* ನಳಿನ್ ಕುಮಾರ್‌ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವಿಚಾರ* ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು* ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರಿಂದ ದೂರು ದಾಖಲು

ಮಂಗಳೂರು, (ಜು.19): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರದ್ದು ಎನ್ನಲಾದ ಆಡಿಯೋ ತನಿಖೆ ನಡೆಸುವಂತೆ ದೂರು ದಾಖಲಾಗಿದೆ.

ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಇಂದು (ಸೋಮವಾರ) ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್‌ಗೆ ದೂರು ಸಲ್ಲಿಸಿದ್ದಾರೆ. 

ನಾಯಕತ್ವ ಬದಲಾವಣೆ ನಿಶ್ಚಿತವಾ? ಬಿಜೆಪಿ ಅಧ್ಯಕ್ಷರದ್ದು ಎನ್ನಲಾದ ಆಡಿಯೋನಲ್ಲಿ ಬಹಿರಂಗ

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್, ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಪುತ್ತೂರು ಕ್ಷೇತ್ರದ ಶಾಸಕ ಸಂಜೀವ್ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಒಟ್ಟಾಗಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಆಡಿಯೋ ಸೃಷ್ಟಿಸಿ ವೈರಲ್ ಮಾಡಿದವರ ಬಂಧನಕ್ಕೆ ಒತ್ತಾಯಿಸಲಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಭಾನುವಾರ ವೈರಲ್ ಆಗಿತ್ತು. ಇದು ಇದೀಗ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಯಾರಿಗೂ ಹೇಳಬೇಡಿ ಈಶ್ವರಪ್ಪ, ಶೆಟ್ಟರ್ ಟೀಂ ತೆಗೆಯುತ್ತೇವೆ. ಪೂರ್ತಿ ಹೊಸ ಟೀಂ ಮಾಡ್ತಿದ್ದೇವೆ. ಈಗ ಸದ್ಯಕ್ಕೆ ಇನ್ನು ಯಾರಿಗೂ ಕೊಡಬೇಡಿ. ಏನೂ ತೊಂದರೆ ಇಲ್ಲ,‌ ಹೆದರಬೇಡಿ‌ ನಾವಿದ್ದೇವೆ. ಯಾರಾದ್ರೂ ಕೂಡ ನಮ್ಮ ಕೈಯಲ್ಲೇ ಇನ್ನೂ ಇರುತ್ತದೆ. ಮೂವರ ಹೆಸರಿದೆ, ಯಾವುದು ಬೇಕಾದ್ರೂ ಆಗಲು ಚಾನ್ಸ್​ ಇದೆ. ಇಲ್ಲಿನವರನ್ನು ಯಾರನ್ನೂ ಮಾಡಲ್ಲ,‌ ದೆಹಲಿಯಿಂದ್ಲೇ ಹಾಕ್ತಾರೆ' ಎಂಬ ಮಾತುಗಳು ಆಡಿಯೋನಲ್ಲಿದೆ.