ಚನ್ನಪಟ್ಟಣ ನೀರಾವರಿ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ಭರವಸೆ; ಡಿಸಿಎಂ ಡಿ.ಕೆ.ಶಿವಕುಮಾರ್
ಚನ್ನಪಟ್ಟಣ ಕ್ಷೇತ್ರದಲ್ಲಿನ ನೀರಾವರಿ ಯೋಜನೆ ಅಭಿವೃದ್ಧಿಗೆ 200 ಕೋಟಿ ರೂ. ವಿಶೇಷ ಅನುದಾನ ತಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
ರಾಮನಗರ (ಜೂ.26): ಚನ್ನಪಟ್ಟಣ ಕ್ಷೇತ್ರದಲ್ಲಿನ ನೀರಾವರಿ ಯೋಜನೆ ಅಭಿವೃದ್ಧಿಗೆ 200 ಕೋಟಿ ರೂ. ವಿಶೇಷ ಅನುದಾನ ತಂದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಆದರೆ, ಈ ಬಾರಿ ನಿಮ್ಮ ಶಾಸಕ ಯಾರಾಗಬೇಕೆಂದು ನೀವೇ ನಿರ್ಧಾರ ಮಾಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು, ನಾನು ಸುಮಾರು 150ರಿಂದ 200ಕೋಟಿ ಸ್ಪೆಷಲ್ ಗ್ರ್ಯಾಂಟ್ ತರ್ತೀನಿ. ನೀರಾವರಿ ಅಭಿವೃದ್ಧಿಗೆ ಕೆಲಸ ಮಾಡ್ತೀವಿ. ಈಗಾಗಲೇ ಪ್ರತಿಯೊಬ್ಬ ರೈತರಿಗೂ ಟ್ರಾನ್ಸ್‌ಫಾರ್ಮರ್ ಕೊಟ್ಟಿದ್ದೇವೆ. ನಾನು ಪವರ್ ಮಿನಿಸ್ಟರ್ ಆಗಿದ್ದಾಗ ಅದನ್ನ ಕೊಟ್ಟಿದ್ದೇವೆ. ನನ್ನ ಕೊಡುಗೆ ಬಗ್ಗೆ ಯಾರು ಏನು ಬೇಕಾದ್ರೂ ಪ್ರಶ್ನೆ ಮಾಡಲಿ. ನನ್ನ ನಿಮ್ಮ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧವಾಗಿದೆ. ನಾನು ಯಾವಾಗಲೂ ನಿಮ್ಮ ಜೊತೆಯೇ ಇರ್ತೇನೆ. ನಿಮ್ಮನ್ನ ಬಿಟ್ಟುಹೋಗುವ ವ್ಯಕ್ತಿ ನಾನಲ್ಲ. ಇಷ್ಟು ದಿನ ಕೇವಲ ಆಶ್ವಾಸನೆ ಮೇಲೆ ಬದುಕುತ್ತಿದ್ದಿರಿ. ನಿಮ್ಮ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡ್ತೇನೆ ಎಂದು ಹೇಳಿದರು.
ಚನ್ನಪಟ್ಟಣ ಜೆಡಿಎಸ್‌ಗೆ ಬಿಟ್ಟುಕೊಡುವ ಸುಳಿವು ಕೊಟ್ಟ ವಿಜಯೇಂದ್ರ; ಎದ್ದು ಬಿದ್ದು ದೆಹಲಿಗೋಡಿದ ಸಿ.ಪಿ.ಯೋಗೇಶ್ವರ್
ಅಧಿಕಾರಿಗಳಿಗೆ ಗುಲಾಮಗಿರಿ ಮಾಡಬೇಡಿ ಎಂದಿದ್ದ ಹೆಚ್‌ಡಿಕೆಗೆ ಟಾಂಗ್: ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಜನಸ್ಪಂದನಾ ಕಾರ್ಯಕ್ರಮದಲ್ಲಿ ಇದ್ದೀರಿ. ನಿಮ್ಮನ್ನು ನಾನು ಗುಲಾಮರು ಎಂದು ಕರೆಯಲ್ಲ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಕರೆಯುತ್ತಾರೆ. ದೇವರ ಕೆಲಸ ಮಾಡುವವರು ನೀವು. ನಿಮ್ಮ ಇಲ್ಲಿಯ ಮಾಜಿ ಶಾಸಕರು ಗುಲಾಮರು ಅಂತ ಕರೆದಿದ್ದಾರೆ. ಅದಕ್ಕೆ ನಾನು ನಿಮ್ಮ ಬಳಿ ಕ್ಷಮೆ ಕೇಳ್ತೀನಿ. ನಾನೂ ಕೂಡಾ ಸಂವಿಧಾನದಲ್ಲಿ ಒಬ್ಬ ಸರ್ಕಾರಿ ನೌಕರ. ಜನರ ಕೆಲಸಗಳನ್ನ ಮಾಡುವ ಒಬ್ಬ ನೌಕರ. ನೊಂದ ಜನಗಳಿಗೆ ಸಹಾಯ ಆಗಬೇಕು ಅಂತ ನಮಗೆ ಈ ಹುದ್ದೆ ನೀಡಲಾಗಿದೆ. ನಾವು ಅನೇಕ ಬೇಡಿಕೆಗಳನ್ನ ಇಟ್ಟುಕೊಂಡು ದೇವಾಲಯಕ್ಕೆ ಹೋಗ್ತಿವಿ. ಅದೇರೀತಿ ಸರ್ಕಾರಿ ಕಚೇರಿಗಳು ದೇವಾಲಯ ಇದ್ದಂತೆ. ದೇವರ ಕೆಲಸ ಮಾಡುವವರು ಸರ್ಕಾರಿ ಅಧಿಕಾರಿಗಳು ಎಂದು ಹೇಳುವ ಮೂಲಕ ಅಧಿಕಾರಿಗಳು ಗುಲಾಮಗಿರಿ ಬಿಟ್ಟು ಕೆಲಸ ಮಾಡುವಂತೆ ಹೇಳಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಚನ್ನಪಟ್ಟಣದ ಜನ ಸಾಕಷ್ಟು ಸಮಸ್ಯೆಗಳನ್ನ ಹೇಳಿಕೊಳ್ಳುತ್ತಿದ್ದಾರೆ. ಸಾಕಷ್ಟು ಕಡೆ ರಸ್ತೆ ಸಮಸ್ಯೆ ಇದೆ, ಇ-ಖಾತೆ, ಪೋಡಿಯಂತಹ ಸಮಸ್ಯೆ ಇದೆ. ಸಾಕಷ್ಟು ಕಡೆ ಕೆಲಸ ಮಾಡಲು ಅಧಿಕಾರಿಗಳು ಹಣ ಪಡೀತಿದ್ದಾರೆ ಅಂತ ದೂರು ಬಂದಿದೆ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ 3ಸಾವಿರ ಅರ್ಜಿಗಳು ಬಂದಿವೆ. ಎಲ್ಲಾ ಸಮಸ್ಯೆಗಳನ್ನ ಜನಸ್ಪಂದನಾ ಕಾರ್ಯಕ್ರಮದಲ್ಲಿ ಬಗೆಹರಿಸುತ್ತೇವೆ. ಎಲ್ಲಾ ಪಕ್ಷದವರೂ ಬಂದು ಇಲ್ಲಿ ಸಮಸ್ಯೆಗಳನ್ನ ಹೇಳಿಕೊಳ್ಳಬಹುದು. ಅವುಗಳನ್ನ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ. ಬಡವರ ಬದುಕಿನಲ್ಲಿ ಬದಲಾವಣೆ ತರಲು ಸಾಕಷ್ಟು ಯೋಜನೆಗಳಿವೆ. ಜನರು ಅದನ್ನ ಸದುಪಯೋಗ ಪಡಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.
ಶೂಟಿಂಗ್ ವೇಳೆ ಕಲುಷಿತ ತುಂಗಭದ್ರಾ ನದಿ ನೋಡಿ ಸಿಟ್ಟಿಗೆದ್ದ ನಟ ಅನಿರುದ್ಧ; ಮುಂದೆ ಮಾಡಿದ್ದೇನು ಗೊತ್ತಾ?
ಚನ್ನಪಟ್ಟಣ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಧಿಕಾರಿಗಳ ಸಭೆ ಮಾಡಿ ಅದನ್ನ ಬಗೆಹರಿಸುವ ಕೆಲಸ ಇಷ್ಟುದಿನ ಆಗಿಲ್ಲ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಹಿಂದಿನ ಎಂಎಲ್ಎ ಏನೋ ಲೆಕ್ಕಾಚಾರದ ಮೇಲೆ ನಿಮ್ಮ ಹೃದಯ ಗೆದ್ದಿದ್ದರು. ಈಗ ನಾನು ನಿಮ್ಮ ಹೃದಯ ಗೆಲ್ಲಲು ಬಂದಿದ್ದೀನಿ, ನಮ್ಮ ಕೈ ಬಲಪಡಿಸಿ. ನಾನು ಹಿಂದೆ ಕನಕಪುರದಲ್ಲೂ ಇಂತಹ ಜನಸ್ಪಂದನಾ ಕಾರ್ಯಕ್ರಮ ಮಾಡಿದ್ದೇವೆ. ಇಲ್ಲಿನ ಮಾಜಿ ಶಾಸಕರಿಗೆ ಇಂತಹ ಕಾರ್ಯಕ್ರಮಗಳಲ್ಲಿ ಇಂಟ್ರಸ್ಟ್ ಇರಲಿಲ್ಲ. ಈ ಬಾರಿ ಚನ್ನಪಟ್ಟಣದಲ್ಲಿ ನಿಮ್ಮ ಎಂಎಲ್ ಎ ಆಯ್ಕೆ ಆಗ್ತಾರೆ. ನಿಮಗೆ ಅಭಿವೃದ್ಧಿಯ ಹಸಿವಿದೆ, ನೋವಿದೆ. ಅದನ್ನ ನೀಗಿಸುವ ಕೆಲಸ ಆಗುತ್ತೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.