ಸಿಪಿವೈಗೆ ಸಚಿವಗಿರಿ, ಹಳೇ ಮೈಸೂರು ಸಂಘಟನೆ ಹೊಣೆ?

ಶೀಘ್ರವೇ ಬಿಜೆಪಿ ಟ್ರಬಲ್ ಶೂಟರ್‌ ಎಂದು ಕರೆಸಿಕೊಳ್ಳುತ್ತಿರುವ ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗೋದು ಪಕ್ಕಾ ಎನ್ನುವಮಾತುಗಳು ಕೇಳಿಬರುತ್ತಿದ್ದು, ಇನ್ನು ಹಳೆಮೈಸೂರು ಹೊಣೆ ಯಾರಿಗೆ ಎನ್ನುವ ಕುತೂಹಲವು ಮೂಡಿದೆ.

CP Yogeshwar Likely Get Portfolio In BS Yediyurappa Cabinet

ಬೆಂಗಳೂರು (ಆ.18):  ರಾಜ್ಯದ ಹಳೆ ಮೈಸೂರು ಪ್ರದೇಶದಲ್ಲಿ ಪಕ್ಷ ಸಂಘಟನೆ ಬಗ್ಗೆ ಇತ್ತೀಚೆಗಷ್ಟೇ ಪ್ರಸ್ತಾಪಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೋಮವಾರ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಮತ್ತು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಹಳೆ ಮೈಸೂರು ಭಾಗದ ಅದರಲ್ಲೂ ಒಕ್ಕಲಿಗ ಸಮುದಾಯಕ್ಕೆ ಸೇರಿದ ಯೋಗೇಶ್ವರ್‌ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುವ ಕುರಿತಂತೆ ಮಾತುಕತೆ ನಡೆದಿದ್ದು, ಯೋಗೇಶ್ವರ್‌ ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕಲ್ಪಿಸಿ ಆ ಮೂಲಕ ಪಕ್ಷದ ಸಂಘಟನೆಗೂ ತೊಡಗಿಸಿಕೊಳ್ಳುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್‌ ಹಠಾತ್‌ ದೆಹಲಿಗೆ...

ಇತ್ತೀಚೆಗೆ ರಾಜ್ಯ ಘಟಕದ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ದೆಹಲಿಯಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಿದ್ದ ನಡ್ಡಾ ಅವರು ಹಳೆ ಮೈಸೂರು ಭಾಗದಲ್ಲಿನ ಸಂಘಟನೆ ಬಗ್ಗೆ ಪ್ರಸ್ತಾಪಿಸಿ ಸಂಘಟನೆ ಬಲಗೊಳಿಸುವಂತೆ ಕರೆ ನೀಡಿದ್ದರು. ರಾಜ್ಯದ ಎಲ್ಲ ಭಾಗದಲ್ಲಿಯೂ, ಎಲ್ಲ ಹಂತಗಳಲ್ಲಿಯೂ ಬಿಜೆಪಿ ಪ್ರತಿನಿಧಿತ್ವ ಇರುವಂತಾಗಬೇಕು ಎಂದು ಹೇಳಿದ್ದರು.

ಮಂತ್ರಿಗಿರಿ ತಪ್ಪಿಸಲು ಡಿಕೆಶಿ ನಿರಾಧಾರ ಆರೋಪ: ಯೋಗೇಶ್ವರ್‌.

ಯೋಗೇಶ್ವರ್‌ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡುವ ವೇಳೆಯೇ ಅವರನ್ನು ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಬಗ್ಗೆಯೇ ವರಿಷ್ಠರು ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಸಚಿವರನ್ನಾಗಿಸುವ ಬಗ್ಗೆಯೂ ಭರವಸೆ ನೀಡಲಾಗಿತ್ತು. ಇದೀಗ ಆ ಭರವಸೆಯನ್ನು ಮತ್ತೊಮ್ಮೆ ನೆನಪಿಸುವ ಹಾಗೂ ಪಕ್ಷ ಸಂಘಟನೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರ ಜೊತೆಗಿನ ಮಾತುಕತೆ ವೇಳೆ ಚರ್ಚೆ ನಡೆಸಲಾಯಿತು ಎನ್ನಲಾಗಿದೆ.

ಸಿಪಿವೈ ಪರ ರಮೇಶ್‌ ಬ್ಯಾಟಿಂಗ್‌:

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಬ್ಬರನ್ನೂ ಎದುರಿಸಿಕೊಂಡೇ ರಾಜಕಾರಣ ಮಾಡುತ್ತಿರುವ ಯೋಗೇಶ್ವರ್‌ ಅವರನ್ನು ಮುಂದಿಟ್ಟುಕೊಂಡು ಈ ಭಾಗದಲ್ಲಿ ಪಕ್ಷ ಸಂಘಟನೆ ಮಾಡುವುದು ಸೂಕ್ತ. ಅವರಿಬ್ಬರನ್ನು ಎದುರಿಸಲು ಪಕ್ಷದಲ್ಲಿರುವ ಇತರ ಮುಖಂಡರು ಹಿಂದೇಟು ಹಾಕುತ್ತಾರೆ. ಕೆಲವರು ರಾಜಿ ಮಾಡಿಕೊಳ್ಳುತ್ತಾರೆ. ಆದರೆ, ಯೋಗೇಶ್ವರ್‌ ಹಾಗಲ್ಲ. ಹೀಗಾಗಿ, ಅವರನ್ನು ಸಚಿವರನ್ನಾಗಿ ಮಾಡಿದರೆ ಈ ಭಾಗದಲ್ಲಿ ಸಂಚರಿಸಲು ಯೋಗೇಶ್ವರ್‌ ಅವರಿಗೆ ಬಲ ಬಂದಂತಾಗುತ್ತದೆ ಎಂಬ ಮಾತನ್ನು ರಮೇಶ್‌ ಜಾರಕಿಹೊಳಿ ಅವರೂ ನಡ್ಡಾ ಅವರ ಬಳಿ ಪ್ರಸ್ತಾಪಿಸಿದರು’ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.

Latest Videos
Follow Us:
Download App:
  • android
  • ios