ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆಯಲ್ಲಿ ತೇಜಸ್ವಿ ಯಾದವ್‌ ನೇತೃತ್ವದ ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ನಂ.1 ಆಗಿದ್ದರೂ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಹೇಗೆ? ಇದಕ್ಕೆ ಉತ್ತರ ಬಿಜೆಪಿ ಮತ್ತು ಆರ್‌ಜೆಡಿ ಸ್ಪರ್ಧಿಸಿದ ಸ್ಥಾನಗಳ ಸಂಖ್ಯೆಯಲ್ಲಿ ಅಡಗಿದೆ.

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಕೆಯಲ್ಲಿ ತೇಜಸ್ವಿ ಯಾದವ್‌ ನೇತೃತ್ವದ ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ನಂ.1 ಆಗಿದ್ದರೂ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಹೇಗೆ? ಇದಕ್ಕೆ ಉತ್ತರ ಬಿಜೆಪಿ ಮತ್ತು ಆರ್‌ಜೆಡಿ ಸ್ಪರ್ಧಿಸಿದ ಸ್ಥಾನಗಳ ಸಂಖ್ಯೆಯಲ್ಲಿ ಅಡಗಿದೆ.

ಬಿಜೆಪಿ ಈ ಬಾರಿ ಕಳೆದ ಬಾರಿಗಿಂತ ಒಂಬತ್ತು ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಆರ್‌ಜೆಡಿ ಬಿಜೆಪಿಗಿಂತ 42 ಹೆಚ್ಚಿನ ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. ಇದೇ ಕಾರಣಕ್ಕೆ 89 ಸ್ಥಾನ ಗೆದ್ದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೇವಲ 25 ಸೀಟು ಗೆದ್ದ ಆರ್‌ಜೆಡಿ ಮತಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಎನ್‌ಡಿಎ ಮೈತ್ರಿಕೂಟ 125 ಸ್ಥಾನ

2020ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 125 ಸ್ಥಾನ ಗೆದ್ದಿತ್ತು. ಆರ್‌ಜೆಡಿ-ಕಾಂಗ್ರೆಸ್‌ ಮಹಾಮೈತ್ರಿಕೂಟ 110 ಸ್ಥಾನದಲ್ಲಿ ಜಯಭೇರಿ ಸಾಧಿಸಿತ್ತು. ಆ ಚುನಾವಣೆಯಲ್ಲಿ ಎನ್‌ಡಿಎ ಮತಗಳಿಕೆ ಶೇ.37.26ರಷ್ಟಿದ್ದರೆ, ಮಹಾಮೈತ್ರಿಕೂಟ ಮತಗಳಿಕೆ ಶೇ.36.58ರಷ್ಟಿತ್ತು. ಅಂದರೆ ಎರಡೂ ಮೈತ್ರಿಕೂಟಗಳ ನಡುವಿನ ಮತಗಳಿಕೆ ಅಂತರ ಕೇವಲ ಶೇ.0.03 ಆಗಿತ್ತು.

ಎನ್‌ಡಿಎ ಮತಗಳಿಗೆ ಪ್ರಮಾಣ ಶೇ.46.6ಕ್ಕೇ

ಈ ಚುನಾವಣೆಯಲ್ಲಿ ಎನ್‌ಡಿಎ ಮತಗಳಿಗೆ ಪ್ರಮಾಣ ಶೇ.46.6ಕ್ಕೇರಿದರೆ, ಮಹಾ ಮೈತ್ರಿಕೂಟ ಶೇ.37.9ರಷ್ಟರಲ್ಲೇ ಇದೆ. ಅಂದರೆ ಸರಿಸುಮಾರು ಶೇ.10ರಷ್ಟು ಹೆಚ್ಚುಮತಗಳು ಎನ್‌ಡಿಎ ಪಾಲಾಗಿದೆ. ಇನ್ನು ಕಳೆದ ಚುನಾವಣೆಯಲ್ಲಿ ಶೇ.37.23ರಷ್ಟಿದ್ದ ಮಹಾಮೈತ್ರಿಕೂಟದ ಮತಗಳಿಕೆ ಈ ಬಾರಿಯೂ ಸರಿಸುಮಾರು ಅಷ್ಟೇ (ಶೇ.37.9) ಇದೆ.

ಕಳೆದ ಬಾರಿ ಎಲ್‌ಜೆಪಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಎನ್‌ಡಿಎ ಮೈತ್ರಿಕೂಟ ಕನಿಷ್ಠ 30 ಸ್ಥಾನ ಸೋಲಲು ಕಾರಣವಾಗಿತ್ತು. ಆದರೆ, ಈ ಬಾರಿ ಎಲ್‌ಜೆಪಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿತ್ತು. ಕಳೆದ ಬಾರಿಯಷ್ಟೇ ಮತಪ್ರಮಾಣವನ್ನು ಆ ಪಕ್ಷ ಈ ಬಾರಿಯೂ ಗಳಿಸಿದೆ. ಎಲ್‌ಜೆಪಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದ್ದರಿಂದ ಅತಿದೊಡ್ಡ ಲಾಭ ಜೆಡಿಯುಗೆ ಆಗಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಮತಗಳಿಕೆ ಪ್ರಮಾಣ ಕೊಂಚ ಅಂದರೆ ಏರಿಸಿಕೊಂಡಿದೆ. ಕಳೆದ ಬಾರಿ ಶೇ.19.46ರಷ್ಟಿದ್ದ ಮತಪ್ರಮಾಣ ಈ ಬಾರಿ ಶೇ.20.07ಕ್ಕೇರಿದೆ. ಇನ್ನು ಆರ್‌ಜೆಡಿ ಮತಗಳಿಕೆ ಕಳೆದ ಬಾರಿ(ಶೇ.23.11)ಗಿಂತ ಕೊಂಚ ಇಳಿಕೆಯಾಗಿ ಶೇ.23ರಷ್ಟಾಗಿದೆ.