ಗೋಡ್ಸೆ ಸಂತತಿಯಿಂದ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ: ಸಚಿವ ತಿಮ್ಮಾಪೂರ
ಬಿಜೆಪಿ ಅಧಿಕಾರದಲ್ಲಿದ್ದಾಗಲೇ ರೈತರಿಗೆ ವಕ್ಫ್ ಕಡೆಯಿಂದ ಅತೀ ಹೆಚ್ಚು ನೋಟಿಸ್ ಬಂದಿವೆ. ಅಧಿಕಾರ ಕಳೆದುಕೊಂಡ ಮೇಲೆ ನಮ್ಮ ಸರ್ಕಾರದ ಮೇಲೆ ಬಿಜೆಪಿಯವರು ದಿನವೂ ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ನೋಟಿಸ್ ಕೊಟ್ಟು ಅಧಿಕಾರ ಕಳೆದುಕೊಂಡ ಮೇಲೆ ಹಿಂದುತ್ವದ ಹೆಸರಿನಲ್ಲಿ ರೈತರ ಮನದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ
ತೇರದಾಳ(ರ-ಬ)(ಡಿ.15): ಮಿತಿಮೀರಿದ ರಾಜಕೀಯ ಲಾಲಸೆಯಿಂದ ಗಾಂಧಿ ಹಂತಕ ಗೋಡ್ಸೆಯನ್ನು ವೈಭವೀಕರಿಸುತ್ತ ಧರ್ಮ, ಜಾತಿಗಳ ಹೆಸರಲ್ಲಿ ಬಸವಣ್ಣನ ತತ್ವಗಳನ್ನು ಗಾಳಿಗೆ ತೂರಿ ಸುಳ್ಳುಗಳ ಸರಮಾಲೆಗಳನ್ನೇ ಹೇಳುತ್ತ ದೇಶಕ್ಕೆ ಗಂಡಾಂತರ ತರುವತ್ತ ಕೆಲವರು ಹೊರಟಿದ್ದಾರೆ. ಅಂಥವರಿಗೆ ಜನತೆ ಮತಗಳ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ತೇರದಾಳ ಮೈನಾರಿಟಿ ಬ್ಯಾಂಕಿನ ಕಟ್ಟಡ ಉದ್ಘಾಟನೆ ಬಳಿಕ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗಲೇ ರೈತರಿಗೆ ವಕ್ಫ್ ಕಡೆಯಿಂದ ಅತೀ ಹೆಚ್ಚು ನೋಟಿಸ್ ಬಂದಿವೆ. ಅಧಿಕಾರ ಕಳೆದುಕೊಂಡ ಮೇಲೆ ನಮ್ಮ ಸರ್ಕಾರದ ಮೇಲೆ ಬಿಜೆಪಿಯವರು ದಿನವೂ ಬರೀ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ನೋಟಿಸ್ ಕೊಟ್ಟು ಅಧಿಕಾರ ಕಳೆದುಕೊಂಡ ಮೇಲೆ ಹಿಂದುತ್ವದ ಹೆಸರಿನಲ್ಲಿ ರೈತರ ಮನದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಮೀಸಲಾತಿ ಒದಗಿಸಿ ಕೊಟ್ರೆ ಸಚಿವೆ ಲಕ್ಷ್ಮೀ ಹೆಬಾಳ್ಕರ್‌ಗೆ 1 ಕೆಜಿ ಬಂಗಾರ: ಮುರುಗೇಶ ನಿರಾಣಿ
ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ಮೊತ್ತದ ಹಗರಣ ನಡೆದಿದ್ದು, ಅದನ್ನು ಮಹಾ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿಯವರು ಅದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವೆ ಎಂದು ಗುಡುಗಿದರು. ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷದ ಬೆಂಕಿ ಹಚ್ಚಲು ನೂರೆಂಟು ಕಾರಣಗಳನ್ನು, ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿರುವ ಬಿಜೆಪಿಯ ರಾಷ್ಟ್ರೀಯ ನಾಯಕರ ಅನೇಕ ಮನೆಗಳು ಇಂದು ಮುಸ್ಲಿಮರೊಂದಿಗೆ ನೆಂಟಸ್ತಿಕೆ ಬೆಳೆಸಿದ್ದಾರೆ ಎಂದು ದೂರಿದರು.
ರಾಜಕೀಯದಿಂದ ಬಹಳಷ್ಟು ದೂರವಿರುವ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಿಸುವಲ್ಲಿ ಯುವಕರು ಮುಂದೆ ಬರಬೇಕು. ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪಾಲಕರು ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂದು ಡಾ.ಬಾಬಾಸಾಹೇಬ ಹೇಳಿರುವುದು ಮೌಢ್ಯ ಮತ್ತು ಸಂಕುಚಿತತೆ ಮಟ್ಟಹಾಕುವುದೇ ಆಗಿದೆ ಎಂದರು.ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, ಮುಸ್ಲಿಂ ಮಹಿಳೆಯರು ಕೌಟುಂಬಿಕ ಚೌಕಟ್ಟುಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಕಲಿತು, ಸ್ಪರ್ಧಾತ್ಮಕ ಜಗತ್ತನ್ನು ತಿಳಿಯಲು ಭಾಷೆಯ ಸಂಕುಚಿತತೆಯನ್ನು ತೊರೆದು ಎಲ್ಲ ಭಾಷೆಗಳ ಅಧ್ಯಯನ ಮಾಡಬೇಕು. ಉರ್ದು ಸೇರಿದಂತೆ ಮಾತೃಭಾಷೆಯಲ್ಲಿ ಕಲಿತು ಬಳಿಕ ಪದವಿ ಹಂತದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಇತರೆ ಭಾಷೆಗಳ ಕಲಿಕೆ ಅಗತ್ಯ ಎಂದು ಅರಿಯಬೇಕು. ಸಂಕುಚಿತ ಭಾವನೆಯವರು ಇಂದು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಾಂವಿಧಾನಿಕ ಆಶೋತ್ತರಗಳಂತೆ ತೇರದಾಳದಲ್ಲಿ ಹಿಂದೂ-ಮುಸ್ಲಿಂ-ಜೈನರೊಡಗೂಡಿ ಸಾಮರಸ್ಯದಿಂದ ಬದುಕುತ್ತಿರುವುದು ವಿಶೇಷ ಎಂದು ಶ್ಲಾಘಿಸಿದರು.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ ಪಾಷಾ ಮಾತನಾಡಿ, ವಕ್ಫ್ ಕಡೆಯಿಂದ ಯಾವ ರೈತ, ಮಠಗಳಿಗೆ ನೋಟಿಸ್ ನೀಡಿಲ್ಲ. ಅದು ಶುದ್ಧ ಸುಳ್ಳು. ಇದರಿಂದ ಯಾವ ಜಮೀನುಗಳಿಗೂ ಇಲ್ಲಿಯವರೆಗೂ ತೊಂದರೆಯಾಗಿಲ್ಲ. ಮುಂದೆಯೂ ಆಗದು ಎಂದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ದೇವಲ ದೇಸಾಯಿ ಮಾತನಾಡಿ, ಬಿಸಾನಸಾಬ ಲಫಂಗಸಾಬ ಯತ್ನಾಳ (ಬಸನಗೌಡ ಪಾಟೀಲ ಯತ್ನಾಳ ) ಅವರು ಮನಸಿಗೆ ಬಂದಿದ್ದು ಮಾತನಾಡುತ್ತಿದ್ದಾರೆ. ಅದೇ ಚಾಳಿಯನ್ನು ತೇರದಾಳದ ಧಾರ್ಮಿಕ ವೇದಿಕೆಯಲ್ಲಿ ಮುಂದುವರಿಸಿದ್ದರ ಪರಿಣಾಮ ಜನತೆಯ ವಿರೋಧದ ಹಿನ್ನೆಲೆ ವೇದಿಕೆಯಿಂದ ನಿರ್ಗಮಿಸಿದ್ದರು. ಎಲ್ಲರೂ ಕೂಡಿ ಬಾಳುವುದನ್ನು ಅವರಿಂದ ನೋಡಲು ಆಗುತ್ತಿಲ್ಲ ಎಂದು ಛೇಡಿಸಿದರು.
ಸಿಎಂ ಹೆಸರು ಬಂದ್ರೆ ನನ್ನ ಹೆಸರೇ ಫಸ್ಟ್, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು?: ಯತ್ನಾಳ್
ಮುಖಂಡ ಸಿದ್ದು ಕೊಣ್ಣೂರ, ತೌಫೀಕ ಪಾರ್ಥನಳ್ಳಿ ಮಾತನಾಡಿದರು. ಇಸಾಕ ನಿಪ್ಪಾಣಿ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ನಾಡಗೌಡ, ದಸ್ತಗೀರ ತಾಂಬೋಳಿ, ರಫೀಕ್ ನಿಪ್ಪಾಣಿ, ಮಹಿಬೂಬ ತಹಶೀಲ್ದಾರ, ಮುಬಾರಕ ಥರಥರಿ, ಮುನೀರ ಮೋಮಿನ, ಅಜೀಮ್ ಚಿಂಚಲಿ, ಅಲ್ತಾಫ್ ಹನಗಂಡಿ, ರಫೀಕ ಬಾರಿಗಡ್ಡಿ, ಯುನೂಸ್ ಚೌಗಲಾ, ಡಾ. ಪದ್ಮಜೀತ್ ನಾಡಗೌಡ ಪಾಟೀಲ, ಹಾರೂನ್ ರಶೀದ್ ಬೇವೂರ, ಇಸಾಕ್ ಮೋಮಿನ್, ಶೆಟ್ಟೆಪ್ಪ ಸುಣಗಾರ, ನಿಲೇಶ ದೇಸಾಯಿ, ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ, ಉಪಾಧ್ಯಕ್ಷೆ ನಸ್ರೀನಬಾನು ರಾಜೇಸಾಬ ನಗಾರ್ಜಿ, ಮಾಶುಮ್ ಇನಾಮದಾರ ಸೇರಿದಂತೆ ಹಲವರಿದ್ದರು.
ಹಳಿಂಗಳಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆ ಹಾಗೂ ತೇರದಾಳ ಮೈನಾರಿಟಿ ಬ್ಯಾಂಕ್ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು. ಸರ್ಕಾರಿ ಉರ್ದು ಪ್ರೌಢಶಾಲೆಗೆ ಸಚಿವ ಜಮೀರ್ ಅಹ್ಮದ ನೀಡಿದ ಶಾಲಾ ಬಸ್‌ಗೆ ಚಾಲನೆ ನೀಡಲಾಯಿತು.