Asianet Suvarna News Asianet Suvarna News

11400 ಕೋಟಿ ವೆಚ್ಚದ ಸಣ್ಣ ನೀರಾವರಿ ಯೋಜನೆ ಮರುಪರಿಶೀಲನೆಗೆ ನಿರ್ಧಾರ: ಸಿದ್ದರಾಮಯ್ಯ

ಸಣ್ಣ ನೀರಾವರಿ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ತನ್ಮೂಲಕ 20 ಸಾವಿರ ಕೋಟಿ ರು.ಗೂ ಹೆಚ್ಚು ಬಾಕಿ ಕಾಮಗಾರಿಗಳು ಸೃಷ್ಟಿಯಾಗಿವೆ. 

Decision to review 11400 crore minor irrigation project Says CM Siddaramaiah gvd
Author
First Published Oct 13, 2023, 3:00 AM IST

ಬೆಂಗಳೂರು (ಅ.13): ‘ಸಣ್ಣ ನೀರಾವರಿ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ತನ್ಮೂಲಕ 20 ಸಾವಿರ ಕೋಟಿ ರು.ಗೂ ಹೆಚ್ಚು ಬಾಕಿ ಕಾಮಗಾರಿಗಳು ಸೃಷ್ಟಿಯಾಗಿವೆ. ಜತೆಗೆ 3,026 ಕೋಟಿ ರು. ಬಿಲ್‌ ಬಾಕಿ ಉಳಿದಿದೆ. ಹೀಗಾಗಿ ಇನ್ನೂ ಆರಂಭವಾಗದ 11,400 ಕೋಟಿ ರು. ಮೊತ್ತದ ಯೋಜನೆಗಳನ್ನು ತಾತ್ಕಾಲಿಕವಾಗಿ ಕೈಬಿಟ್ಟು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹೀಗಾಗಿ 2022-23 ಹಾಗೂ 2023-24ನೇ ಸಾಲಿನಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳ ಪೈಕಿ ಇನ್ನೂ ಕಾಮಗಾರಿ ಆರಂಭವಾಗದ ಸುಮಾರು 11,400 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ತಾತ್ಕಾಲಿಕ ತಡೆ ಬಿದ್ದಿದೆ. 

ಮುಖ್ಯಮಂತ್ರಿಗಳು ಈ ಬಗ್ಗೆ ಮತ್ತೊಂದು ಸುತ್ತು ಸಭೆ ನಡೆಸಲಿದ್ದು, ಅಗತ್ಯವಿರುವ ಕಾಮಗಾರಿಗಳಿಗೆ ಅನುಮತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಈ ಸೂಚನೆ ನೀಡಿದರು. ಇಲಾಖೆಯಲ್ಲಿ 2018ರ ವೇಳೆಗೆ ವಿವಿಧ ಯೋಜನೆಗಳ ಬಾಕಿ ಬಿಲ್‌ 440 ಕೋಟಿ ರು.ನಷ್ಟಿತ್ತು. ಸೆಪ್ಟೆಂಬರ್‌ ಅಂತ್ಯದ ವೇಳೆಗೆ 3036 ಕೋಟಿ ರು. ಗಳಷ್ಟಾಗಿದೆ. ಕಳೆದ ಎರಡು ವರ್ಷದಲ್ಲಿ ನಿಗದಿತ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಹೀಗಾಗಿ ಇನ್ನೂ ಪ್ರಾರಂಭವಾಗದ ಹಾಗೂ ಹೊಸ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ ರಾಕ್ಷಸರ ಸಮರ್ಥನೆಗೆ ನಿಂತುಕೊಂಡಿದೆ: ಚಕ್ರವರ್ತಿ ಸೂಲಿಬೆಲೆ

22,304 ಕೋಟಿ ರು. ಕಾಮಗಾರಿಗೆ ಮಂಜೂರು: 2023ರ ಏಪ್ರಿಲ್‌ 1ರ ವೇಳೆಗೆ ಇಲಾಖೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾದ ಮೊತ್ತ- 22304 ಕೋಟಿ ರು. ಅದರಲ್ಲಿ 31-3-2023ರವರೆಗೆ 9602.37 ಕೋಟಿ ರು. ವೆಚ್ಚವಾಗಿದೆ. 2023-24ನೇ ಸಾಲಿಗೆ ಬಾಕಿ ಕಾಮಗಾರಿಗಳನ್ನು ಕೈಗೊಳ್ಳಲು 12,696.35 ಕೋಟಿ ರು. ಅಗತ್ಯವಿದೆ. ಇದಲ್ಲದೆ, ಇಲಾಖೆಯಲ್ಲಿ ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ನಿರ್ವಹಿಸಲು 11,904 ಕೋಟಿ ರು. ಬಾಕಿ ಮೊತ್ತ ಬೇಕಾಗಿದೆ. ಹೀಗಾಗಿ ಪ್ರಾರಂಭವಾಗಿರುವ ಯೋಜನೆಗಳನ್ನು ಮುಂದುವರೆಸಿ, ಪ್ರಾರಂಭವಾಗದ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಕೈಬಿಡಲು ಮುಖ್ಯಮಂತ್ರಿಗಳು ಸೂಚಿಸಿದರು.

