ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ, ಬೇಕಿದ್ದರೆ ನಮಗೆ ಬೈಯಿರಿ: ಡಿಕೆಶಿ ಮನವಿ
ತಮಿಳುನಾಡಿಗೆ ಕೆಆರ್‌ಎಸ್‌ನಿಂದ ಕಾವೇರಿ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಶುಕ್ರವಾರ ಕರೆ ನೀಡಿರುವ ಮಂಡ್ಯ ಬಂದ್ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಂದ್ ಮಾಡುವುದರಿಂದ ಏನೂ ಪರಿಹಾರ ಸಿಗುವುದಿಲ್ಲ. ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ.

ಬೆಂಗಳೂರು (ಸೆ.23): ತಮಿಳುನಾಡಿಗೆ ಕೆಆರ್‌ಎಸ್‌ನಿಂದ ಕಾವೇರಿ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ವಿರೋಧಿಸಿ ಶುಕ್ರವಾರ ಕರೆ ನೀಡಿರುವ ಮಂಡ್ಯ ಬಂದ್ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಂದ್ ಮಾಡುವುದರಿಂದ ಏನೂ ಪರಿಹಾರ ಸಿಗುವುದಿಲ್ಲ. ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ. ಕೋಪ ಇದ್ದರೆ ಎಷ್ಟಾದ್ರೂ ಬೈಯಿರಿ. ನಾವು ಅಧಿಕಾರಲ್ಲಿ ಇರುವವರು ಬೈಸಿಕೊಳ್ಳಲು ಸಿದ್ಧರಿದ್ದೇವೆ ಎಂದಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಜನರ ಪರವಾಗಿದೆ. ಅಹಿತಕರ ಘಟನೆಗಳು ನಡೆದರೆ ರಾಜ್ಯದ ಘನತೆಗೆ ಧಕ್ಕೆಯಾಗುತ್ತದೆ.
ಈ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರು ತಮ್ಮ ಕೈಲಾದಷ್ಟು ಸಹಕಾರ ನೀಡುವುದಾಗಿ ಹೇಳಿದ್ದಾರೆ. ಎರಡೂ ರಾಜ್ಯದವರನ್ನು ಕರೆದು ಮಾತನಾಡುವುದಾಗಿ ತಿಳಿಸಿದ್ದಾರೆ. ಇನ್ನು ಸುಪ್ರೀಂ ಕೋರ್ಟ್ ಮುಂದೆ ನಾವು ವಾಸ್ತವಾಂಶವನ್ನು ಮತ್ತೊಮ್ಮೆ ಮನವರಿಕೆ ಮಾಡಿಕೊಡಬೇಕಿದೆ. ಆ ಕೆಲಸವನ್ನು ನಮ್ಮ ನ್ಯಾಯವಾದಿಗಳು ಮಾಡಲಿದ್ದಾರೆ. ಜನರು ಅರ್ಥಮಾಡಿಕೊಳ್ಳಬೇಕು’ ಎಂದರು. ‘ತಮಿಳುನಾಡು ನಿತ್ಯ 24 ಸಾವಿರ ಕ್ಯೂಸೆಕ್ ನೀರು ಕೇಳಿತ್ತು. ನಮ್ಮ ಅಧಿಕಾರಿಗಳು ಎರಡು ಸಮಿತಿಗಳ ಮುಂದೆ ವಾಸ್ತವಾಂಶ ತಿಳಿಸಿ 10 ಸಾವಿರ ಕ್ಯೂಸೆಕ್ ನೀರಿಗೆ ಒಪ್ಪಿದ್ದೆವು. ನಂತರ ಮತ್ತೆ ಒತ್ತಡ ತಂದು ಅದನ್ನು 5000 ಕ್ಯೂಸೆಕ್‌ಗೆ ಇಳಿಸಿದೆವು.
ಭುಗಿಲೆದ್ದ ಕಾವೇರಿ ಕಿಚ್ಚು: ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯಾದ್ಯಂತ ಹೋರಾಟ ತೀವ್ರ
ಮಳೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಮಳೆಯಾಗದ್ದಕ್ಕೆ ಈಗ ಅಷ್ಟು ನೀರನ್ನೂ ಬಿಡಲಾಗುವುದಿಲ್ಲ ಎಂದು ಮೇಲ್ಮನವಿ ಹೋಗಿದ್ದೆವು. ಆದರೆ, ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈಗ ಸೆ.27ರವರೆಗೆ 5000 ಕ್ಯೂಸೆಕ್ ನೀರು ಬಿಡಬೇಕಾಗಿದೆ. ಇಂತಹ ಪರಿಸ್ಥಿತಿ ಈಗಷ್ಟೇ ಅಲ್ಲ ಬೇರೆ ಬೇರೆ ಸರ್ಕಾರಗಳ ಕಾಲದಲ್ಲೂ ಉದ್ಭವಿಸಿತ್ತು. ಪ್ರತಿಪಕ್ಷದಲ್ಲಿರುವ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಅವರು ನೀರು ಬಿಡಬಾರದು ಎಂದು ಹೇಳಬಹುದು. ಆದರೆ, ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದ್ದಾರೆ ಎನ್ನುವ ದಾಖಲೆಗಳು ಸರ್ಕಾರದಲ್ಲಿವೆ’ ಎಂದರು.