ಕಾಂಗ್ರೆಸ್ ಸರ್ಕಾರ ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ: ಸಿಟಿ ರವಿ ಆಕ್ರೋಶ

ರಾಜ್ಯದ 220ಕ್ಕೂ ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಒಂದು ರೂ. ಪರಿಹಾರವನ್ನೂ ನೀಡದೆ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

CT Ravi outraged against congress government at chikkamagaluru rav

ಚಿಕ್ಕಮಗಳೂರು (ಡಿ.12) :  ರಾಜ್ಯದ 220ಕ್ಕೂ ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಒಂದು ರೂ. ಪರಿಹಾರವನ್ನೂ ನೀಡದೆ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರಿಗೆ ಕೇವಲ 2000 ರು. ಬರ ಪರಿಹಾರ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಅದನ್ನೂ ಇನ್ನೂ ಕೊಟ್ಟಿಲ್ಲ ಎಂದರು.

ಉದ್ಯೋಗ ಸೃಷ್ಟಿಸಿ ಗುಳೇ ಹೋಗುವುದನ್ನು ತಡೆಯಲು ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅದರ ಪರಿಹಾರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ. ಬರೇ ನಾವು ರೈತರ ಪರ ಎನ್ನುತ್ತಾ ಬಾಯಿಮಾತಿನ ಉಪಚಾರ ಮಾಡಿದರೆ ಸಾಕೆ ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸಿ.ಟಿ.ರವಿಗೆ ಕಾರ್ಯಕರ್ತರ ಆಗ್ರಹ!

ವಿರೋಧ ಪಕ್ಷದ ನಾಯಕರೆಲ್ಲರೂ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಕಾಟಾಚಾರಕ್ಕೆ ಜಿಲ್ಲೆಗಳಿಗೆ ಹೋಗುವ ಕೆಲಸವನ್ನು ಮಾಡಿದರು. ಜನರಿಗೆ ಸ್ಪಂದಿಸುವ ಸಲುವಾಗಿ ಆಡಳಿತವನ್ನು ಚುರುಕುಗೊಳಿಸುವ ಕೆಲಸವನ್ನು ಮಾಡಿಲ್ಲ. ವಿಧಾನಸಭೆಯಲ್ಲಿ ಬಿಜೆಪಿಯವರು ಪ್ರಶ್ನೆ ಮಾಡುತ್ತಾರೆ ಎನ್ನುವ ಹಿನ್ನೆಲೆಯಲ್ಲಿ ನಾಟಕಕ್ಕೆ ಒಂದು ಘೋಷಣೆಯನ್ನು ಮಾಡಲಾಗಿದೆ ಎಂದು ದೂರಿದರು.

ಈಗಿನ್ನೂ ಡಿಸೆಂಬರ್ ತಿಂಗಳು. ಮಲೆನಾಡಿನಲ್ಲೇ ಶೇ. 65ರಿಂದ 70ರಷ್ಟು ಮಳೆ ಕೊರತೆ ಆಗಿದೆ. ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ಎಂದು ಘೊಷಣೆ ಮಾಡಬೇಕು ಎಂದು ಎಷ್ಟೇ ಕೇಳಿದರೂ ಘೋಷಣೆ ಆಗಿಲ್ಲ. ಬೇಸಿಗೆಯಲ್ಲಿ ದೇವರೇ ಕಾಪಾಡಬೇಕು. ಮನುಷ್ಯರ ಸಮಸ್ಯೆಯನ್ನೇ ಕೇಳುವವರಿಲ್ಲ. ಇನ್ನು ಮೂಕ ಪ್ರಾಣಿಗಳ ಗೋಳು ಕೇಳುವವರು ಯಾರು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕಾಂಗ್ರೆಸ್ ಪಕ್ಷ ಮೂಕ ಪ್ರಾಣಿಗಳು ಹೇಗೂ ಕಟುಕರ ಪಾಲಾಗಲಿ ಎನ್ನುವ ಮನಸ್ಥಿತಿಯಲ್ಲೇ ಕೆಲಸ ಮಾಡುತ್ತವೆ ಎಂದರು.