ಇನ್ನು ರಾಜ್ಯದಲ್ಲಿ ವಿವಿಧ ಇಲಾಖೆಗಳಡಿ ಇರುವ 34 ಸಾವಿರಕ್ಕೂ ಹೆಚ್ಚು ಕೆರೆಗಳ ಸಮಗ್ರ ನಿರ್ವಹಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದಡಿ ಕೆರೆ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸುವ ಕುರಿತು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಈ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೆ ಅಧಿಕಾರೇತರ ಸದಸ್ಯರ ನೇಮಕ ಮಾಡುವ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆಯ ಪರಿಣತರು ಹಾಗೂ ಕಾಳಜಿ ಉಳ್ಳವರನ್ನು ಆಯ್ಕೆ ಮಾಡಲು ಸಿದ್ದರಾಮಯ್ಯ ಸೂಚಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ: ಶಿರಸಿ, ಬೆಳಗಾವಿ, ಹಾಸನ, ಚಾಮರಾಜನಗರ, ಮಡಿಕೇರಿ ಮತ್ತು ಗದಗ ನಗರಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ ಕಾಮಗಾರಿ ಭೂಮಿಯ ಲಭ್ಯತೆಯ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಭೂಮಿ ಲಭ್ಯವಾಗಿರುವುದರಿಂದ ಕಾಮಗಾರಿ ಶೀಘ್ರವೇ ಪ್ರಾರಂಭಿಸಲು ಸೂಚಿಸಿದರು. ಮೈಸೂರು ನಗರದಲ್ಲಿ ಸ್ಥಳ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮೈಸೂರು ವಿಶ್ವವಿದ್ಯಾಲಯ ಕುಲಪತಿಗಳಿಗೆ ದೂರವಾಣಿ ಮೂಲಕ ಸಭೆಯಲ್ಲಿಯೇ ಮುಖ್ಯಮಂತ್ರಿಗಳು ಸೂಚಿಸಿದರು. ವಿಜ್ಞಾನ ನಗರಿ ನಿರ್ಮಿಸಲು ಭಾರತ ಸರ್ಕಾರ ಅನುಮೋದನೆ ನೀಡಿದ್ದು, 100 ಕೋಟಿಯ ಈ ಯೋಜನೆಗೆ ಬೆಂಗಳೂರು ನಗರದ ಹೊರ ವಲಯದಲ್ಲಿ 25 ಎಕರೆ ಜಾಗ ಒದಗಿಸುವಂತೆ ನಿರ್ದೇಶನ ನೀಡಿದರು.

ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಕತ್ತಲೆಯಲ್ಲಿಟ್ಟಿದ್ದು, ಸಿದ್ದು ಓರ್ವ ಪಕ್ಷಾಂತರಿ: ಆರ್.ಅಶೋಕ್

ಕೆ.ಸಿ.ವ್ಯಾಲಿ, ಎಚ್‌.ಎನ್‌ ವ್ಯಾಲಿಗೆ ನೀರು: ಕೆ.ಸಿ.ವ್ಯಾಲಿ ಹಾಗೂ ಎಚ್‌.ಎನ್‌.ವ್ಯಾಲಿಯಲ್ಲಿ ಎರಡು ಹಂತದಲ್ಲಿ ಮಾತ್ರ ಕೊಳಚೆ ನೀರು ಸಂಸ್ಕರಿಸಿ ಹರಿಸುತ್ತಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಮಸ್ಯೆಯಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಸಣ್ಣ ನೀರಾವರಿ ಸಚಿವ ಬೋಸರಾಜು, ಎರಡನೇ ಹಂತದ ಸಂಸ್ಕರಿಸಿದ ನೀರು ಸುರಕ್ಷಿತವಾಗಿದೆ. ಆದರೆ ನಗರ ಸ್ಥಳೀಯ ಸಂಸ್ಥೆಗಳು ಕೊಳಚೆ ನೀರನ್ನು ಸಂಸ್ಕರಿಸದೆ ಬಿಡುವುದರಿಂದ ಕೆಲವು ಕೆರೆಗಳಿಗೆ ಕೊಳಚೆ ನೀರು ಹರಿಯುತ್ತಿದೆ ಎಂದರು. ಹೀಗಾಗಿ 3ನೇ ಹಂತದ ಸಂಸ್ಕರಣೆ ಬೇಡಿಕೆ ಚರ್ಚೆಗೆ ಬರಲಿಲ್ಲ. ಇದೇ ವೇಳೆ ಕೆ.ಸಿ. ವ್ಯಾಲಿ ಎರಡನೇ ಹಂತ, ಆನೇಕಲ್‌ ಏತ ನೀರಾವರಿ ಯೋಜನೆ, ಹೊಸಕೋಟೆ ಏತ ನೀರಾವರಿ ಯೋಜನೆ, ಬೆಂಗಳೂರು ಪೂರ್ವ ತಾಲ್ಲೂಕು ಏತ ನೀರಾವರಿ ಯೋಜನೆ, ಬಾಗೇಪಲ್ಲಿ ಏತ ನೀರಾವರಿ ಯೋಜನೆ, ವೃಷಭಾವತಿ ವ್ಯಾಲಿ ಏತ ನೀರಾವರಿ ಯೋಜನೆ ಪ್ರಗತಿ ಬಗ್ಗೆ ಚರ್ಚಿಸಲಾಯಿತು.

Follow Us:
Download App:
  • android
  • ios