Asianet Suvarna News Asianet Suvarna News

ವಿಎಸ್‌ಐಎಲ್‌ ಉಳಿವಿಗೆ ಸಿಎಂ ಬಳಿ ನಿಯೋಗ: ಸಂಸ​ದ ಬಿ.ವೈ.​ರಾ​ಘ​ವೇಂದ್ರ

ಮುಚ್ಚುವ ಸ್ಥಿತಿಯಲ್ಲಿರುವ ಭದ್ರಾವತಿಯ ವಿಎಸ್‌ಐಎಲ್‌ ಕಾರ್ಖಾನೆಗೆ ಕೇಂದ್ರ ಸರ್ಕಾರ ಬಂಡವಾಳ ಹೂಡುವ ಪರಿಸ್ಥಿತಿಯಿಲ್ಲ. ಈ ಹಿನ್ನೆಲೆ ಶೀಘ್ರದಲ್ಲೆ ನಿಯೋಗ ತೆರ​ಳಿ ಮುಖ್ಯಮಂತ್ರಿ ಅವ​ರನ್ನು ಭೇಟಿ ಮಾಡಿ, ಕಾರ್ಖಾನೆಗೆ ಹೂಡಿಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Delegation to CM to save VSIL says by raghavendra at shivamogga rav
Author
First Published Jan 29, 2023, 8:07 AM IST

ಶಿವಮೊಗ್ಗ (ಜ.29) : ಮುಚ್ಚುವ ಸ್ಥಿತಿಯಲ್ಲಿರುವ ಭದ್ರಾವತಿಯ ವಿಎಸ್‌ಐಎಲ್‌ ಕಾರ್ಖಾನೆಗೆ ಕೇಂದ್ರ ಸರ್ಕಾರ ಬಂಡವಾಳ ಹೂಡುವ ಪರಿಸ್ಥಿತಿಯಿಲ್ಲ. ಈ ಹಿನ್ನೆಲೆ ಶೀಘ್ರದಲ್ಲೆ ನಿಯೋಗ ತೆರ​ಳಿ ಮುಖ್ಯಮಂತ್ರಿ ಅವ​ರನ್ನು ಭೇಟಿ ಮಾಡಿ, ಕಾರ್ಖಾನೆಗೆ ಹೂಡಿಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ​ರು, ವಿಐ​ಎ​ಸ್‌​ಎಲ್‌ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಹೋಗುತ್ತಿದೆ ಎಂದು ನೌಕರರು ಹಾಗೂ ನಿವೃತ್ತಿ ನೌಕರರ ಮುಖಂಡರು ಹಗಲು- ರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಕಾರ್ಮಿಕರ ಹಿತದೃಷ್ಟಿಯಿಂದ ರಾಜಕೀಯ ಕೆಸರಾಟಕ್ಕೆ ಅವಕಾಶ ನೀಡದೇ, ಕಾರ್ಖಾನೆ ಉಳಿಸಲು ಮತ್ತೆ ಪತ್ರ ವ್ಯವಹಾರ ಹಾಗೂ ಸಭೆಗಳನ್ನು ನಡೆಸಲಾಗುವುದು ಎಂದರು.

 

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ: ಸಂಸತ್ತಿನ ಗಮನ ಸಳೆದ ಸಂಸದ ರಾಘವೇಂದ್ರ

ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚು​ವು​ದ​ನ್ನು ತಡೆಗಟ್ಟುವ ಪ್ರಯತ್ನ ಬಲವಾಗಿ ನಡೆಯುತ್ತಿದೆ. ಅನೇಕ ವರ್ಷಗಳಿಂದ ವಿಐಎಸ್‌ಎಲ್‌ ಹಾಗೂ ಎಂಪಿಎಂ ಕಾರ್ಖಾನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮೈಸೂರು ಮಹಾರಾಜರು ಆರಂಭಿಸಿದ ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಹೋಗುತ್ತಿರುವುದು ದುರ್ದೈವ ಎಂದರು.

