ಕಾನೂನು ಉಂಟು, ಪೊಲೀಸರು ಉಂಟು. ಪೊಲೀಸರು ಯಾವ ಸೆಕ್ಷನ್ ಸೂಕ್ತವೋ ಅದನ್ನೇ ಹಾಕಿದ್ದಾರೆ. ಅವರು ಯಾವ ಸೆಕ್ಷನ್ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ, ಅವರು ಉಂಟು ಪೊಲೀಸರು ಉಂಟು ಅಷ್ಟೇ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 

ಬೆಂಗಳೂರು(ಡಿ.21): ಈ ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಹಾಗೂ ' ಮುಖ್ಯಮಂತ್ರಿ ಸಿದ್ದರಾರಾಮಯ್ಯ ಅವರೇ ಕಾರಣವೇ? ನಾವೇ ಎಲ್ಲದಕ್ಕೂ ಹೊಣೆಯೇ? ನಮ್ಮ ಬಗ್ಗೆ ಮಾತನಾಡುವ ಬದಲು ಮೊದಲು ಈ ನೆಲದ ಹೆಣ್ಣು ಮಕ್ಕಳಿಗೆ ಆಗಿರುವ ಅವಮಾನದ ಬಗ್ಗೆ ಉತ್ತರ ಕೊಡಲಿ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿ.ಟಿ.ರವಿ ಬಂಧನಕ್ಕೆ ಡಿ. ಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳರ್ ಅವರು ಪೊಲೀಸರ ಮೇಲೆ ಬೀರಿದ ಪ್ರಭಾವ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು. 
'ಕಾನೂನು ಉಂಟು, ಪೊಲೀಸರು ಉಂಟು. ಪೊಲೀಸರು ಯಾವ ಸೆಕ್ಷನ್ ಸೂಕ್ತವೋ ಅದನ್ನೇ ಹಾಕಿದ್ದಾರೆ. ಅವರು ಯಾವ ಸೆಕ್ಷನ್ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ, ಅವರು ಉಂಟು ಪೊಲೀಸರು ಉಂಟು ಅಷ್ಟೇ' ಎಂದು ಹೇಳಿದರು. 

ಸಿಟಿ ರವಿಗೆ 41ಎ ಅಡಿಯಲ್ಲಿ ನೋಟಿಸ್ ಕೊಡಬೇಕಿತ್ತು, ಬಂಧನ ಪ್ರಶ್ನಿಸಿದ ಹೈಕೋರ್ಟ್!

ಜಾಮೀನು ಸಿಕ್ಕಿರುವುದು ಸರ್ಕಾರಕ್ಕೆ ಕಪಾಳ ಮೋಕ್ಷ ಎಂದಿರುವ ಸಿ.ಟಿ.ರವಿ ಹೇಳಿಕೆಗೆ, 'ಅಯ್ಯಯ್ಯೋ ಮೊದಲು ತಾಯಿಗೆ, ಹೆಣ್ಣು ಕುಲಕ್ಕೆ, ನಮ್ಮ ಸಂಸ್ಕೃತಿಗೆ ಆಗಿರುವ ಅವಮಾನದ ಬಗ್ಗೆ ಉತ್ತರ ಕೊಡಲಿ' ಎಂದು ತಿರುಗೇಟು ನೀಡಿದರು.

ಹೆಬ್ಬಾಳ್ಳ‌ರ್ ವಿರುದ್ಧ ಅಶ್ಲೀಲ ಪದ ಬಳಕೆ: ಕೈ ಗರಂ

ಬೆಂಗಳೂರು: ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ‌ರ್ ವಿರುದ್ದ ಬಿಜೆಪಿ ಶಾಸಕ ಸಿ.ಟಿ.ರವಿಯವರು ಅಶ್ಲೀಲ ಪದ ಬಳಕ್ಕೆ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಿ.ಟಿ.ರವಿಯವರ ಅಮಾನತ್ತಿಗೆ ಆಗ್ರಹಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಣ್ಣು ಮಗಳಿಗೆ ತುಚ್ಚವಾಗಿ ಮಾತಾಡಿದರೂ ಕೂಡ ಬಿಜೆಪಿಯವರು ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಇದೇ ವೇಳೆ ಬೆಳಗಾವಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿ.ಟಿ.ರವಿ ಅವರ ಹರಕಲು ಬಾಯಿ ಸಂಸ್ಕೃತಿ ಇದೇ ಮೊದಲಲ್ಲ, ಈ ಹಿಂದೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಇಡೀ ಚಿಕ್ಕಮಗಳೂರಿನಲ್ಲಿ ಇವರೊಬ್ಬನೇ ಇಷ್ಟು ಕೀಳುಮಟ್ಟದ ಸಂಸ್ಕೃತಿ ಹೊಂದಿರುವ ವ್ಯಕ್ತಿ. ಒಟ್ಟು 12 ಬಾರಿ ಈ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ನಿಮ್ಮ ಬಳಿ ದಾಖಲೆ ಇಲ್ಲವಾದರೆ ಹೇಳಿ ನಾನು ನೀಡುತ್ತೇನೆ ಎಂದು ಕಿಡಿಕಾರಿದರು. 
ಅಲ್ಲದೆ, ಈ ವಿಚಾರದಲ್ಲಿ ಸಭಾಪತಿಗಳ ನಡೆ ಬೇಸರ ತಂದಿದೆ ಎಂದರು. ಕಲಬುರಗಿಯಲ್ಲಿ ಮಾತನಾಡಿದಸಚಿವ ಪ್ರಿಯಾಂಕ್ ಖರ್ಗೆ, ಸಿ.ಟಿ ರವಿಯವರ ಹೇಳಿಕೆಯನ್ನು ಸ್ವತಃ ಅವರ ಹೆಂಡತಿಯೂ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾನು ಕೊಟ್ಟ ದೂರು FIR ಆಗಿಲ್ಲ, ಹೆಬ್ಬಾಳ್ಕರ್ ದೂರಿನ ಬೆನ್ನಲ್ಲೇ ಬಂಧನ, ಇದು ಹೇಗೆ ಸಾಧ್ಯ, ಸಿಟಿ ರವಿ ಪ್ರಶ್ನೆ!

ಇದೇ ವೇಳೆ, ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಆ‌ರ್.ಬಿ.ತಿಮ್ಮಾಪೂರ, ಸಿ.ಟಿ.ರವಿ ಅವರು ಹಿಂದೂ ಧರ್ಮದಲ್ಲಿ ಇರಲಿಕ್ಕೆ ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಮಧ್ಯೆ, ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪೊಲೀಸರು ಕಾನೂನು ಪ್ರಕಾರವೇ ಬಂಧಿಸಿದ್ದಾರೆ. ಹೆಣ್ಣುಮಗಳ ಬಗ್ಗೆ ಈ ರೀತಿಯ ಪದಬಳಕೆ ತಪ್ಪು ಎಂದು ಹೇಳಿದರು.