ರಾಜಕೀಯ ಜಿದ್ದಾಜಿದ್ದಿ: ಶುರುವಾದ ಪಕ್ಷಾಂತರ ಪರ್ವ..!
ಕಲಬುರಗಿ ಜಿಲ್ಲೆಯ ಆಳಂದ ಅಸೆಂಬ್ಲಿಯಲ್ಲಿ ಗೆದ್ದು ಬೀಗಲು ಪ್ರಮುಖ ಪಕ್ಷಗಳಿಂದ ಪ್ರಬಲ ಪೈಪೋಟಿ ಶುರುವಾಗಿದೆ. ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸುವ ಮೂಲಕ ಗೆಲುವಿಗೆ ತಾಲೀಮು ನಡೆಸಿದ್ದಾರೆ.
ಆಳಂದ(ಫೆ.02): ಜಿಲ್ಲೆಯ ಆಳಂದ ಅಸೆಂಬ್ಲಿಯಲ್ಲಿ ಗೆದ್ದು ಬೀಗಲು ಪ್ರಮುಖ ಪಕ್ಷಗಳಿಂದ ಪ್ರಬಲ ಪೈಪೋಟಿ ಶುರುವಾಗಿದೆ. ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸುವ ಮೂಲಕ ಗೆಲುವಿಗೆ ತಾಲೀಮು ನಡೆಸಿದ್ದಾರೆ. ಬಿಜೆಪಿ ಶಾಸಕ ಸುಭಾಷ ಗುತ್ತೇದಾರ, ಮಾಜಿ ಶಾಸಕ ಕಾಂಗ್ರೆಸ್‌ನ ಮುಖಂಡ ಬಿ.ಆರ್. ಪಾಟೀಲ ಚುನಾವಣೆಯ ಕಣದ ಹಳೆಯ ಹುಲಿಗಳಾದರೆ, ಈ ಬಾರಿ ಜೆಡಿಎಸ್‌ನಿಂದ ಮಹೇಶ್ವರಿ ವಾಲಿ ಪೈಪೋಟಿಗೆ ಮುಂದಾಗಿದ್ದಾರೆ.
ಮತ್ತೊಂದಡೆ ತೆರೆಮೆರೆಯಲ್ಲಿ ಎನ್‌ಸಿಪಿಯಿಂದ ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಪೂಜಾ ಅವರ ಪತಿ ರಮೇಶ ಲೋಹಾರ ಅವರು ಎನ್‌ಸಿಪಿಯ ವರಿಷ್ಠ ನಾಯಕ ಶರತ ಪವಾರ ದೆಹಲಿಯ ನಿವಾಸದಲ್ಲಿ ಮಂಗಳವಾರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿಪಿಐನ ಮುಖಂಡ ಮೌಲಾ ಮುಲ್ಲಾ ಸೇರಿದಂತೆ ಇನ್ನೂಳಿದ ಪಕ್ಷಗಳ ಅಭ್ಯರ್ಥಿಗಳು ಸಹ ಕಣದಲ್ಲಿ ಸ್ಪರ್ಧೆಗೆ ನಿಂತುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
CHIKKMAGALAURU: ಸಿ.ಟಿ ರವಿ ವಿರುದ್ದ ನಿಂತರೆ 1 ಕೋಟಿ ನೀಡುವ ಅಫರ್ ಘೋಷಿಸಿದ ಸಿದ್ದರಾಮಯ್ಯ ಅಭಿಮಾನಿ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 679 ಮತಗಳು ಅಂತರದ ಗೆಲವು ಸಾಧಿಸಿದ ಕ್ಷೇತ್ರದ ಹಾಲಿ ಶಾಸಕ ಸುಭಾಷ ಗುತ್ತೇದಾರ ಪ್ರತಿಸ್ಪರ್ಧಿ ಬಿ.ಆರ್. ಪಾಟೀಲರನ್ನು ಪರಾಭವಗೊಳಿಸಿದ್ದರು. ತುಂಬ ಕಮ್ಮಿ ಅಂತರದ ಗೆಲವು ಇದಾಗಿರೋದರಿಂದ ಈ ಬಾರಿ ಗುತ್ತೇದಾರ್ ಪಾಟೀಲ್ ಕ್ಷೇತ್ರ ಸಂಚಾರ ಹೆಚ್ಚಿಗೆ ಮಾಡುವಂತಾಗಿದೆ.
ಎಲ್ಲ ಸಮುದಾಯಗಳಿಗೆ ಸಮುದಾಯ ಭವನ, ಬೆಳೆ ಪರಿಹಾರ, ಕೆರೆ ಗೋಕಟ್ಟೆನಿರ್ಮಾಣದಂತ ಅನೇಕ ಅಭಿವೃದ್ಧಿ ಮತ್ತು ಮೋದಿಪರ ಅಲೆಯೇ ಕ್ಷೇತ್ರದಲ್ಲಿ ಬಿಜೆಪಿ ಸುಭಾಷ ಗುತ್ತೇದಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ ಎಂದು ಗುತ್ತೇದಾರ ಪಾಳೆಯದ ಲೇಕ್ಕಾಚಾರ ನಡೆದಿದೆ. ಮತ್ತೊಂದಡೆ ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಸಹ ಬಿಜೆಪಿಯಿಂದ ಮುನಿಸಿಕೊಂಡ ಮುಖಂಡರು, ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸಳೆಯುವಲ್ಲಿ ಮುಂದಾಗಿದ್ದಾರೆ. ಬಿಜೆಪಿಯಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಮತದಾರರು ನಮ್ಮಪರವಾಲಿದ್ದಾರೆ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂಬುದು ಪಾಟೀಲ ಪಾಳೆಯದ ಲೆಕ್ಕಾಚಾರ.
ಇಲ್ಲಿ ಪಕ್ಷ ರಾಜಕಾರಣಕ್ಕಿಂತ ಶಾಸಕ ಸುಭಾಷ ಗುತ್ತೇದಾರ ಮತ್ತು ಮಾಜಿ ಶಾಸಕ ಬಿ.ಆರ್. ಪಾಟೀಲ ಅವರ ವ್ಯಕ್ತಿವರ್ಚಸ್ಸಿನದ್ದೇ ಪೈಪೋಟಿ. ಹೀಗಾಗಿ ಹಲವು ದಶಕದಿಂದ ಸೋಲು ಗೆಲುವು ಇವರಲ್ಲೇ ಅದಲ್ ಬದಲ್ ಮಾಡುತ್ತಿರುತ್ತದೆ. 3ನೇಯವರಾಗಿ ಜೆಡಿಎಸ್‌ನ ಮಹೇಶ್ವರಿ ವಾಲಿಯವರು ಪ್ರಚಾರ ಜೋರು ಮಾಡಿದ್ದಾರೆ. ಸದ್ಯಕ್ಕೆ ರಾಜಕೀಯ ಪಕ್ಷಗಳ ನಡುವೆ ಸಮಬಲದ ಪ್ರಚಾರದ ಪೈಪೋಟಿ ಕಂಡಿರೋದು ಆಳಂದ ಅಸೆಂಬ್ಲಿಯಲ್ಲಿ ಮುಂದಿನ ದಿನಗಳು ರಂಗೇರುವ ಸೂಚನೆ ನೀಡಿದೆ.