ನವದೆಹಲಿ / ಬೆಂಗಳೂರು(ಫೆ.11): ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 63 , ಬಿಜೆಪಿ 7 ರಲ್ಲಿ ಜಯ ಕಂಡಿದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ.

ಈಫಲಿತಾಂಶ ಇಲ್ಲಿಗೆ ನಿಲ್ಲುವುದಿಲ್ಲ. ಒಂದರ್ಥದಲ್ಲಿ ಬಿಎಸ್ ಯಡಿಯೂರಪ್ಪ ಅವರ ಕೈಯನ್ನು ಅರವಿಂದ್ ಕೇಜ್ರಿವಾಲ್ ಬಲಪಡಿಸಿದ್ದಾರೆ ಎಂದೇ ಹೇಳಬಹುದು. ಅರೇ ಇದು ಹೇಗೆ ಎನ್ನುತ್ತೀರಾ? ಇಲ್ಲಿದೆ ನೋಡಿ ಲೆಕ್ಕಾಚಾರ.

ನೆರೆ ಪರಿಹಾರ ವಿಚಾರ: ಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸಿದಾಗ ಸರಿಯಾದ ಸಮಯಕ್ಕೆ ಕೇಂದ್ರದ ನೆರವು ಸಿಗಲಿಲ್ಲ ಎನ್ನುವುದನ್ನು ಹಲವು ಸಾರಿ ಬಿಜೆಪಿ ನಾಯಕರೇ ಹೇಳಿದ್ದಾರೆ. ತುಮಕೂರಿಗೆ ನರೇಂದ್ರ ಮೋದಿ ಬಂದಿದ್ದಾಗ ವೇದಿಕೆಯಲ್ಲಿಯೇ ಸಿಎಂ ಯಡಿಯೂರಪ್ಪ ನೆರೆ ಪರಿಹಾರ ವಿಳಂಬದ ಬಗ್ಗೆ ಮಾತನಾಡಿದ್ದರು. ಒಟ್ಟಿನಲ್ಲಿ ಯಾವುದೋ ಒಂದು ಉದ್ದೇಶಕ್ಕೆ ಕೇಂದ್ರ ಬಿಎಸ್ ವೈ ಅವರಿಗೆ ಸ್ಪಂದನೆ ನೀಡಲು ವಿಳಂಬ ಮಾಡುತ್ತಲೇ ಬಂದಿತ್ತು.

ಮತ್ತೆ ಆಮ್ ಆದ್ಮಿ ದೆಹಲಿ ಗದ್ದುಗೆ ಏರಿದ್ದು ಹೇಗೆ?

ಸಚಿವ ಸಂಪುಟ: ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ತೆಗೆದುಕೊಳ್ಳಲು ಮೊದಲು ಹೈಕಮಾಂಡ್ ಅವಕಾಶ ಮಾಡಿಕೊಡಲಿಲ್ಲ. ಅಲ್ಲಿಯೂ ನಿಧಾನವೇ ಪ್ರಧಾನ ಎಂಬ ನೀತಿ ಕಂಡುಬಂತು. ಇದಾದ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಎಸ್ ವೈ ದೆಹಲಿಗೆ ಯಾತ್ರೆ ಮಾಡಬೇಕಾಗಿ ಬಂತು.

ಉಪಚುನಾವಣೆ: ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರದಿಂದ ಹೊರಕ್ಕೆ ಬಂದು ಸರ್ಕಾರ ಉರುಳಿಸಿದ ಮಿತ್ರ ಮಂಡಳಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಚುನಾವಣೆ ಎದುರಿಸಿತ್ತು. ಟಿಕೆಟ್ ಹಂಚಿಕೆ ವೇಳೆಯೂ ಬಿಎಸ್ ವೈ ಮೇಲೆ ಹೈಕಮಾಂಡ್ ಪ್ರಭಾವ ಬೀರಿತು. ರಾಣೇಬೆನ್ನೂರಿನಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಶಂಕರ್ ಅವರಿಗೆ ಟಿಕೆಟ್ ನಿರಾಕರಿಸಲಾಯಿತು.

ಇನ್ನು ಉಪಚುನಾವಣೆ ಪ್ರಚಾರಕ್ಕೆ ಕೇಂದ್ರದ ನಾಯಕರು ಆಗಮಿಸಲಿಲ್ಲ. ಬಿಎಸ್ ಯಡಿಯೂರಪ್ಪ ಅವರೇ ಏಕಾಂಗಿಯಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು. ಆದರೆ ಅಂತಿಮವಾಗಿ ಹದಿನೈದರಲ್ಲಿ ಬಿಜೆಪಿ ಹನ್ನೆರಡು ಸ್ಥಾನ ಜಯಿಸಿತ್ತು.

ಸಚಿವ ಸಂಪುಟ ವಿಸ್ತರಣೆ: ಉಪಚುನಾವಣೆ ನಂತರ ಗೆದ್ದು ಬಂದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಿಸುವುದು ದೊಡ್ಡ ಸವಾಲಾಗಿ ಬದಲಾಯಿತು. ಗೆದ್ದು ಬಂದ ನೂತನ ಶಾಸಕರಿಗೆ ಸಚಿವರಾಗಿ ಪ್ರಮಾಣ ವಚನ ತೆಗೆದುಕೊಳ್ಳಲು ತಿಂಗಳು ಕಾಯಬೇಕಾದ ಸ್ಥಿತಿ ಬಂದೊದಗಿತು. ಅಂತಿಮವಾಗಿ ಸಚಿವ ಸಂಪುಟ ವಿಸ್ತರಣೆಯಾಯಿತು.

ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿಗೆ ಕೈಕೊಟ್ಟಹೋದಾಗ ಕೇಂದ್ರದ ನಾಯಕರಿಗೆ ಒಂದು ಹಂತದ ಎಚ್ಚರಿಕೆ ರವಾನೆಯಾಗಿತ್ತು. ಇದಾದ ನಂತರಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಒಂದಿಷ್ಟು ನೆರೆ ಪರಿಹಾರದ ಹಣವೂ ಬಿಡುಗಡೆಯಾಗಿತ್ತು.

ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಮುಗ್ಗರಿಸಿದೆ. ಬಿಜೆಪಿ ಸೋಲಿಗೆ ಕಾರಣಗಳು ಏನೇ ಇರಬಹುದು.. ಆದರೆ ಸ್ಥಳೀಯ ನಾಯಕತ್ವ ಕಡೆಗಣಿಸಲಾಗದು ಎಂಬ ಸಂದೇಶವೂ ಇದರಿಂದ ರವಾನೆಯಾಗಿದೆ. ರಾಜ್ಯದಲ್ಲಿರುವ ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೆಹಲಿ ಫಲಿತಾಂಶ ಒಂದರ್ಥದಲ್ಲಿ ಬಲ ತುಂಬಿದೆ ಎಂದೇ ಹೇಳಬಹದು.