ಉಪ​ಮು​ಖ್ಯ​ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ.ಶಿವ​ಕು​ಮಾರ್‌ ಅವರು ಭಾನುವಾರ ತುಮಕೂರು ಜಿಲ್ಲೆ ನೊಣ​ವಿ​ನ​ಕೆರೆ ಕಾಡ​ಸಿ​ದ್ದೇ​ಶ್ವರ ಮಠ ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ತುಮ​ಕೂ​ರು/ನಾಗಮಂಗಲ (ಮೇ.22): ಉಪ​ಮು​ಖ್ಯ​ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ.ಶಿವ​ಕು​ಮಾರ್‌ ಅವರು ಭಾನುವಾರ ತುಮಕೂರು ಜಿಲ್ಲೆ ನೊಣ​ವಿ​ನ​ಕೆರೆ ಕಾಡ​ಸಿ​ದ್ದೇ​ಶ್ವರ ಮಠ ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅಜ್ಜ​ಯ್ಯನ ಹೆಸ​ರಿ​ನಲ್ಲಿ ಗೌಪ್ಯತಾ ಪ್ರಮಾಣ ವಚನ ಸ್ವೀಕ​ರಿ​ಸಿ​ದ್ದ​ ಡಿಕೆಶಿ, ಈ ವಾರ​ದಲ್ಲಿ ಎರ​ಡನೇ ಬಾರಿಗೆ ಕಾಡ​ಸಿ​ದ್ದೇ​ಶ್ವರ ಮಠಕ್ಕೆ ಭೇಟಿ ನೀಡುತ್ತಿರುವುದು ವಿಶೇಷ.

ಬೆಳಗ್ಗೆ ಮಠಕ್ಕೆ ಆಗ​ಮಿ​ಸಿದ ಕೂಡಲೇ ಅಜ್ಜ​ಯ್ಯನ ದರ್ಶನ ಪಡೆ​ದರು. ಬಳಿಕ, ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಅಜ್ಜಯ್ಯನಿಗೆ ಪೂಜೆ ಸಲ್ಲಿ​ಸಿ​ದರು. ನಂತರ, ಮಠದ ಆವ​ರ​ಣ​ದಲ್ಲಿ ಆನೆಯ ಆಶೀ​ರ್ವಾದ ಪಡೆದು, ಆನೆಗೆ ಬಾಳೆ​ಹ​ಣ್ಣನ್ನು ತಿನ್ನಿ​ಸಿ​ದರು. ಈ ವೇಳೆ, ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, 2004ರಿಂದಲೂ ಈ ಮಠಕ್ಕೆ ಬರುತ್ತಿದ್ದೇನೆ. ನನ್ನ ಮನಸ್ಸಿನ ಶಾಂತಿಗೆ, ನಂಬಿಕೆಗೆ, ಮಾರ್ಗದರ್ಶನಕ್ಕೆ ಈ ಕ್ಷೇತ್ರ ನಿಂತಿದೆ. ದೇವರ ಸನ್ನಿಧಿ ಗಂಗಾಧರ ಅಜ್ಜ, ಕಾಡಸಿದ್ದೇಶ್ವರ ದರ್ಶನ ಮಾಡಲು ಬಂದಿರುವೆ ಎಂದರು.

ಡಿ.ಕೆ.​ಶಿ​ವ​ಕು​ಮಾರ್‌ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿ​ವೃದ್ಧಿ ನಿರೀಕ್ಷೆಗಳು

ಬಳಿಕ, ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದರು. ನಾಗಮಂಗಲ ಶಾಸಕ ಎನ್‌.ಚಲುವರಾಯಸ್ವಾಮಿ, ಮದ್ದೂರು ಶಾಸಕ ಕದಲೂರು ಉದಯ ಮತ್ತು ಕುಣಿಗಲ್ ಶಾಸಕ ರಂಗನಾಥ್‌ ಅವರೊಂದಿಗೆ ಆಗಮಿಸಿದ ಡಿಕೆಶಿಗೆ ಮಠದ ವತಿಯಿಂದ ಮಂಗಳವಾದ್ಯ ಮತ್ತು ಪೂರ್ಣಕುಂಭದ ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಬಳಿಕ, ಕ್ಷೇತ್ರದ ಕಾಲಭೈರವೇಶ್ವರಸ್ವಾಮಿ, ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ ಸೇರಿದಂತೆ ಎಲ್ಲ ದೇವತೆಗಳಿಗೆ ಪೂಜೆ ಸಲ್ಲಿಸಿದರು. ಕ್ಷೇತ್ರದಲ್ಲಿರುವ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಮಹಾಸಮಾಧಿಗೂ ವಿಶೇಷ ಪೂಜೆ ಸಲ್ಲಿಸಿದರು. 

Bagalkote: ಮಲಪ್ರಭಾ ನದಿಗೆ ನೀರು ಬಿಡಲು ಸಿಎಂ ಸಿದ್ದರಾಮಯ್ಯ ಸೂಚನೆ

ಮಠದ ಸಂಪ್ರದಾಯದಂತೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳು ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಆಶೀರ್ವದಿಸಿದರು. ಬಳಿಕ, ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿ, ನಾನು ಕಾಲಭೈರವೇಶ್ವರಸ್ವಾಮಿಯ ಭಕ್ತ. ಹಾಗಾಗಿ ಭಗವಂತನಿಗೆ ಕೈ ಮುಗಿಯಲು ಕ್ಷೇತ್ರಕ್ಕೆ ಬಂದಿದ್ದೇನೆ. ಪ್ರಕೃತಿ ಯಾರ ಕೈಯಲ್ಲೂ ಇಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಏನೇನು ಸಮಸ್ಯೆ, ತೊಂದರೆ ಇದೆಯೋ ಅವೆಲ್ಲವನ್ನೂ ಸರಿ ಮಾಡುವ ಕಾಲ ಬಂದಿದೆ. ಎಲ್ಲವನ್ನೂ ನಾವು ಸರಿ ಮಾಡುತ್ತೇವೆ ಎಂದರು.