ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ದುಡ್ಡು ಪಡೆದು ವಸತಿ ನೀಡಿದ್ದಾರೆ ಎಂದು ಅಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪ ಸುಳ್ಳು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನಕಪುರ (ಜೂ.23): ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ದುಡ್ಡು ಪಡೆದು ವಸತಿ ನೀಡಿದ್ದಾರೆ ಎಂದು ಅಳಂದ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪ ಸುಳ್ಳು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ದುಡ್ಡು ಪಡೆದು ಮನೆ ನೀಡಿದ್ದಾರೆ ಎನ್ನುವ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಇದೆಲ್ಲವೂ ಸುಳ್ಳು.

ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ? ನಾನು ಅಥವಾ ನೀವು ಬಂದು ಗ್ರಾಮಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲಾಗುತ್ತದೆಯೇ? ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿಯವರು. ಎಲ್ಲೆಲ್ಲಿ ಮನೆ ನೀಡಬೇಕೋ ಆಯಾಯ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡುತ್ತಾರೆ. ನಾವು ತೀರ್ಮಾನ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು. ಬಿ.ಆರ್.ಪಾಟೀಲ್ ಅವರಿಗೆ ಈ ಬಗ್ಗೆ ಪೂರ್ಣ ಮಾಹಿತಿ ತಿಳಿದಿದೆಯೋ, ಇಲ್ಲವೊ ಗೊತ್ತಿಲ್ಲ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ನಾನು ಅವರ ಬಳಿ ಮಾತನಾಡುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದರು.

2028ಕ್ಕೆ ಡಿಕೆಶಿ ಸಿಎಂ ಕನಸು: ರಾಜ್ಯದಲ್ಲಿ 2028ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದು ಕೇವಲ ಕನಸು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು. ಸಿಎಂ ಹುದ್ದೆಯನ್ನು ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡುತ್ತಾರೆ? ನಮ್ಮ ಕೈಯ್ಯಲ್ಲಿ ಏನೂ ಇಲ್ಲ. ಅದೆಲ್ಲವೂ ಆ ಭಗವಂತನ ಕೈಯ್ಯಲ್ಲಿದೆ ಎಂದು ಮೇಲೆ ಕೈ ತೋರಿಸಿದರು.

ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನಸೌಧದಲ್ಲಿ ಮಧ್ಯವರ್ತಿಗಳ ಅವಶ್ಯಕತೆಯೂ ಇಲ್ಲ, ಸಚಿವರುಗಳೇ ಎಲ್ಲಾ ಶುರು ಮಾಡಿಕೊಂಡಿದ್ದಾರೆ. ಅವರೇ ಎಲ್ಲಾ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ಮನೆ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆರೋಪ ಸರಿಯಾಗಿಯೇ ಇದೆ ಎಂದು ಟೀಕಿಸಿದರು. ವಸತಿ ಇಲಾಖೆಯಲ್ಲಿ ಕೇಳಿ ಬರುತ್ತಿರುವ ಅಕ್ರಮಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಚಿವ ಎಚ್.ಕೆ. ಪಾಟೀಲ್ ಬರೆದಿರುವ ಪತ್ರವನ್ನು ತೇಲಿ ಬಿಡಲಾಗಿದೆ. ಸರ್ಕಾರದ ಹಲವು ಇಲಾಖೆಗಳಲ್ಲಿ ಹಣ ಬಿಡುಗಡೆ ಆಗಲು ಶಾಸಕರೇ ಹಣ ಕೊಡಬೇಕು. ಕೆಲವರು ನಿಮ್ಮದೊಂದು ಲೆಟರ್‌ ಕೊಡಿ ದುಡ್ಡು ತಗೊಂಡು ಬರುತ್ತೇವೆ ಎಂದು ಹೇಳುತ್ತಾರೆ. ಶಾಸಕರ ಲೆಟರ್‌ಹೆಡ್‌ನಿಂದ ಮಧ್ಯವರ್ತಿಗಳು ದುಡ್ಡು ಕೊಟ್ಟು ಮನೆ ತರುತ್ತಾರೆ. ನನ್ನ ಬಳಿಯೂ ಮನೆ ತರಲು ಈ ಸರ್ಕಾರದಲ್ಲಿ ಅಷ್ಟು ಕೊಟ್ಟಿದ್ದೇವೆ ಎಂದು ಚರ್ಚೆ ಮಾಡುತ್ತಾರೆ ಎಂದರು.

ಜಿಲ್ಲೆಗೆ ಪ್ರಮುಖ ಕಾರ್ಖಾನೆ ತಂದು ಯುವಜನರಿಗೆ ಉದ್ಯೋಗ ಕೊಡಬೇಕೆಂಬುಂದು ನನ್ನ ಕನಸು. ಆದರೆ, ಈ ಸರ್ಕಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಮೈಷುಗರ್ ಸ್ಕೂಲನ್ನು ಮಾದರಿ ಶಾಲೆ ಮಾಡಲು ನಾನು ತಯಾರಿದ್ದೇನೆ. ಈ ಬಗ್ಗೆ ಶಾಲೆಯ ಟ್ರಸ್ಟಿಗಳಿಗೆ ಹೇಳಿದ್ದೇನೆ. ಇಂತಹ ಆಸ್ತಿಯನ್ನು ಗುತ್ತಿಗೆ ಮೇಲೆ ಕೊಡುವುದು ಸರಿಯಲ್ಲ. ಇದು ಹಗಲು ದರೋಡೆ. ಮೈಷುಗರ್ ಶಾಲೆ ಅಭಿವೃದ್ಧಿಗೆ ₹25 ಕೋಟಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಕೊಡಲು ತಯಾರಿದ್ದೇನೆ ಎಂದು ಹೇಳಿದರು.