ಬಿಜೆಪಿ ಬಿಟ್ಟ ನಂತರವಷ್ಟೇ ಯೋಗೇಶ್ವರ್ ಕಾಂಗ್ರೆಸ್‌ ಸೇರ್ಪಡೆ ಚರ್ಚೆ: ಡಿ.ಕೆ. ಶಿವಕುಮಾ‌ರ್

ಮೊದಲು ಬಿಜೆಪಿ ಬಿಟ್ಟ ನಂತರವಷ್ಟೇ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಈಗ ಅವರು ಬಿಜೆಪಿಯಲ್ಲೇ ಇದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಇರುವವರ ಬಗ್ಗೆ ನಾನೇಕೆ ಮಾತನಾಡಲಿ ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ 
 

DCM DK Shivakumar React to CP Yogeshwar Join Congress grg

ಬೆಂಗಳೂರು(ಅ.23):  ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿ.ಪಿ. ಯೋಗೇಶ್ವರ್ ಅವರು ಬಿಜೆಪಿ ತೊರೆದ ನಂತರವಷ್ಟೇ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಸ್ಪಷ್ಟಪಡಿಸಿದ್ದಾರೆ. 

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಸಿ.ಪಿ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಅವರು ಕೂಡ ಯೋಗೇಶ್ವರ್ ಅವರ ಜತೆ ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಅವರು ಮೊದಲು ಬಿಜೆಪಿ ಬಿಟ್ಟ ನಂತರವಷ್ಟೇ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಈಗ ಅವರು ಬಿಜೆಪಿಯಲ್ಲೇ ಇದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಇರುವವರ ಬಗ್ಗೆ ನಾನೇಕೆ ಮಾತನಾಡಲಿ ಎಂದರು. 

ಚನ್ನಪಟ್ಟಣದ ಚೆಕ್‌ಮೇಟ್, ಸಿಪಿ ಯೋಗೇಶ್ವರ್‌ ರಾಜೀನಾಮೆಗೆ ಬಿಜೆಪಿ ಕಂಗಾಲು!

ಡಿ.ಕೆ. ಶಿವಕುಮಾರ್ ಹೇಳಿಕೆಗೆ ವಿರುದ್ಧವಾದ ಹೇಳಿಕೆ ನೀಡಿರುವ ಮಾಜಿ ಸಂಸದ ಡಿ.ಕೆ. ಸುರೇಶ್, ಚನ್ನಪಟ್ಟಣದಲ್ಲಿ ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ಮತ್ತು ಬಿಜೆಪಿಯಿಂದ ಬರುವ ಎಲ್ಲ ಮುಖಂಡರನ್ನು ಸ್ವಾಗತಿಸಿದ್ದೇವೆ. ಪಕ್ಷದ ತತ್ವ, ಸಿದ್ದಾಂತ ಮತ್ತು ನಾಯಕತ್ವ ಒಪ್ಪಿಕೊಂಡು ಬರುವವರನ್ನು ಸ್ವಾಗತಿಸುತ್ತೇವೆ. ಯೋಗೇಶ್ವರ್ ಸೇರಿದಂತೆ ಯಾರೇ ಆದರೂ ಸೇರಿಸಿಕೊಳ್ಳುತ್ತೇವೆ. ಆದರೆ, ಸದ್ಯ ಯೋಗೇಶ್ವ‌ರ್ ಪಕ್ಷ ಸೇರ್ಪಡೆ ವಿಚಾರ ಚರ್ಚೆಗೆ ಬಂದಿಲ್ಲ ಎಂದು ತಿಳಿಸಿದರು. ಚನ್ನಪಟ್ಟಣ ಸೇರಿದಂತೆ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಆದರೆ, ಚನ್ನಪಟ್ಟಣದಲ್ಲಿ ನನ್ನ ಸ್ಪರ್ಧೆ ಕುರಿತಂತೆ ಪಕ್ಷದ ವರಿಷ್ಠರಿಗೆ ತಿಳಿಸುತ್ತೇವೆ. ಪಕ್ಷ ಯಾವುದೇ ಆದೇಶ ನೀಡಿದರೂ ನಾನು ಪಾಲಿಸುತ್ತೇನೆ. ಹಾಗೆಯೇ, ನಮ್ಮ ನಾಯಕರು ಪಾಲಿಸಬೇಕು ಎಂದರು.

ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ

ಮೈಸೂರು: ಕಾಂಗ್ರೆಸ್ ಸಿದ್ದಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಲು ಉತ್ಸುಕರಾಗಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಡಿ.ಕೆ.ಸುರೇಶ್ ಹೆಸರು ಕೂಡ ಇದೆ. ನಮ್ಮ ಪಕ್ಷದ ಅಧ್ಯಕ್ಷರೇ ಅಲ್ಲಿ ಇರುವ ಕಾರಣ ಅವರೇ ಅಭ್ಯರ್ಥಿ ಕುರಿತು ಸೂಕ್ತ ತೀರ್ಮಾನ ಮಾಡುತ್ತಾರೆ. ಒಳ್ಳೆಯ ಅಭ್ಯರ್ಥಿ ಹಾಕಬೇಕು ಅಂತ ಹೇಳಿದ್ದೇನೆ ಎಂದರು. 

ಸಂಡೂರಿನಲ್ಲಿ ಸಂಸದ ಈ ತುಕಾರಾಮ್ ಅವರ ಪತ್ನಿಗೆ ಟಿಕೆಟ್ ನೀಡುತ್ತೇವೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾವಿ, ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಸ್ಪಷ್ಟವಾಗಲಿದೆ ಎಂದರು. 

Latest Videos
Follow Us:
Download App:
  • android
  • ios