Asianet Suvarna News Asianet Suvarna News

‘ಅಪ್ಪ-ಮಗ’ನ ಕಾಲದ ಕಾಮಗಾರಿಗಳ ಬಗ್ಗೆಯೂ ತನಿಖೆ ನಡೆಸಿ: ಮಾಜಿ ಸಚಿವ ವಿ.ಸೋಮಣ್ಣ

ಈ ಹಿಂದೆ ಇದೇ ಪ್ರಿಯಕೃಷ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ 9 ವರ್ಷ ಶಾಸಕರಾಗಿದ್ದರು. ಪಕ್ಕದ ವಿಜಯನಗರ ಕ್ಷೇತ್ರದಲ್ಲಿ ಅವರ ತಂದೆ ಎಂ.ಕೃಷ್ಣಪ್ಪ 15 ವರ್ಷಗಳಿಂದ ಶಾಸಕರಾಗಿದ್ದಾರೆ. ಹೀಗಾಗಿ ಇವರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ತನಿಖೆ ನಡೆಸಬೇಕು. ಕಾಮಗಾರಿಗಳಲ್ಲಿ ಲೋಪಗಳು ಕಂಡು ಬಂದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ ಮಾಜಿ ಸಚಿವ ವಿ.ಸೋಮಣ್ಣ 

Demand for Investigation of Works during Congress Government Says V Somanna grg
Author
First Published Jul 26, 2023, 6:30 AM IST | Last Updated Jul 26, 2023, 6:30 AM IST

ಬೆಂಗಳೂರು(ಜು.26): ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರವಾರು ನಡೆದಿರುವ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಸೂಚಿಸಿರುವುದು ಸ್ವಾಗತಾರ್ಹ. ಇದರ ಜತೆಗೆ ಕಾಂಗ್ರೆಸ್‌ ಅವಧಿಯಲ್ಲಿ ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆಯೂ ತನಿಖೆಯಾಗಲಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.

ಮಂಗಳವಾರ ‘ಕನ್ನಡಪ್ರಭ’ದಲ್ಲಿ ಪ್ರಕಟವಾಗಿರುವ ‘ಹಿಂದಿನ ಸರ್ಕಾರದ ಕಾಮಗಾರಿಗಳ ಪರೀಕ್ಷೆ’ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಸೋಮಣ್ಣ, ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರಿಯಕೃಷ್ಣ ಅವರು ಕಳೆದ ಐದು ವರ್ಷದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಮಗಾರಿಗಳ ಪರೀಕ್ಷೆಗೆ ಒತ್ತಾಯಿಸಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದು ಸ್ವಾಗತಾರ್ಹ ಎಂದಿದ್ದಾರೆ.
ಮುಂದುವರೆದು, ಈ ಹಿಂದೆ ಇದೇ ಪ್ರಿಯಕೃಷ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ 9 ವರ್ಷ ಶಾಸಕರಾಗಿದ್ದರು. ಪಕ್ಕದ ವಿಜಯನಗರ ಕ್ಷೇತ್ರದಲ್ಲಿ ಅವರ ತಂದೆ ಎಂ.ಕೃಷ್ಣಪ್ಪ 15 ವರ್ಷಗಳಿಂದ ಶಾಸಕರಾಗಿದ್ದಾರೆ. ಹೀಗಾಗಿ ಇವರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ತನಿಖೆ ನಡೆಸಬೇಕು. ಕಾಮಗಾರಿಗಳಲ್ಲಿ ಲೋಪಗಳು ಕಂಡು ಬಂದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ: ತೇಜಸ್ವಿ ಸೂರ್ಯ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟ ಸೋಮಣ್ಣ

ನಾನು ಕಳೆದ ಐದು ವರ್ಷದಲ್ಲಿ ಗೋವಿಂದರಾಜನಗರ ಕ್ಷೇತ್ರದಲ್ಲಿ ಮಾಡಿರುವ ಕೆಲಸದಲ್ಲಿ ಶೇ.10ರಷ್ಟುಕೆಲಸವನ್ನು ಶಾಸಕ ಪ್ರಿಯಕೃಷ್ಣ ಮುಂದಿನ ಐದು ವರ್ಷ ಮಾಡಿ ತೋರಿಸಲಿ. ಆಗ ನಾನೇ ಅವರನ್ನು ಅಭಿನಂದಿಸುತ್ತೇನೆ. ನಾನು ಕಳೆದ ಐದು ವರ್ಷದಲ್ಲಿ ಕಣ್ಣಿಗೆ ಕಾಣುವಂತಾ ಕೆಲಸಗಳನ್ನು ಮಾಡಿದ್ದೇನೆ. ಲೋಪಗಳಿದ್ದಲ್ಲಿ ಯಾವುದೇ ತನಿಖೆ ಮಾಡಲಿ. ಜತೆಗೆ ಹಿಂದೆ ‘ಅಪ್ಪ-ಮಗ’ನ ಅವಧಿಯ ಕೆಲಸಗಳ ಬಗ್ಗೆಯೂ ತನಿಖೆಯಾಗಬೇಕು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಕೈಗೆತ್ತಿಕೊಂಡು ತಾರ್ಕಿಕ ಅಂತ್ಯ ಕಾಣಿಸಲಿ. ತಪ್ಪು ಅಡಗಿದ್ದರೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಗೆ ಗುರಿಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಶಾಸಕರಾದ ಎಂ.ಕೃಷ್ಣಪ್ಪ ಮತ್ತು ಪ್ರಿಯಕೃಷ್ಣ ಕಾಮಾಲೆ ಕಣ್ಣಿನವರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಹಿಂದಿನ 9 ವರ್ಷ ಅಭಿವೃದ್ಧಿ ಕೆಲಸ ಶೂನ್ಯ. ಈಗ ಅವರದೇ ಸರ್ಕಾರ ಅಧಿಕಾರದಲ್ಲಿದೆ. ಯಾವುದೇ ತನಿಖೆ ಮಾಡಿಸಲಿ. ಜತೆಗೆ ಅವರ ಅವಧಿಯ ಕೆಲಸಗಳ ಬಗ್ಗೆಯೂ ತನಿಖೆಯಾಗಲಿ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios