ಬಿಹಾರ ವಿಧಾನಸಭೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಂದುವರೆಯಬೇಕೇ ಅಥವಾ ಬೇಡವೇ ಎಂಬ ಪರ-ವಿರೋಧದ ಚರ್ಚೆಗೆ ಮತ್ತೆ ಚಾಲನೆ ಸಿಗುವ ನಿರೀಕ್ಷೆಯಿದೆ.
ಬೆಂಗಳೂರು (ನ.15): ಬಿಹಾರ ವಿಧಾನಸಭೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಂದುವರೆಯಬೇಕೇ ಅಥವಾ ಬೇಡವೇ ಎಂಬ ಪರ-ವಿರೋಧದ ಚರ್ಚೆಗೆ ಮತ್ತೆ ಚಾಲನೆ ಸಿಗುವ ನಿರೀಕ್ಷೆಯಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ವಿಜಯೇಂದ್ರ ಅವರನ್ನು ಮುಂದುವರೆಸುವ ಬಗ್ಗೆ ಅಪಸ್ವರ ಎತ್ತಿದ್ದ ಪಕ್ಷದ ಕೆಲ ನಾಯಕರು ಮೌನಕ್ಕೆ ಶರಣಾಗಿದ್ದರು. ಇದೀಗ ಚುನಾವಣೆ ಮುಗಿಯುತ್ತಿದ್ದಂತೆಯೇ ವಿಜಯೇಂದ್ರ ವಿರೋಧಿ ಬಣದ ನಾಯಕರು ಮತ್ತೆ ಕ್ರಿಯಾಶೀಲರಾಗುವ ಸಾಧ್ಯತೆಯಿದೆ.
ಕರ್ನಾಟಕ ಸೇರಿ ತೀರಾ ಕಗ್ಗಂಟಾದ 2-3 ರಾಜ್ಯಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಬಿಜೆಪಿ ವರಿಷ್ಠರು ಮುಂದೂಡಿದ್ದರು. ಈ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕವೂ ಆಗಬೇಕಿದೆ. ಹಾಲಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ.ನಡ್ಡಾ ಅವರು ಕೇಂದ್ರ ಸಚಿವರಾಗಿರುವುದರಿಂದ ಆ ಸ್ಥಾನಕ್ಕೂ ಹೊಸಬರ ನೇಮಿಸಬೇಕಿದೆ. ಇದೀಗ ರಾಷ್ಟ್ರೀಯ ಅಧ್ಯಕ್ಷರ ನೇಮಕ ಬಳಿಕ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳುವರೋ ಅಥವಾ ಮೊದಲೇ ಮಾಡುವರೋ ಎಂಬುದನ್ನು ಕಾದು ನೋಡಬೇಕು.
ಬಿವೈವಿ ಮುಂದುವರಿಯು ಸಾಧ್ಯತೆ: ಸದ್ಯದ ಪರಿಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ಸಂಭವ ಹೆಚ್ಚಾಗಿದೆ. ಈಗಾಗಲೇ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಎರಡು ವರ್ಷಗಳನ್ನೇ ಕಳೆದಿದ್ದಾರೆ. ಈಗ ಹೊಸದಾಗಿ ಚುನಾವಣಾ ಪ್ರಕ್ರಿಯೆ ನಡೆಸಿ ಮುಂದಿನ ಮೂರು ವರ್ಷಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆಯೇ ಅಥವಾ ಇನ್ನೂ ಒಂದು ವರ್ಷ ಇದೇ ರೀತಿ ಮುಂದುವರೆಸಲಾಗುತ್ತದೆಯೇ ಎಂಬುದು ಕುತೂಹಲಕರವಾಗಿದೆ. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್ ಸೇರಿ ವಿಜಯೇಂದ್ರ ಅವರ ವಿರೋಧಿ ಬಣದ ನಾಯಕರು ಶೀಘ್ರದಲ್ಲೇ ಸಭೆ ಸೇರಿ ತಮ್ಮ ಮುಂದಿನ ತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದೆಯೂ ಇದೇ ವಿಷಯ ಮುಂದಿಟ್ಟುಕೊಂಡು ಹಲವು ಬಾರಿ ದೆಹಲಿಗೆ ತೆರಳಿದ್ದ ಈ ನಾಯಕರಿಗೆ ವರಿಷ್ಠರು ಬಿಹಾರ ಚುನಾವಣೆ ಮುಗಿದ ಬಳಿಕ ಚರ್ಚೆ ನಡೆಸೋಣ ಎಂಬ ಮಾತನ್ನು ಹೇಳಿದ್ದರು. ಇದೀಗ ಚುನಾವಣೆ ಮುಗಿದಿದ್ದರಿಂದ ತಮ್ಮ ಬೇಡಿಕೆ ಮುಂದಿಟ್ಟು ವಿರೋಧಿ ಬಣದ ನಾಯಕರು ಮತ್ತೆ ದೆಹಲಿಗೆ ತೆರಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮೈತ್ರಿ ಮತ್ತಷ್ಟು ಗಟ್ಟಿಗೆ ಯತ್ನ
ಬಿಹಾರ ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನ ನಡೆಯುವುದು ನಿಶ್ಚಿತವಾಗಿದೆ. ಅತ್ತ ಬಿಹಾರದಲ್ಲಿ ಜೆಡಿಯು ನೆರವಿನೊಂದಿಗೆ ಬಿಜೆಪಿ ಹಂತ ಹಂತವಾಗಿ ತನ್ನ ಪ್ರಾಬಲ್ಯ ವೃದ್ಧಿಸಿಕೊಂಡಿದ್ದರಿಂದ ಕರ್ನಾಟಕದಲ್ಲೂ ಜೆಡಿಎಸ್ ಮೈತ್ರಿಯೊಂದಿಗೆ ಬಿಜೆಪಿ ಪೂರ್ಣ ಪ್ರಮಾಣದ ಸರ್ಕಾರ ಸ್ಥಾಪಿಸಬಹುದು ಎಂಬ ಚರ್ಚೆ ಉಭಯ ಪಕ್ಷಗಳಲ್ಲೂ ಆರಂಭವಾಗಿದೆ. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆ ಮಾದರಿಯಲ್ಲೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೀಟು ಹಂಚಿಕೆಯಲ್ಲಿ ಹೆಚ್ಚು ಗೊಂದಲ ಮಾಡಿಕೊಳ್ಳದೆ ಮುಂದೆ ಸಾಗಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಧಿಕಾರದ ಗದ್ದುಗೆ ಏರಬಹುದು ಎಂಬ ಲೆಕ್ಕಾಚಾರ ನಡೆದಿದೆ.
