ಮುಂಬೈ[ನ.24]: ಎನ್‌ಸಿಪಿಯಿಂದ ಬಂಡೆದ್ದು ಬಂದ ಅಜಿತ್‌ ಪವಾರ್‌ ಬಣದ ಜತೆ ಬಿಜೆಪಿ ಮಹಾರಾಷ್ಟ್ರದ ಅಧಿಕಾರ ಚುಕ್ಕಾಣಿಯನ್ನೇನೋ ಹಿಡಿದಿದೆ. ಆದರೆ ಬಿಜೆಪಿ-ಅಜಿತ್‌ ಪವಾರ್‌ ಮೈತ್ರಿಕೂಟದ ನಡುವೆ ಬೆಟ್ಟದಷ್ಟುಸವಾಲುಗಳಿವೆ. ಒಂದು ಕಡೆ ಮೊದಲ ಹಂತದಲ್ಲಿ ಬಹುಮತ ಸಾಬೀತು ಮಾಡಬೇಕು ಎಂಬ ಸವಾಲು ಇದ್ದರೆ, ನಂತರದ ಹಂತದಲ್ಲಿ ಅಜಿತ್‌ ಪವಾರ್‌ ಮೇಲೆ ತಾವೇ ಮಾಡಿದ ಭ್ರಷ್ಟಾಚಾರ ಆರೋಪಗಳನ್ನು ನುಂಗಿ ಫಡ್ನವೀಸ್‌ ಹೇಗೆ ಅಧಿಕಾರ ನಡೆಸುತ್ತಾರೆ ಎಂಬುದು ಪ್ರಶ್ನೆ.

ಇನ್ನು ಅಜಿತ್‌ ಪವಾರ್‌ ಮುಂದೆಯೂ ದೊಡ್ಡ ಸವಾಲುಗಳಿವೆ. ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳು, ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆಯಿಂದ ಅವರಿಗೆ ಕ್ಲೀನ್‌ಚಿಟ್‌ ಪಡೆಯುವ ಅನಿವಾರ್ಯತೆ ಇದೆ. ಅಲ್ಲದೆ, ಎನ್‌ಸಿಪಿಯ ಮೂರನೇ ಎರಡರಷ್ಟುಶಾಸಕರನ್ನು (36 ಶಾಸಕರನ್ನು) ತಮ್ಮತ್ತ ಸೆಳೆದುಕೊಂಡು ಬಹುಮತ ಸಾಬೀತುಪಡಿಸಲೇಬೇಕಾದ ಸ್ಥಿತಿಯಲ್ಲಿ ಅವರಿದ್ದಾರೆ. ಇಲ್ಲದೇ ಹೋದರೆ ಅಜಿತ್‌ ಸೇರಿ ಬಂಡೆದ್ದ ಶಾಸಕರು ಅನರ್ಹತೆಗೆ ಗುರಿಯಾಗಬಹುದು. ಈವರೆಗೆ ಬದ್ಧ ವಿರೋಧಿಗಳಾಗಿದ್ದ ಫಡ್ನವೀಸ್‌ ಹಾಗೂ ಅಜಿತ್‌ ಪವಾರ್‌ ಅವರು ಈಗ ಒಂದಾಗಿದ್ದು, ಬಹುಮತ ಸಾಬೀತಿನಲ್ಲಿ ಯಶಸ್ವಿಯಾದರೆ ಮುಂದೆ ಹೇಗೆ ಸ್ಥಿರ ಸರ್ಕಾರ ಕೊಡಬಲ್ಲರು ಎಂಬುದೂ ಜನರಲ್ಲಿ ಕಾಡುತ್ತಿರುವ ಪ್ರಶ್ನೆ.