ಈ ಹಿಂದೆ ಲಾಭದಲ್ಲಿ ನಡೆಯುತ್ತಿದ್ದ ಕಾರ್ಖಾನೆ ಅನೇಕ ದಶಕಗಳಿಂದ ನಷ್ಟದ ಸುಳಿಗೆ ಸಿಕ್ಕಿದ್ದೇ ಹೆಚ್ಚು. ಅಂದಿನ ಯುಪಿಎ ಸರ್ಕಾರವು ಸಹ ಸರ್ಕಾರಿ ಸ್ವಾಮ್ಯದ ಸೇಲ್‌ಗೆ ವಹಿಸಿ, ಕಾರ್ಖಾನೆಗೆ ಜೀವ ತುಂಬಲು ಪ್ರಯತ್ನಿಸಿತ್ತು. ಸಂಸದನಾಗಿ ನಾನು ಸಹ 2 ಬಾರಿ ಕೇಂದ್ರದ ಸಚಿವರನ್ನು ಭದ್ರಾವತಿಗೆ ಕರೆಸಿ ಅಲ್ಲಿನ ಸ್ಥಿತಿಗತಿಗಳನ್ನು ಮನವರಿಕೆ ಮಾಡಿಕೊಟ್ಟಿದ್ದೆ. ಅವರು ಸಹ ಕಾರ್ಖಾನೆ ಅಭಿವೃದ್ಧಿಗೆ ಭರವಸೆ ನೀಡಿದ್ದರೂ ಸಾಧ್ಯವಾಗಲಿಲ್ಲ. ನಷ್ಟದಿಂದ ಪಾರಾಗಲು ಖಾಸಗಿಯವರಿಗೆ ಕಾರ್ಖಾನೆ ವಹಿಸುವ ಪ್ರಯತ್ನವಾಗಿ 2019ರ ಜುಲೈನಲ್ಲಿ ಟೆಂಡರ್‌ ಕರೆಯಲಾಗಿತ್ತು. ಯಾವುದೇ ಖಾಸಗಿ ಕಂಪನಿಗಳು ಇದಕ್ಕೆ ಆಸಕ್ತಿ ತೋರಲಿಲ್ಲ. ಮತ್ತೆ ಟೆಂಡರ್‌ ಕರೆದರೂ ಬರಲಿಲ್ಲ ಎಂದರು.

ಜಗತ್ತಿನಾದ್ಯಂತ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇದು ನಮ್ಮ ದೇಶದಲ್ಲೂ ಇದೆ. ಇದನ್ನು ಸರಿದೂಗಿಸಲು 2018- 19ರಲ್ಲಿ 28 ಕಂಪನಿಗಳಿಂದ .85 ಸಾವಿರ ಕೋಟಿ ಮೌಲ್ಯದ ಸರ್ಕಾರದ ಷೇರು ವಾಪಸ್‌ ಪಡೆಯಲಾಯಿತು. 2019- 2020ರಲ್ಲಿ 15 ಕಂಪನಿಗಳಿಂದ .15 ಸಾವಿರ ಕೋಟಿ, 2020- 2021ರಲ್ಲಿ 18 ಕಂಪನಿಗಳಿಂದ .32 ಸಾವಿರ ಕೋಟಿ, 2021- 2022ರಲ್ಲಿ 10 ಕಂಪನಿಗಳಿಂದ .13,500 ಸಾವಿರ ಕೋಟಿ ಹಾಗೂ 2022- 2023ರಲ್ಲಿ 8 ಕಂಪನಿಗಳಿಂದ .38 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ವಾಪಸ್‌ ಪಡೆಯಲಾಗಿದೆ. ದೇಶದಲ್ಲಿ ನಷ್ಟದಲ್ಲಿರುವ ಸುಮಾರು 80 ಕಾರ್ಖಾನೆಗಳನ್ನು ಸಹ ಮುಚ್ಚಲಾಗುತ್ತಿದೆ. ಇದಕ್ಕೆ ವಿಐಎಸ್‌ಎಲ್‌ ಹೊರತಾಗಿಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ಪ್ರಮುಖರಾದ ಬಿ.ಕೆ.ಶ್ರೀನಾಥ್‌, ಎಸ್‌.ಎನ್‌.ಚನ್ನಬಸಪ್ಪ, ಶಿವರಾಜ್‌, ಧರ್ಮಪ್ರಸಾದ್‌, ರಮೇಶ್‌, ಚಂದ್ರಶೇಖರ್‌, ವಿನ್ಸೆಂಟ್‌, ಕೆ.ವಿ.ಅಣ್ಣಪ್ಪ ಇದ್ದರು.

ಜಿಲ್ಲೆಯ ಆಸ್ತಿ ಆಗಿರುವ ಈ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದ್ದರೂ ಕೈಕಟ್ಟಿನಿಲ್ಲುವ ಪರಿಸ್ಥಿತಿ ಬಂದಿದೆ. ವಿಮಾನ ನಿಲ್ದಾಣ ಉದ್ಘಾಟನೆ ನಂತರ ವಿಮಾನದ ಹಾರಾಟದಿಂದ ಬಂಡವಾಳ ಹೂಡಿಕೆದಾರರು ಕಾರ್ಖಾನೆಗೆ ಬಂಡವಾಳ ಹೂಡಲು ಮುಂದೆ ಬರಬಹುದು ಎಂಬ ಆತ್ಮ ವಿಶ್ವಾಸವಿದೆ

- ಬಿ.ವೈ.ರಾಘವೇಂದ್ರ, ಸಂಸದ

ವಿಐಎಸ್‌ಎಲ್-ಎಂಪಿಎಂ ಉಳಿಸಬೇಕು:

ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹೋರಾಟ ಅನಿವಾರ್ಯ ಎಂದು ಬಹುತೇಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸ್ಥಳೀಯ ಶಾಸಕ ಬಿ.ಕೆ. ಸಂಗಮೇಶ್ವರ್‌ ನೇತೃತ್ವದಲ್ಲಿ ಹಳೇ ನಗರದ ವೀರಶೈವ ಸಭಾಭವನದಲ್ಲಿ ಶನಿವಾರ ಜರುಗಿದ ವಿಐಎಸ್‌ಎಲ್‌ ಮತ್ತು ಎಂಪಿಎಂ ಕಾರ್ಖಾನೆ ಉಳಿಸಲು ಸರ್ವ ಸಮಾಜದ ಮತ್ತು ಸಂಘ-ಸಂಸ್ಥೆಗಳ, ಕಾರ್ಮಿಕರ ಪೂರ್ವಭಾವಿ ಸಭೆಯಲ್ಲಿ ಪ್ರಮುಖರಾದ ಟಿ.ಚಂದ್ರೇಗೌಡ, ಶಿವಮಾಧು, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್‌ ಸೇರಿದಂತೆ ಮಾತನಾಡಿ, ಪ್ರಸ್ತುತ ಉಕ್ಕು ಪ್ರಾಧಿಕಾರ ಕಾರ್ಖಾನೆ ಮುಚ್ಚುವ ಅಂತಿಮ ಸಿದ್ಧತೆಗೆ ಮುಂದಾಗಿದೆ. ಈ ಹಿಂದೆ ಕಾರ್ಖಾನೆ ಉಳಿಸುವ ಸಂಬಂಧ ನಿರಂತರ ಹೋರಾಟಗಳ​ನ್ನು ನಡೆಸಲಾ​ಗಿದೆ. ಹೀಗಿ​ದ್ದರೂ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉಕ್ಕು ಪ್ರಾಧಿಕಾರ ನಿರ್ಲಕ್ಷ ್ಯತನದಿಂದ ವರ್ತಿಸುತ್ತಿದೆ. ಅಲ್ಲದೇ, ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದರ ಪರಿಣಾಮ ಪ್ರಸ್ತುತ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿದೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಲಿ: ಸಂಸದ ರಾಘವೇಂದ್ರ

ಇದೀಗ ಕಾರ್ಖಾನೆ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಾರ್ಖಾನೆ ಕೇವಲ ಕಾರ್ಮಿಕರಿಗೆ ಮಾತ್ರ ಸೇರಿಲ್ಲ. ಎಲ್ಲರಿಗೂ ಸೇರಿದ್ದಾಗಿದೆ. ರಾಜಕೀಯ ಬದಿಗಿಟ್ಟು, ಪಕ್ಷ ಭೇದ ಮರೆತು, ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಯಾವುದೇ ರೀತಿಯ ಹೋರಾಟಕ್ಕೂ ಎಲ್ಲರೂ ಸಿದ್ಧರಾಗಬೇಕೆಂದರು. ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ.ಮಾಯಣ್ಣ, ಕಾಳೇಗೌಡ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್‌ ಪಳನಿ, ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಇನ್ನಿತರ ಪ್ರಮು​ಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios