ಯೋಗೇಶ್ವರ್ ಕಾಂಗ್ರೆಸ್ ಜತೆ ಸಂಪರ್ಕದಲ್ಲಿದ್ದಾರೆ: ಎಚ್.ಡಿ.ಕುಮಾರಸ್ವಾಮಿ
‘ಯೋಗೇಶ್ವರ್ ಅವರು ಮೇಲೆ ಇದ್ದಾರೆ. ದೊಡ್ಡವರು. ಅವರು ಕಾಂಗ್ರೆಸ್ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾರೆ. ಉಪಮುಖ್ಯಮಂತ್ರಿಗಳನ್ನು (ಡಿ.ಕೆ.ಶಿವಕುಮಾರ್) ಭೇಟಿ ಮಾಡಿದ್ದಾರೆ ಎಂಬ ಮಾಹಿತಿಯಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು (ಅ.21): ‘ಯೋಗೇಶ್ವರ್ ಅವರು ಮೇಲೆ ಇದ್ದಾರೆ. ದೊಡ್ಡವರು. ಅವರು ಕಾಂಗ್ರೆಸ್ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾರೆ. ಉಪಮುಖ್ಯಮಂತ್ರಿಗಳನ್ನು (ಡಿ.ಕೆ.ಶಿವಕುಮಾರ್) ಭೇಟಿ ಮಾಡಿದ್ದಾರೆ ಎಂಬ ಮಾಹಿತಿಯಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ. ಬಿಜೆಪಿಯಲ್ಲಿ ಕೆಲವರು ಕಾಂಗ್ರೆಸ್ ಜತೆ ಶಾಮೀಲಾಗಿದ್ದಾರೆ ಎಂದೂ ಅವರು ಹರಿಹಾಯ್ದಿದ್ದಾರೆ. ಭಾನುವಾರ ನಗರದಲ್ಲಿ ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಯೋಗೇಶ್ವರ್ ಬಗ್ಗೆ ನಾನೇನು ಚರ್ಚೆ ಮಾಡಲಿ? ಅವರು ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಅವರು ಕಾಂಗ್ರೆಸ್ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾರೆ. ಬೇರೆ ಬೇರೆ ಪಕ್ಷಗಳ ಮುಖಂಡರ ಜತೆಯೂ ಸಂಪರ್ಕದಲ್ಲಿದ್ದಾರೆ ಎಂದು ಹೊರಗಡೆ ಚರ್ಚೆ ನಡೆಯುತ್ತಿದೆ. ಪಕ್ಕದ ಮದ್ದೂರು ಕ್ಷೇತ್ರದ ಶಾಸಕರ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ಚರ್ಚೆ ನಡೆಯುತ್ತಿದೆ. ಎಲ್ಲವನ್ನೂ ಬಿಜೆಪಿ ವರಿಷ್ಠ ನಾಯಕರು ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಹಾವಿನ ದ್ವೇಷದ ಭಯಕ್ಕೆ ಒಂದೇ ರಾತ್ರಿಯಲ್ಲಿ ದೇವಸ್ಥಾನ ನಿರ್ಮಾಣ
ಈಗ ಚನ್ನಪಟ್ಟಣ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಈಗಾಗಲೇ ಬಿಜೆಪಿ ವರಿಷ್ಠ ನಾಯಕರೇ ಹಲವು ಬಾರಿ ಹೇಳಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಗ್ಗೆ ನೀವೇ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದಿದ್ದಾರೆ. ಚನ್ನಪಟ್ಟಣ ಜೆಡಿಎಸ್ ಸ್ಪರ್ಧಿಸಿರುವ ಕ್ಷೇತ್ರ ಎನ್ನುವುದು ಅವರಿಗೆ ಗೊತ್ತಿದೆ. ಚನ್ನಪಟ್ಟಣ ವಿಚಾರದಲ್ಲಿ ಇನ್ನೂ ನಾವು ಯಾವುದೇ ನಿರ್ಧಾರ ಮಾಡಿಲ್ಲ ಎಂದರು. ಬಿಜೆಪಿಯಲ್ಲಿ ಇರುವಂತಹ ಕೆಲವೇ ಕೆಲವರು ಕುಮಾರಸ್ವಾಮಿಗೆ ದೆಹಲಿ ಮಟ್ಟದಲ್ಲಿ ಉತ್ತಮ ಬಾಂಧವ್ಯ ಇದೆ, ಹೀಗಾಗಿ ಅವರಿಗೆ ಏನಾದರೂ ಸಮಸ್ಯೆ ಉದ್ಭವ ಮಾಡಬೇಕು ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ.
ಅದು ನನ್ನ ಕಿವಿಗೂ ಬಿದ್ದಿದೆ. ಬಿಜೆಪಿ - ಜೆಡಿಎಸ್ ಮೈತ್ರಿಗೆ ಹುಳಿ ಹಿಂಡುವವರು ಬಹಳಷ್ಟು ಜನ ಇದ್ದಾರೆ. ಒಟ್ಟಾರೆ ಕುಮಾರಸ್ವಾಮಿಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವರ ಪ್ರಯತ್ನ ಫಲ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು. ಮೈತ್ರಿಯನ್ನು ಹಾಳು ಮಾಡಲು ಕೆಲವರು ಹೀಗೆ ಮಾಡುತ್ತಿರಬಹುದು. ನನ್ನ ಗಮನಕ್ಕೂ ಹಲವಾರು ವಿಚಾರಗಳು ಬರುತ್ತಿವೆ. ಯೋಗೇಶ್ವರ್ ಅವರು ಉಪ ಮುಖ್ಯಮಂತ್ರಿಯನ್ನು ಈಗಾಗಲೇ ಎರಡು ಬಾರಿ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಅವರು ಏತಕ್ಕೆ ಭೇಟಿ ಮಾಡಿದ್ದರು ಎಂಬುದು ನನಗೆ ಬೇಕಿಲ್ಲ ಎಂದರು.
ಹುಳಿ ಹಿಂಡುವವರು ನಮ್ಮ ಪಕ್ಷದಲ್ಲಿ ಇಲ್ಲ. ಆದರೆ ಅಲ್ಲಿನ ಹುಳಿ ಹಿಂಡುವವರು ಕಾಂಗ್ರೆಸ್ ನಾಯಕರ ಜತೆ ಸೇರಿಕೊಂಡಿದ್ದಾರೆ. ಅದು ನನಗೆ ಗೊತ್ತಿದೆ. ಪ್ರಧಾನ ಮಂತ್ರಿ ಅವರನ್ನು ಅಸ್ಥಿರಗೊಳಿಸಲು ಅವರು ಕಾಂಗ್ರೆಸ್ ನಾಯಕರ ಜತೆ ಸೇರಿಕೊಂಡು ಮಸಲತ್ತು ಮಾಡುತ್ತಿರಬಹುದು. ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ಆಗಬಾರದು. ಇದೆಲ್ಲವನ್ನೂ ಗಮನಿಸುತ್ತಿದ್ದೇನೆ. ಇದಕ್ಕೆ ನಾನು ಅವಕಾಶ ಕೊಡಬೇಕಾ ಎಂದು ಅವರು ಪ್ರಶ್ನಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ: ಶೇ.100ರಷ್ಟು ಪಾಸ್‌ಗೆ ಖಾಸಗಿ ಶಾಲೆಗಳ ಕುತಂತ್ರ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಇಲ್ಲಿವರೆಗೂ ಎಲ್ಲೂ ನಮ್ಮ ಕುಟುಂಬದವರು ಸ್ಪರ್ಧೆ ಮಾಡುತ್ತಾರೆ ಎಂದು ನಾನು ಹೇಳಿಲ್ಲ. ನಾನು ಸ್ಪರ್ಧೆ ಮಾಡಲ್ಲ ಎಂದು ನಿಖಿಲ್ ಕುಮಾರಸ್ವಾಮಿ ನೂರು ಬಾರಿ ಹೇಳಿದ್ದಾರೆ. ಚುನಾವಣೆಯಲ್ಲಿ ನಿಲ್ಲಲ್ಲ. ಇನ್ನೂ ಮೂರು ವರ್ಷ ಕಾಯುತ್ತೇನೆ ಎಂದು ಅವರು ಹೇಳಿದ್ದಾರೆ. ನಾನೇನಾದರೂ ನಿಖಿಲ್ ನಿಲ್ಲುತ್ತಾರೆ ಎಂದು ಹೇಳಿದ್ದೇನಾ? ನಾನು ಹೇಳಿರುವುದು ಎನ್‌ಡಿಎ ಅಭ್ಯರ್ಥಿ ನಿಲ್ಲುತ್ತಾರೆ ಎಂದು. ಅದು ಬಿಜೆಪಿಯಿಂದ ಅಥವಾ ಜೆಡಿಎಸ್‌ನಿಂದ ಆದರೂ ಆಗಬಹುದು ಅಂತ ಅಷ್ಟೇ ಎಂದರು.