Asianet Suvarna News Asianet Suvarna News

ಸಂವಿಧಾನಕ್ಕೆ ಮೋದಿ ಸರ್ಕಾರದಿಂದ ಆತಂಕ: ಸಿಎಂ ಸಿದ್ದರಾಮಯ್ಯ

ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Defeat the anti-constitutional BJP government says CM Siddaramaiah rav
Author
First Published Feb 26, 2024, 5:59 AM IST

ಬೆಂಗಳೂರು (ಫೆ.26): ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಎರಡು ದಿನಗಳ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶ’ದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನಕ್ಕೆ ಮೋದಿ ಸರ್ಕಾರದಿಂದ ಆತಂಕ ಬಂದಿದೆ. ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಂವಿಧಾನಕ್ಕೆ ಧಕ್ಕೆ ಬಂದಿರುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಆರ್‌ಎಸ್‌ಎಸ್‌ನವರು ಸಂವಿಧಾನವನ್ನು ಗೌರವಿಸುವುದಿಲ್ಲ. ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿರುವ ಪಕ್ಷ ಎಂದರೆ ಬಿಜೆಪಿ.‌ ಜನ ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಜಗತ್ತಿನ ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅತ್ಯುತ್ತಮ ಅಂಶಗಳನ್ನು ಆಯ್ದುಕೊಂಡು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೇರಿಸಿದ್ದಾರೆ. ಆದರೆ, ಆರ್‌ಎಸ್‌ಎಸ್‌ನ ಗೋಲ್ವಾಲ್ಕರ್ ಸಂವಿಧಾನವನ್ನು ಗೊಂದಲದ ಗೂಡು ಎಂದಿದ್ದರು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ, ಹಕ್ಕುಗಳನ್ನು ನೀಡಿದ್ದಾರೆ. ಬುದ್ಧ, ಬಸವಾದಿ ಶರಣರು, ವಚನ ಕ್ರಾಂತಿಯ ಆಶಯಗಳು ಮತ್ತು ಕುವೆಂಪು, ನಾರಾಯಣಗುರು, ವಿವೇಕಾನಂದ ಮುಂತಾದವರ ಆಶಯಗಳ ಮೂರ್ತರೂಪವೇ ನಮ್ಮ ಸಂವಿಧಾನ ಎಂದು ವಿವರಿಸಿದರು.

ಸಂಸದ ಅನಂತಕುಮಾರ್ ಹೆಗಡೆ ಈ ಹಿಂದೆ ಸಚಿವರಾಗಿದ್ದಾಗ ಸಂವಿಧಾನವನ್ನು ಬದಲಾಯಿಸಲು ಅಧಿಕಾರಕ್ಕೆ ಬಂದಿದ್ದಾಗಿ ಹೇಳಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ತನ್ನ ನಿಲುವನ್ನು ಅವರ ಮೂಲಕ ಹೇಳಿಸಿತ್ತು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಆ ಹೇಳಿಕೆಯನ್ನು ಖಂಡಿಸಲಿಲ್ಲ. ಈ ಬಗ್ಗೆ ಇಡೀ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.ಈ ನಾಡಿನ ದುಡಿಯುವವರ ಹಕ್ಕುಗಳು, ಶ್ರಮಿಕರು, ರೈತರು, ಕಾರ್ಮಿಕರು ಮತ್ತು ಮಹಿಳಾ ಸಮುದಾಯದ ಅಸ್ತಿತ್ವ ಅಡಗಿರುವುದೇ ನಮ್ಮ ಸಂವಿಧಾನದಲ್ಲಿ. ಸಂವಿಧಾನ ಬದಲಾವಣೆಯಿಂದ ಈ ಎಲ್ಲಾ ಸಮುದಾಯಗಳು ಮರಳಿ ಗುಲಾಮಗಿರಿಗೆ ದೂಡಲ್ಪಡುತ್ತವೆ. ಸಂವಿಧಾನ ಇಲ್ಲದ ಸಂದರ್ಭದಲ್ಲಿ ಶೂದ್ರ, ದಲಿತ ಮತ್ತು ಶ್ರಮಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎನ್ನುವುದನ್ನು ಸ್ಮರಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೆಗ್ಡೆ ಹೇಳಿಕೆಯನ್ನು ಮೋದಿ ಖಂಡಿಸಲಿಲ್ಲ 

ಸಂಸದ ಅನಂತಕುಮಾರ್ ಹೆಗಡೆ ಈ ಹಿಂದೆ ಸಚಿವರಾಗಿದ್ದಾಗ ಸಂವಿಧಾನವನ್ನು ಬದಲಾಯಿಸಲು ಅಧಿಕಾರಕ್ಕೆ ಬಂದಿದ್ದಾಗಿ ಹೇಳಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ತನ್ನ ನಿಲುವನ್ನು ಅವರ ಮೂಲಕ ಹೇಳಿಸಿತ್ತು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಆ ಹೇಳಿಕೆಯನ್ನು ಖಂಡಿಸಲಿಲ್ಲ. 
- ಸಿದ್ದರಾಮಯ್ಯ ಮುಖ್ಯಮಂತ್ರಿ

Follow Us:
Download App:
  • android
  • ios