೊಪ್ಪದ ಮುಂತಾದವರು ಉಪಸ್ಥಿತರಿದ್ದರು.