ಎಫ್‌ಸಿಐ ಗೋದಾಮುಗಳಲ್ಲಿ ಶೇಖರಣೆಯಾಗಿರುವ ಅಕ್ಕಿಗೆ ಹುಳ ಹಿಡಿದರೂ ಪರವಾಗಿಲ್ಲ. ಬಡವರಿಗೆ ಅಕ್ಕಿ ನೀಡಬಾರದು ಹಾಗೂ ಅಕ್ಕಿ ನೀಡದ ಶ್ರೇಯ ಕಾಂಗ್ರೆಸ್ಸಿಗೆ ಸಿಗಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಪೂರೈಸುವುದನ್ನು ತಡೆದಿದೆ. 

ಬೆಂಗಳೂರು (ಜು.02): ಎಫ್‌ಸಿಐ ಗೋದಾಮುಗಳಲ್ಲಿ ಶೇಖರಣೆಯಾಗಿರುವ ಅಕ್ಕಿಗೆ ಹುಳ ಹಿಡಿದರೂ ಪರವಾಗಿಲ್ಲ. ಬಡವರಿಗೆ ಅಕ್ಕಿ ನೀಡಬಾರದು ಹಾಗೂ ಅಕ್ಕಿ ನೀಡದ ಶ್ರೇಯ ಕಾಂಗ್ರೆಸ್ಸಿಗೆ ಸಿಗಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಪೂರೈಸುವುದನ್ನು ತಡೆದಿದೆ. ಇದೇ ವೇಳೆ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ನೀಡುವ ವಿಚಾರವಾಗಿ ದೀರ್ಘಾವಧಿ ಯೋಜನೆ ರೂಪಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾವು ಮಾತು ಕೊಟ್ಟಂತೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವತನಕ ಜನರ ಖಾತೆಗೆ ಹಣ ಪಾವತಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ಮುನಿಯಪ್ಪ ಅವರು ನಿಗದಿಯಷ್ಟುಅಕ್ಕಿಯನ್ನು ಹೊಂದಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಪಡಿತರ ಚೀಟಿದಾರರ ಖಾತೆಗೆ ಹಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೇ. 85ರಷ್ಟುಮಂದಿಯ ಬ್ಯಾಂಕ್‌ ಖಾತೆ ಪತ್ತೆ ಮಾಡಲಾಗಿದೆ. ಉಳಿದವರ ಬ್ಯಾಂಕ್‌ ಖಾತೆಯನ್ನು ಪತ್ತೆ ಮಾಡಬೇಕಿದೆ. ಎಲ್ಲ ಪಡಿತರ ಚೀಟಿದಾರರಿಗೂ ಅಕ್ಕಿ ನೀಡಲಾಗುವುದು’ ಎಂದು ಹೇಳಿದರು.

ಮುಂಗಾರು ಮಳೆ ಕೊರತೆ: ಮಾಯದಂತ ಮಳೆ ಇಲ್ಲ, ಮದಗದ ಕೆರೆಗೆ ನೀರಿಲ್ಲ!

‘ಬಿಜೆಪಿಯವರದ್ದು ಡಬಲ್‌ ಸ್ಟ್ಯಾಂಡರ್ಡ್‌. ನಮ್ಮ ಯೋಜನೆ ವಿರುದ್ಧ ಅವರು ಹೋರಾಟ ಮಾಡುವುದಕ್ಕೆ ನಾವು ತಡೆಯಲ್ಲ. ಅದೇ ರೀತಿ ಬಿಜೆಪಿಯವರು ನೀಡಿದ್ದ ಭರವಸೆಗಳಿಗೂ ಹೋರಾಟ ಮಾಡಲಿ. ಪ್ರತಿಭಟಿಸುತ್ತಾ ನಮ್ಮ ಗ್ಯಾರಂಟಿಗಳ ಬಗ್ಗೆ ಅವರು ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡದೆ ತಡೆದಿದೆ. ಎಫ್‌ಸಿಐ ಗೋದಾಮುಗಳಲ್ಲಿ ಅಕ್ಕಿ ಸಂಗ್ರಹವಿದ್ದರೂ ನೀಡುತ್ತಿಲ್ಲ. ಅಕ್ಕಿ ಹಾಳಾದರೂ ಪರವಾಗಿಲ್ಲ, ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರಬಾರದು ಎಂಬ ಕಾರಣಕ್ಕಾಗಿ ಅಕ್ಕಿ ನೀಡುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಅಕ್ಕಿ ನೀಡುವ ವಿಚಾರದಲ್ಲಿ ದೀರ್ಘಾವಧಿ ಯೋಜನೆ ರೂಪಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಭತ್ತ ಬೆಳೆಯುವವರಿಗೆ ಬೆಂಬಲ ನೀಡುತ್ತೇವೆ. ರಾಷ್ಟ್ರೀಯ ಮಟ್ಟದಲ್ಲಿ ಖರೀದಿ ಮಾಡುವ ಬೆಲೆಗೆ ಭತ್ತ ನೀಡುವ ವಿಚಾರವಾಗಿ ನಮ್ಮ ರೈತರನ್ನು ಮಾನಸಿಕವಾಗಿ ತಯಾರಿ ಮಾಡಲಾಗುತ್ತಿದೆ. ಅಲ್ಲದೆ, ಎರಡರಿಂದ ಆರು ತಿಂಗಳವರೆಗೆ ಅಕ್ಕಿ ನೀಡಲು ಕೆಲ ರಾಜ್ಯಗಳು ಸಿದ್ಧವಾಗಿವೆ. ಆದರೆ, ಕಾಯಂ ಆಗಿ ಅಕ್ಕಿ ನೀಡುವ ಕುರಿತು ರಾಜ್ಯಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅಕ್ಕಿಗೆ ಬದಲಾಗಿ ಹಣ ನೀಡುವುದನ್ನು ಬಿಜೆಪಿಯವರೇ ನೀಡಿದ ಸಲಹೆ. ಅದನ್ನು ತಲೆಯಲ್ಲಿಟ್ಟುಕೊಂಡೇ ಈ ತೀರ್ಮಾನ ಮಾಡಿದ್ದೇವೆ’ ಎಂದರು.

ಗ್ಯಾರಂಟಿ ಯೋಜನೆ ವಿಫಲಗೊಳಿಸಲು ಅಕ್ಕಿ ನೀಡದ ಕೇಂದ್ರ ಸರ್ಕಾರ: ಸಚಿವ ತಿಮ್ಮಾಪುರ

ಏಕರೂಪ ಸಂಹಿತೆ ಬಗ್ಗೆ ಡಿಕೆಶಿ ಮೌನ: ಏಕರೂಪ ನಾಗರಿಕ ಸಂಹಿತೆ ಕುರಿತು ಕಾಂಗ್ರೆಸ ಹೈಕಮಾಂಡ್‌ ಅಭಿಪ್ರಾಯ ತಿಳಿಸುತ್ತದೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದು ನನ್ನ ನಿಲುವು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.