ಫಡ್ನವೀಸ್‌ಗೆ ಬೆಟ್ಟದಷ್ಟು ಸವಾಲು:

‘ಎನ್‌ಸಿಪಿ ಜತೆ ಯಾವತ್ತೂ ಮೈತ್ರಿ ಮಾಡಿಕೊಳ್ಳಲ್ಲ’ ಎಂದು 2014ರಲ್ಲಿ ಟ್ವೀಟ್‌ ಮಾಡಿದ್ದ ಫಡ್ನವೀಸ್‌ ಅವರು ಈಗ ಇದೇ ಎನ್‌ಸಿಪಿಯ ಒಂದು ಬಣದ ಜತೆ ಅಧಿಕಾರ ಹಿಡಿದಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ‘ಅಜಿತ್‌ ಪವಾರ್‌ ಅವರ ಸ್ಥಳ ಆರ್ಥರ್‌ ರಸ್ತೆ ಜೈಲು’ ಎಂದಿದ್ದರು. ಈಗ ಇದನ್ನೇ ಶಿವಸೇನೆಯು ಬಂಡವಾಳ ಮಾಡಿಕೊಂಡಿದ್ದು, ‘ಆರ್ಥರ್‌ ರಸ್ತೆ ಜೈಲಲ್ಲೇ ಇನ್ನು ಸಂಪುಟ ಸಭೆ ನಡೆಯುತ್ತಾ’ ಎಂದು ವ್ಯಂಗ್ಯವಾಡಿದೆ.

ಈ ಮೂರು ದಾಖಲೆಗಳ ಮೇಲೆ ನಿಂತಿದೆ ಫಡ್ನವೀಸ್ ಸರ್ಕಾರದ ಭವಿಷ್ಯ!

ಈ ಹಿಂದೆ ಫಡ್ನವೀಸ್‌ ಅವರು ವಿಪಕ್ಷದಲ್ಲಿದ್ದಾಗ ಎನ್‌ಸಿಪಿ ಮೇಲೆ ಸಾಕಷ್ಟುಆರೋಪ ಹೊರಿಸಿದ್ದರು. 2014ರಲ್ಲಿ ಅವರು ಮುಖ್ಯಮಂತ್ರಿಯಾದ ನಂತರ ಅಜಿತ್‌ ಪವಾರ್‌ ಅವರು ಭಾಗಿಯಾಗಿದ್ದಾರೆ ಎನ್ನಲಾದ ನೀರಾವರಿ ಗುತ್ತಿಗೆ ಪ್ರಕರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದ್ದರು. ಕಳೆದ ಚುನಾವಣೆ ವೇಳೆ ಎನ್‌ಸಿಪಿ ಮೇಲೆ ಅನೇಕ ಭ್ರಷ್ಟಾಚಾರ ಆರೋಪದ ಮಳೆಯನ್ನು ಫಡ್ನವೀಸ್‌ ಸುರಿಸಿದ್ದರು.

ಹೀಗಾಗಿ ಈ ಆರೋಪಗಳನ್ನು ನುಂಗಿಕೊಂಡು ತಮ್ಮ ‘ವೈರಿ’ ಆಗಿದ್ದ ಅಜಿತ್‌ ಪವಾರ್‌ ಜತೆ ಫಡ್ನವೀಸ್‌ ಹೇಗೆ ಸರ್ಕಾರ ನಡೆಸುತ್ತಾರೆ ಎಂಬುದು ಪ್ರಶ್ನೆ.

ಇನ್ನೊಂದೆಡೆ, ಬಹುಮತ ಸಾಬೀತು ಮಾಡಬೇಕಾದ ಅನಿವಾರ್ಯತೆ ಫಡ್ನವೀಸ್‌ ಅವರ ಮೊದಲ ಸವಾಲಾಗಲಿದೆ. ಅಜಿತ್‌ ಪವಾರ್‌ ಅವರ ಬಣವು ಮೂರನೇ ಎರಡರಷ್ಟುಎನ್‌ಸಿಪಿ ಶಾಸಕರನ್ನು ಕರೆದುಕೊಂಡು ಬರದೇ ಹೋದರೆ ಪಕ್ಷೇತರರು ಹಾಗೂ ಇತರರ ಮನವೊಲಿಸಿ ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಇದಕ್ಕಾಗಿ ಅವರು ಶಿವಸೇನೆ ಹಾಗೂ ಕಾಂಗ್ರೆಸ್‌ನಲ್ಲಿ ಒಡಕು ಸೃಷ್ಟಿಸಿ ‘ಆಪರೇಷನ್‌ ಕಮಲ’ಕ್ಕೆ ಮುಂದಾಗಬೇಕಾಗುತ್ತದೆ.

ಅಜಿತ್‌ ಪವಾರ್‌ಗೂ ಸವಾಲು:

ಅಜಿತ್‌ ಪವಾರ್‌ 2010ರಿಂದ 2012ರ ನಡುವೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿದ್ದರು. ಆ ವೇಳೆ ವಿದರ್ಭ ಪ್ರದೇಶದಲ್ಲಿ 13,500 ಕೋಟಿ ರು. ಮೌಲ್ಯದ 32 ನೀರಾವರಿ ಗುತ್ತಿಗೆಗಳನ್ನು ಮನಬಂದ ದರದಲ್ಲಿ ನೀಡಿದ ಆರೋಪ ಎದುರಾಗಿತ್ತು. ಬಳಿಕ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ‘ನಾನು ನಿರ್ದೋಷಿ ಎಂದು ಸಾಬೀತಾಗುವ ತನಕ ಕೇವಲ ಶಾಸಕನಾಗಿರುವೆ. ಯಾವುದೇ ಸಚಿವ ಹುದ್ದೆ ವಹಿಸಿಕೊಳ್ಳುವುದಿಲ್ಲ’ ಎಂದಿದ್ದರು.

ಫಡ್ನವೀಸ್‌ ಅವರು 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಜಿತ್‌ ವಿರುದ್ಧದ ಆರೋಪಗಳ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದ್ದರು.

2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ: RSS ಚಿಂತಕನ ಭವಿಷ್ಯ!

ಇನ್ನು ಇತ್ತೀಚಿನ ವಿಧಾನಸಭೆ ಚುನಾವಣೆಗೂ ಮುನ್ನ 25 ಸಾವಿರ ಕೋಟಿ ರು. ಮೌಲ್ಯದ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣ ಬೆಳಕಿಗೆ ಬಂದಿತ್ತು. ಇದರಲ್ಲೂ ಅಜಿತ್‌ ಪವಾರ್‌ ಆರೋಪಿ. ಅದರ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿದೆ. ಈ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಅಜಿತ್‌ ಪವಾರ್‌ ಶಾಸಕತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು.

ಇನ್ನು ಅಜಿತ್‌ ಪವಾರ್‌ ಅಲ್ಲದೆ, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌, ಪಕ್ಷದ ನಾಯಕರಾದ ಪ್ರಫುಲ್‌ ಪಟೇಲ್‌ ಹಾಗೂ ಛಗನ್‌ ಭುಜಬಲ್‌ ವಿರುದ್ಧವೂ ಭ್ರಷ್ಟಾಚಾರ ಆಪಾದನೆಗಳು ಇವೆ. ಅವುಗಳ ತನಿಖೆ ನಡೆಯುತ್ತಿದೆ.

ಅಜಿತ್‌ ಪವಾರ್‌ ಅವರು ತಮ್ಮ ಚಿಕ್ಕಪ್ಪ ಶರದ್‌ ಪವಾರ್‌ ಅವರ ವಿರುದ್ಧವೇ ಈಗ ಬಂಡೆದ್ದು, ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದಾರೆ. ತಮ್ಮದೇ ನಿಜವಾದ ಎನ್‌ಸಿಪಿ ಬಣ ಎಂದು ಅವರು ಗುರುತಿಸಿಕೊಳ್ಳಬೇಕೆಂದರೆ 54 ಎನ್‌ಸಿಪಿ ಶಾಸಕರಲ್ಲಿ 3ನೇ 2ರಷ್ಟು(ಅಂದರೆ 36 ಶಾಸಕರು) ಬೆಂಬಲ ಹೊಂದಿರಬೇಕು. ಅಷ್ಟುಶಾಸಕರ ಬೆಂಬಲವನ್ನು ಅವರು ಸದನದಲ್ಲಿ ಪ್ರದರ್ಶಿಸದೇ ಹೋದರೆ ಸರ್ಕಾರಕ್ಕೆ ಬಹುಮತ ದೊರಕುವುದು ಅನುಮಾನ. ಅಲ್ಲದೆ, 3ನೇ 2ರಷ್ಟುಬೆಂಬಲ ಹೊಂದಿರದ ಕಾರಣ ಬಂಡೆದ್ದ ಎಲ್ಲ ಎನ್‌ಸಿಪಿ ಶಾಸಕರೂ ಅನರ್ಹತೆಗೆ ಒಳಗಾಗಬೇಕಾಗುತ್ತದೆ.

