Asianet Suvarna News Asianet Suvarna News

ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ, ಸದ್ಯಕ್ಕೆ ಬಲವಂತದ ವಸೂಲಿ ಇಲ್ಲ: ಸಿದ್ದು

ಕಾಂಗ್ರೆಸ್‌ ಪಕ್ಷದ 5 ಗ್ಯಾರಂಟಿ ಜಾರಿಗೆ ಹಣ ಹೊಂದಿಸುವುದು ಕಷ್ಟಕರ ಆಗಿರುವುದರಿಂದ ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

Debt Waiver for Stri Shakti Sanghs next year Says CM Siddaramaiah gvd
Author
First Published Jun 29, 2023, 4:00 AM IST

ಬೆಂಗಳೂರು (ಜೂ.29): ಕಾಂಗ್ರೆಸ್‌ ಪಕ್ಷದ 5 ಗ್ಯಾರಂಟಿ ಜಾರಿಗೆ ಹಣ ಹೊಂದಿಸುವುದು ಕಷ್ಟಕರ ಆಗಿರುವುದರಿಂದ ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಕೋಲಾರದಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಅದರಂತೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಹಲವು ಮಹಿಳೆಯರು ಮುಖ್ಯಮಂತ್ರಿ ನಿವಾಸದ ಸಮೀಪ ಬುಧವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ರೈತರ ನಿಯೋಗದೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಎಚ್‌.ಕೆ.ನಾರಾಯಣಗೌಡ, ‘ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇನೆ. ಆದರೆ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಿರುವುದರಿಂದ ಮುಂದಿನ ವರ್ಷ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರವು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯದಿಂದ ಅಕ್ಕಿ ಕೊಡ್ತಿಲ್ಲ: ಸಚಿವ ಚಲುವರಾಯಸ್ವಾಮಿ

ಅಧಿಕಾರಿಗಳು ಬಲವಂತವಾಗಿ ಸಾಲ ವಸೂಲಿ ಮಾಡಲು ಬರುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ, ‘ಬಜೆಟ್‌ ಮಂಡನೆಯ ಬಳಿಕ ಸಹಕಾರ ಸಚಿವರು, ಡಿಸಿಸಿ ಬ್ಯಾಂಕ್‌ಗಳ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆ ನಡೆಸಿ ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಸೂಚನೆ ನೀಡುವುದಾಗಿ ಸಿದ್ದರಾಮಯ್ಯ ತಿಳಿಸಿದರು’ ಎಂದು ನಾರಾಯಣ ಗೌಡ ವಿವರಿಸಿದರು.

‘ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯರ 50 ಸಾವಿರ ರು. ಸಾಲ ಮನ್ನಾ ಮಾಡಿ ಹೊಸದಾಗಿ 1 ಲಕ್ಷ ರು. ಸಾಲ ನೀಡಲಾಗುವುದು ಎಂದು ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಕೊಟ್ಟಮಾತಿನಂತೆ ಭರವಸೆ ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಬೃಹತ್‌ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಇದಕ್ಕೂ ಮುನ್ನ ಮಹಿಳೆಯರು ಎಚ್ಚರಿಸಿದ್ದರು.

ಐಆರ್‌ಬಿಯಿಂದ ಅವೈಜ್ಞಾನಿಕ ರಸ್ತೆ ಕಾಮಗಾರಿ: ಮಳೆಗಾಲದಲ್ಲಿ ಕಾಣ್ತಿದೆ ಅಲ್ಲಲ್ಲಿ ಗುಡ್ಡ ಕುಸಿತ!

ಸಿಎಂ ಚಿತ್ರಕ್ಕೆ ಹಾಲಿನ ಅಭಿಷೇಕ: ಪ್ರತಿಭಟನೆ ವೇಳೆ ‘ಕೋಲಾರದಲ್ಲಿ ಹಾಲು ಉತ್ಪಾದನೆ ಅಧಿಕವಾಗಿದ್ದು ಹೂವನ್ನೂ ಹೆಚ್ಚಾಗಿ ಬೆಳೆಯುತ್ತೇವೆ. ಕೊಟ್ಟಮಾತಿನಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹೂವು ಮತ್ತು ಹಾಲಿನ ಅಭಿಷೇಕ ನಡೆಸಿದರು. ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯೇ ಇಲ್ಲಿಂದ ತೆರಳುವುದು ಎಂದು ಕುಮಾರಕೃಪಾ ರಸ್ತೆ ಬದಿ ಕುಳಿತು ಮಹಿಳೆಯರು ಪಟ್ಟು ಹಿಡಿದರು. ಬಳಿಕ ಐವರ ನಿಯೋಗಕ್ಕೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಲಾಯಿತು.

Follow Us:
Download App:
  • android
  • ios