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ:

ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, ಮತ್ತೊಮ್ಮೆ ಮೋದಿ ಬರಬೇಕಿದೆ. ಬೂತ್ ಹಂತದಲ್ಲಿ ಬಿಟ್ಟು ಹೋಗಿರುವ ಮತದಾರರ ನೋಂದಣೆ ಕಾರ್ಯ ಮಾಡಬೇಕೆಂದು ಕರೆ ಕೊಟ್ಟಿದ್ದೇವೆ. ಭಾರತ ವಿಶ್ವದ ಅತ್ಯಂತ ದೊಡ್ಡ ಶಕ್ತಿಯಾಗಿ ಬದಲಾಗಲು, ಜನಾಂದೋಲನವಾಗಿ ಪರಿವರ್ತಿಸಲು ವಿಕಸಿತ ಭಾರತ ಎನ್ನುವ ಸಂಕಲ್ಪವನ್ನು ಪ್ರಧಾನ ಮಂತ್ರಿಗಳು ಕೊಟ್ಟಿದ್ದಾರೆ. ಅವರ ಆಶಯಕ್ಕೆ ತಕ್ಕಂತೆ ಜನರ ಸಂಕಲ್ಪವನ್ನಾಗಿಸುವ ಕೆಲಸ ನಡೆದಿದೆ. ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನ ಹಾಗೂ ದೇಶದಲ್ಲಿ 350ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎನ್ನುವ ವಿಶ್ವಾಸ ಇದೆ ಎಂದರು.

ಪ್ರತಿ ವರ್ಷದಂತೆ ಈ ಬಾರಿಯೂ ದತ್ತ ಜಯಂತಿ ನಡೆಯಲಿದೆ. ಜಿಲ್ಲಾಡಳಿತ ಪರಸ್ಪರ ಪೂರಕವಾಗಿ ನಿರ್ಣಯ ತೆಗೆದುಕೊಳ್ಳಬೇಕಿತ್ತು. ನಮಗಿರುವ ಮಾಹಿತಿ ಪ್ರಕಾರ ಚೌಕಾಸಿ ನಡೆಸಲು ಪ್ರಾರಂಭಿಸಿದ್ದಾರೆ. ಯಾವ ಚೌಕಾಸಿಗೂ ಅವರ ಜೊತೆ ಕೂರುವ ಅವಕಾಶವಿಲ್ಲ ಎಂದು ಸಂಘಟನೆಯವರಿಗೂ ಹೇಳಿದ್ದೇವೆ. ಜಿಲ್ಲಾಡಳಿತ ಏನು ಮಾಡುತ್ತದೋ ಅದನ್ನು ಮಾಡಲಿ, ನಾವು ದತ್ತ ಭಕ್ತರಾಗಿ ಭಾಗವಹಿಸುವ ಕೆಲಸವನ್ನು ಹಿಂದೆಯೂ ಮಾಡಿದ್ದೇವೆ. ಈಗಲೂ ಮಾಡುತ್ತೇವೆ ಎಂದು ಹೇಳಿದರು.

ಭಾರತೀಯ ಸಂಕಲ್ಪಕ್ಕೆ ದೊರೆತ ಜಯ

ದೇಶ ಹಿತಕ್ಕಾಗಿ ತೆಗೆದುಕೊಂಡ ನಿರ್ಣಯಕ್ಕೆ ಬೆಂಬಲವಾಗಿ ನಿಂತಿದೆ, ಜಮ್ಮು ಕಾಶ್ಮೀರದ ಆರ್ಟಿಕಲ್ 370 ಅನ್ನು ರದ್ದುಪಡಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಹಿತಕ್ಕಾಗಿ ತೆಗೆದುಕೊಂಡ ನಿರ್ಣಯಕ್ಕೆ ಬೆಂಬಲವಾಗಿ ನಿಂತಿದೆ. ಇದು ಇಡೀ ಭಾರತೀಯರ ಸಂಕಲ್ಪಕ್ಕೆ ದೊರೆತ ಜಯವಾಗಿದೆ ಎಂದು ಸಿ.ಟಿ. ರವಿ ಹೇಳಿದರು.

ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ರದ್ದು ಪಡಿಸಿ, ಲಡಾಕ್ ಮತ್ತು ಜಮ್ಮು ಕಾಶ್ಮೀರವನ್ನು ಪ್ರತ್ಯೇಕವಾಗಿ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಲೋಕಸಭೆಯಲ್ಲಿ ಮತ್ತು ಹೊರಗೆ ವಿರೋಧ ಮಾಡಿದ್ದವು. ಕಾಂಗ್ರೆಸ್ ಪಕ್ಷವಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಾವು ಅಧಿಕಾರಕ್ಕೆ ಬಂದರೆ ಮತ್ತೆ ಆರ್ಟಿಕಲ್ 370 ಅನ್ನು ಅನುಷ್ಠಾನಗೊಳಿಸುತ್ತೇವೆ ಎಂದಿತ್ತು. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಇದು ಜಮ್ಮು ಕಾಶ್ಮೀರದ ಜನತೆಗೆ ಬಗೆದ ದ್ರೋಹ ಎನ್ನುವ ಆರೋಪ ಮಾಡಿದ್ದವು ಎಂದರು.

ಇದರ ಜೊತೆಗೆ ಲಡಾಕ್ ಹಾಗೂ ಜಮ್ಮು ಕಾಶ್ಮೀರವನ್ನ ಪ್ರತ್ಯೇಕ ರಾಜ್ಯವನ್ನಾಗಿ ಮಾಡುವ ನಿರ್ಣಯವನ್ನೂ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಕಾನೂನುಬದ್ಧಗೊಳಿಸಿದೆ. ಇದರ ಜೊತೆಗೆ ಸಂವಿಧಾನಕ್ಕೆ ಪೂರಕವಾದ ನಿರ್ಧಾರವನ್ನ ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ. ಇದು ದೇಶವಾಸಿಗಳ ಮನಸ್ಸಿನಲ್ಲಿದ್ದ ಭಾವನೆಯನ್ನು ಎತ್ತಿಹಿಡಿದಂತಾಗಿದೆ ಎಂದು ತಿಳಿಸಿದರು.

‘ಕಾಂಗ್ರೆಸ್‌ ಈಸ್‌ ರಿಯಲ್‌ ಕಮ್ಯುನಲ್‌ ಪಾರ್ಟಿ’: ಮಾಜಿ ಸಚಿವ ಸಿ.ಟಿ.ರವಿ ವ್ಯಂಗ್ಯ

ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಪಂಡಿತ್ ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರು ಏಕ್ ದೇಶ್ ಮೇ ದೋ ವಿಧಾನ್, ದೋ ನಿಶಾನ್, ದೋ ಪ್ರಧಾನ್ ನಹಿ ಚಲೇಗ ಎನ್ನುವ ಮಾತನ್ನು ಹೇಳಿ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಸರ್ಕಾರದ ನಿರ್ಧಾರನ್ನು ವಿರೋಧಿಸಿ ತಮ್ಮ ಜೀವನವನ್ನೇ ಬಲಿದಾನ ಮಾಡಿದ್ದರು. ಅವರ ಬಲಿದಾನ ಸಾರ್ಥಕವಾಗಿದೆ. ವ್ಯರ್ಥವಾಗಲಿಲ್ಲ ಎಂದರು.

ಅಖಂಡ ಭಾರತದ ಭಾಗ ಕಾಶ್ಮೀರ. ಸಂವಿಧಾನದ ಪ್ರತಿಯೊಂದು ಅಂಶ ಕಾಶ್ಮೀರಕ್ಕೂ ಅನ್ವಯವಾಗುತ್ತದೆ. ಆ ಮೂಲಕ ಕಾಶ್ಮೀರದ ಜನತೆಗೂ ಸಂವಿಧಾನದ ಆಶಯವನ್ನು ತೋರಿಸುವ ಕೆಲಸವನ್ನು ಸುಪ್ರೀಂಕೋರ್ಟ್‌ನ ತೀರ್ಪು ಮಾಡಿದೆ. ಈ ಜಯ ಭಾರತದ ಜನತೆಯ ಜಯ. ಜಮ್ಮು ಕಾಶ್ಮೀರದ ಜನತೆಯ ಜಯ ಎಂದರು.

ಇಂದು ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ರದ್ದು ಮಾಡಿದ ನಂತರ ಭಾರತೀಯತೆ ಪ್ರಕಟೀಕರಣ ಆಗುತ್ತಿದೆ. ಒಂದು ಕಾಲದಲ್ಲಿ ಭಯೋತ್ಪಾದಕತೆ ತಾಂಡವವಾಡುತ್ತಿತ್ತು ಎಂದು ಹೇಳಿದರು.

Latest Videos
Follow Us:
Download App:
  • android
  • ios