ಸವಾಲುಗಳು

- ಫಡ್ನವೀಸ್‌-ಅಜಿತ್‌ ಪವಾರ್‌ ಅವರಿಗೆ ಬಹುಮತ ಸಾಬೀತುಪಡಿಸುವುದು ಮೊದಲ ಸವಾಲು

- ಅಜಿತ್‌ ಪವಾರ್‌ ಅನರ್ಹತೆ ಭೀತಿಯಿಂದ ಪಾರಾಗಲು ಎನ್‌ಸಿಪಿಯ ಕನಿಷ್ಠ 36 ಶಾಸಕರನ್ನು ಸೆಳೆಯಬೇಕು

- ಅಜಿತ್‌ ಪವಾರ್‌ಗೆ ಸಂಖ್ಯಾಬಲ ಕೊರತೆ ಇದ್ದರೆ, ಶಿವಸೇನೆ, ಕಾಂಗ್ರೆಸ್ಸನ್ನು ವಿಭಜಿಸಿ ‘ಆಪರೇಷನ್‌ ಕಮಲ’ಕ್ಕೆ ಫಡ್ನವೀಸ್‌ ಮುಂದಾಗಬೇಕು

- ಪಕ್ಷೇತರ ಹಾಗೂ ಇತರ ಶಾಸಕರ ಬೆಂಬಲ ಗಿಟ್ಟಿಸಿಕೊಳ್ಳುವುದೂ ಫಡ್ನವೀಸ್‌ಗೆ ಅನಿವಾರ‍್ಯವಾಗಬಹುದು

- ಅಜಿತ್‌ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದೇ ಫಡ್ನವೀಸ್‌. ಈಗ ಅದೇ ಅಜಿತ್‌ ಜತೆ ಸರ್ಕಾರ ನಡೆಸುವುದು ಅವರ ಮುಂದಿನ ದೊಡ್ಡ ಸವಾಲು

- ‘ಎನ್‌ಸಿಪಿ ಜತೆ ಅಧಿಕಾರ ಹಂಚಿಕೊಳ್ಳಲ್ಲ, ಅಜಿತ್‌ ಜಾಗ ಆರ್ಥರ್‌ ಜೈಲು’ ಎಂದಿದ್ದ ಫಡ್ನವೀಸ್‌ಗೆ ತಮ್ಮದೇ ಮಾತಿಂದ ಹಿಂದೆ ಸರಿವ ಅನಿವಾರ್ಯತೆ

- ತಮ್ಮ ಮೇಲಿನ ನೀರಾವರಿ ಹಗರಣ, ಸಹಕಾರ ಬ್ಯಾಂಕ್‌ ಹಗರಣದಿಂದ ಆರೋಪ ಮುಕ್ತಿ ಹೊಂದಲೇಬೇಕಾದ ಅನಿವಾರ್ಯತೆ ಅಜಿತ್‌ಗೆ

- ಆರೋಪದಿಂದ ಮುಕ್ತರಾಗದಿದ್ದರೆ ಅಜಿತ್‌ ಡಿಸಿಎಂ ಹುದ್ದೆಗೆ ಕಂಟಕ, ಸರ್ಕಾರಕ್ಕೂ ಅಪಾಯ

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು