Lok Sabha Election 2024: ಧರ್ಮಯುದ್ಧಕ್ಕೂ ಮುನ್ನ ದೇವರ ದರ್ಶನ: ಡಿ.ಕೆ.ಶಿವಕುಮಾರ್
ಈ ಬಾರಿಯ ಧರ್ಮ ಯುದ್ಧ ಆರಂಭಿಸುವ ಮುನ್ನ ಧರ್ಮಸ್ಥಳದ ಮಂಜುನಾಥನ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಿದ್ದೇನೆ. ನಾನು ಪ್ರತಿ ಬಾರಿ ಧರ್ಮ ಯುದ್ಧದ ಸಂದರ್ಭದಲ್ಲಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಮಂಜುನಾಥ, ಗಂಗಾಧರ ಅಜ್ಜ ನನ್ನ ಬದುಕಿನಲ್ಲಿ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಳ್ತಂಗಡಿ/ಸುಬ್ರಹ್ಮಣ್ಯ/ಶೃಂಗೇರಿ/ಕೊಲ್ಲೂರು(ಮಾ.27): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ ಶಾರದಾಂಬೆ, ಕೊಲ್ಲೂರು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿಯ ಧರ್ಮ ಯುದ್ಧ ಆರಂಭಿಸುವ ಮುನ್ನ ಧರ್ಮಸ್ಥಳದ ಮಂಜುನಾಥನ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಿದ್ದೇನೆ. ನಾನು ಪ್ರತಿ ಬಾರಿ ಧರ್ಮ ಯುದ್ಧದ ಸಂದರ್ಭದಲ್ಲಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಮಂಜುನಾಥ, ಗಂಗಾಧರ ಅಜ್ಜ ನನ್ನ ಬದುಕಿನಲ್ಲಿ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಅದರೊಂದಿಗೆ ದೇವರ ಆಶೀರ್ವಾದ ಬೇಡಲು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಶೃಂಗೇರಿ, ಗೌರಿಗದ್ದೆ, ಗೋಕರ್ಣ, ಇಡಗುಂಜಿ, ಮೈಸೂರು ಕಬ್ಬಾಳ ಮುಂತಾದ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ಉದ್ದೇಶ ನಮ್ಮದಾಗಿದೆ. ಈ ಹಿಂದೆ ನಡೆದ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಕೂಡ ದೇವರು ನಮ್ಮನ್ನು ಕೈ ಬಿಡದೆ ಒಳ್ಳೆಯದನ್ನೇ ಮಾಡಿದ್ದಾರೆ ಎಂದರು.
ಡಿಸಿಎಂ ಟೆಂಪಲ್ ರನ್:
ಬೆಂಗಳೂರಿನಿಂದ ಬೆಳಗ್ಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆದರು. ಬಳಿಕ, ಕುಕ್ಕೆಗೆ ತೆರಳಿ ಸುಬ್ರಹ್ಮಣ್ಯ ಹಾಗೂ ಹೊಸಳಿಗಮ್ಮನ ದರ್ಶನ ಪಡೆದರು. ನಂತರ, ನಕ್ಸಲರ ಶಂಕೆ ಇರುವ ಕೂಜಿಮಲೆ ಹಾಗೂ ಐನೆಕಿದು ಗ್ರಾಮಗಳ ಮನೆಗಳಿಗೆ ಭೇಟಿ ನೀಡಿದರು.
ಬಳಿಕ, ಕುಕ್ಕೆ ಸುಬ್ರಮಣ್ಯದಿಂದ ಮೆಣಸೆ ಕೊರಡ್ಕಲ್ ಹೆಲಿಪ್ಯಾಡ್‌ಗೆ ಆಗಮಿಸಿ, ಅಲ್ಲಿಂದ ಕಾರಿನ ಮೂಲಕ ಶೃಂಗೇರಿಗೆ ಆಗಮಿಸಿದರು. ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಮಠದ ಆವರಣದಲ್ಲಿರುವ ಶಂಕರಾಚಾರ್ಯ, ತೋರಣಗಣಪತಿ ದರ್ಶನ ಪಡೆದು, ದೇವಾಲಯದ ಎದುರಿನಲ್ಲಿ ಈಡುಗಾಯಿ ಒಡೆದರು. ನಂತರ, ನರಸಿಂಹವನದಲ್ಲಿನ ಗುರುಭವನಕ್ಕೆ ತೆರಳಿ ಜಗದ್ಗುರು ಶ್ರೀಭಾರತೀ ತೀರ್ಥರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಬಳಿಕ, ಕೊಲ್ಲೂರಿಗೆ ತೆರಳಿ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಪಕ್ಕದ ವೀರಭದ್ರ ಸಹಿತ ಇತರ ದೇವಸ್ಥಾನಗಳಿಗೂ ಭೇಟಿ ನೀಡಿದರು.