ಬೆಂಗಳೂರು(ಅ.18): ನಗರದ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ, ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಟೀಕಾ ಪ್ರಹಾರ ನಡೆಸಿದ್ದಾರೆ.

ಕ್ಷೇತ್ರದಲ್ಲಿ ಶನಿವಾರ ಪಕ್ಷದ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಕೈಗೊಂಡ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಸಮರ್ಥರಿದ್ದಾರೆ. ಆಡಳಿತ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರಿಂದ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ. ಈ ವಿಚಾರ ಕ್ಷೇತ್ರದ ಜನರಿಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇರಬಹುದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಇರಬಹುದು. ಇವರು ಬಂದು ಹೋಗಬಹುದಷ್ಟೇ. ಆದರೆ, ಕ್ಷೇತ್ರದಲ್ಲಿ ಏನು ಮಾಡಲು ಅವರಿಂದ ಸಾಧ್ಯವಿಲ್ಲ. ದಿನ ಬೆಳಗಾದರೆ ಜನತೆ ಜತೆ ನಿಂತು ಕೆಲಸ ಮಾಡುವ ಸಮರ್ಥ ಪ್ರತಿನಿಧಿ ಬೇಕು. ಮುನಿರತ್ನ ಅಂತಹ ವ್ಯಕ್ತಿಯಾಗಿದ್ದಾರೆ. ಚುನಾವಣೆ ಸಮಯದಲ್ಲಿ ಬಂದು ಹೋಗುವ ನಾಯಕರಿಂದ ಜನರಿಗಾಗಲಿ, ಕ್ಷೇತ್ರಕ್ಕಾಗಲಿ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ಯಾವ ನಾಯಕರ ಪ್ರಭಾವವೂ ಇಲ್ಲಿ ಇಲ್ಲ. ಅಭಿವೃದ್ಧಿ ಎಂದು ಬಂದರೆ ಬಿಜೆಪಿಯೊಂದೇ ಪರಿಹಾರ ಎಂದು ಹೇಳಿದರು.

RR ನಗರದಲ್ಲಿ ಬಂಡೆ ಆಟ ನಡೆಯಲ್ಲ: ಡಿಕೆಶಿ ವಿರುದ್ಧ ಹರಿಹಾಯ್ದ ಸಚಿವ ಅಶೋಕ್‌

ಬೆಂಗಳೂರು ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಮಹಾನಗರ. ಮುನಿರತ್ನ ಅವರು ಮುಂದಿನ ದಿನದಲ್ಲಿ ನಾಡಪ್ರಭುಗಳ ಪ್ರೇರಣೆಯೊಂದಿಗೆ ಅವರ ಕನಸು-ದೂರದೃಷ್ಟಿಗೆ ಯಾವುದೇ ತೊಂದರೆಯಾಗದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ. ಅವರಿಗೆ ಬೇಕಾದ ಎಲ್ಲಾ ಸಹಕಾರ ಸರ್ಕಾರದಿಂದ ಸಿಗಲಿದೆ. ಕೇವಲ ಒಣ ರಾಜಕೀಯ ಮಾಡುವುದರಿಂದ, ಟೀಕೆಗಳನ್ನು ಮಾಡುತ್ತ ಕೂರುವುದರಿಂದ ಪ್ರಯೋಜನ ಇಲ್ಲ. ಅಭಿವೃದ್ಧಿಯಷ್ಟೇ ಚರ್ಚೆಯ ವಿಷಯವಾಗಿರುತ್ತದೆ.

ಈಗಾಗಲೇ ಕ್ಷೇತ್ರದಲ್ಲಿ ಮುನಿರತ್ನ ಅವರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸಾರಿಗೆ, ರಸ್ತೆ, ಕುಡಿಯುವ ನೀರು ಉದ್ಯಾನವನ ನಿರ್ವಹಣೆ ಸೇರಿ ಎಲ್ಲಾ ರಂಗಗಳಲ್ಲಿಯೂ ಅವರ ನೇತೃತ್ವದಲ್ಲಿ ಕ್ಷೇತ್ರವೂ ಉತ್ತಮ ಪ್ರಗತಿ ಕಾಣುತ್ತಿದೆ. ಕ್ಷೇತ್ರದಲ್ಲಿ ಸದಾ ಇರಲಿದ್ದು, ಜನರ ಬಳಿಯೇ ಇರುತ್ತದೆ. ಹಾಗೆ ಬಂದು, ಹೀಗೆ ಹೋಗುವವರಿಗೆ ಮತ ಹಾಕಿ ಪ್ರಯೋಜನ ಇಲ್ಲ. ಅಂತಹವರು ಯಾರು ಎಂಬುದು ಜನರಿಗೆ ಗೊತ್ತಿದೆ ಎಂದು ಪ್ರತಿಪಕ್ಷ ನಾಯಕರನ್ನು ಕುಟುಕಿದರು.