ಬಿಹಾರದಲ್ಲಿ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದರು.
ಮಧುಗಿರಿ (ತುಮಕೂರು) (ನ.16): ಬಿಹಾರದಲ್ಲಿ ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ನಡೆದಿರುವುದು ಚುನಾವಣೆಯೇ ಅಲ್ಲ, ಅಲ್ಲಿ ಮತ ಖರೀದಿ ಮಾಡಲಾಗಿದೆ. ಚುನಾವಣೆಗೆ ಮುಂಚೆ ತಲಾ ₹10000 ನೀಡಿ ಓಟು ಪಡೆದಿದ್ದಾರೆ. ಅಕ್ರಮವಾಗಿದೆ ಎಂಬ ನೆಪ ಹೇಳಿ ಲಕ್ಷಾಂತರ ಮತಾದರರನ್ನು ಹೊರ ಹಾಕಲಾಯಿತು. ಕೊನೆಗೆ ಎಷ್ಟೋ ಲಕ್ಷ ಜನರನ್ನು ಸೇರಿಸಲಾಯಿತು. ಚುನಾವಣಾ ಆಯೋಗ ಯಾರ ಕೈಯಲ್ಲಿದೆ ಎಂದು ಪ್ರಶ್ನಿಸಿದರು. ಈ ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಸಿಬಿಐ, ಇ.ಡಿ., ಐ.ಟಿ. ಹೆಸರು ಹೇಳಿ ಹೆದರಿಸಲಾಗುತ್ತಿದೆ ಎಂದರು.
ತುರ್ತು ನಿರ್ಗಮನ ದ್ವಾರ ಪರಿಶೀಲಿಸದವರ ವಿರುದ್ಧ ಕ್ರಮ: ಸಾರ್ವಜನಿಕ ಸೇವಾ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರ ಇಲ್ಲದಿದ್ದರೂ ನೋಂದಣಿ ಮತ್ತು ಅರ್ಹತಾ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು. ಸಾರಿಗೆ ಇಲಾಖೆ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಸಾರ್ವಜನಿಕ ಸೇವೆ ನೀಡುವ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ವಾಹನಗಳ ನೋಂದಣಿ ಮತ್ತು ಅರ್ಹತಾ ಪತ್ರ ನೀಡುವ ಮುನ್ನ ತುರ್ತು ನಿರ್ಗಮನ ದ್ವಾರ ಅಳವಡಿಸಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು.
ಒಂದು ವೇಳೆ ತುರ್ತು ನಿರ್ಗಮನ ದ್ವಾರ ಇಲ್ಲದಿದ್ದರೂ ನೋಂದಣಿ ಮತ್ತು ಅರ್ಹತಾ ಪತ್ರ ನವೀಕರಣ ಮಾಡಿರುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಎಲ್ಲ ನೋಂದಣಿ ಪ್ರಾಧಿಕಾರಗಳಿಗೆ ಸುತ್ತೋಲೆ ಹೊರಡಿಸಬೇಕು ಎಂದು ಸಾರಿಗೆ ಆಯುಕ್ತರಿಗೆ ನಿರ್ದೇಶಿಸಿದರು. ಕೆಲ ವಾಹನಗಳು ಕಿಟಕಿ ಗಾಜುಗಳನ್ನೇ ತುರ್ತು ನಿರ್ಗಮನ ದ್ವಾರವೆಂದು ಅಳವಡಿಸಿರುವುದು ಕಂಡು ಬಂದಿದೆ. ಅದರ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಪ್ರವರ್ತನ ಕಾರ್ಯ ನಡೆಸುವ ಸಿಬ್ಬಂದಿ, ಅಧಿಕಾರಿಗಳು ಈ ಕುರಿತು ವಾಹನಗಳನ್ನು ಪರಿಶೀಲಿಸುವಾಗ ಗಮನಿಸಬೇಕು ಎಂದರು.
ತಪಾಸಣಾ ಕಾರ್ಯ ಹೆಚ್ಚಿಸಿ
ಸಾರ್ವಜನಿಕ ಸೇವೆ ನೀಡುವ ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಸರಕು ಸಾಗಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಅದರ ಜತೆಗೆ ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದ ತೆರಿಗೆ ಪಾವತಿಸದೇ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಎಲ್ಲದರ ಕುರಿತು ನಿರಂತರವಾಗಿ ತಪಾಸಣೆ ನಡೆಸಬೇಕು. ನಿಯಮ ಉಲ್ಲಂಘಿಸುವ ಮತ್ತು ತೆರಿಗೆ ಪಾವತಿಸದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ತಪಾಸಣೆ ಹೆಚ್ಚಿಸಬೇಕು. ಅದರಲ್ಲೂ ಶಾಲಾ ವಾಹನಗಳು ಅರ್ಹತಾ ಪತ್ರ ನವೀಕರಿಸಿವೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಅರ್ಹತಾ ಪತ್ರ ನವೀಕರಿಸದಿದ್ದರೆ ವಾಹನ ಮಾಲೀಕರಿಗೆ ನೋಟಿಸ್ ನೀಡಿ ನಿಯಮದಂತೆ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರವನ್ನು ಸಾರಿಗೆ ಇಲಾಖೆಗೆ ಸಂಬಂಧಿಸಿದ ಕಚೇರಿಗಳಿಂದಲೇ ವಿತರಿಸಬೇಕು. ಕೆಲ ಖಾಸಗಿ ಚಾಲನಾ ತರಬೇತಿ ಶಾಲೆಗಳಿಂದ ಡಿಎಲ್ ಮತ್ತು ಆರ್‌ಸಿ ವಿತರಿಸುವ ದೂರುಗಳಿವೆ. ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಖಾಸಗಿ ಚಾಲನಾ ತರಬೇತಿ ಶಾಲೆಗಳಿಂದ ಡಿಎಲ್ ಮತ್ತು ಆರ್‌ಸಿ ವಿತರಣೆ ಕಂಡುಬಂದರೆ, ಆ ಶಾಲೆಗಳ ಬದಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆಗೆ 14,457.73 ಕೋಟಿ ರು. ರಾಜಸ್ವ ಸಂಗ್ರಹದ ಗುರಿ ನೀಡಲಾಗಿದೆ. 2025ರ ಅಕ್ಟೋಬರ್ ಅಂತ್ಯಕ್ಕೆ 7,451.45 ಕೋಟಿ ರು.ಗಳಷ್ಟು ರಾಜಸ್ವ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಸಚಿವ ರಾಮಲಿಂಗಾರೆಡ್ಡಿ ಅವರಿಗೆ ತಿಳಿಸಿದರು.
