Asianet Suvarna News Asianet Suvarna News

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಯ ಸದಸ್ಯತ್ವ ರದ್ದು: ಬಿಜೆಪಿಗೆ ಡಬಲ್ ಶಾಕ್!

ಕಲಬುರಗಿ ಮಹಾನಗರ ಪಾಲಿಕೆಯ ಮತ್ತೋರ್ವ ಸದಸ್ಯತ್ವವನ್ನು ಕೋರ್ಟ್ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಕಾತರದಲ್ಲಿದ್ದ ಬಿಜೆಪಿಗೆ ಬಿಗ್ ಶಾಕ್ ಆಗಿದೆ.

court disqualifies Kalaburagi City Corporation independent membership rbj
Author
First Published Sep 14, 2022, 11:36 PM IST

ವರದಿ :- ಶರಣಯ್ಯ ಹಿರೇಮಠ ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ


ಕಲಬುರಗಿ, ( ಸೆ.14):
ಕಲಬುರಗಿ ಮಹಾನಗರ ಪಾಲಿಕೆಯ ಮತ್ತೊಬ್ಬ ಸದಸ್ಯನ ಆಯ್ಕೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.  ವಾರ್ಡ್ ನಂಬರ್ 36ರಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಶಂಭುಲಿಂಗ ಬಳಬಟ್ಟಿಯ ಆಯ್ಕೆಯನ್ನು ಕಲಬುರಗಿಯ ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಲಯ ಅಸಿಂಧುಗೊಳಿಸಿದೆ.  

ಶಂಭುಲಿಂಗ ಬಳಬಟ್ಟಿ ಚುನಾವಣಾ ಆಯೋಗಕ್ಕೆ ಅಫಿಡೆವಿಟ್ ಸಲ್ಲಿಸುವಾಗ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಸಲ್ಲಿಸಿರುವ ಹಿನ್ನಲೆಯಲ್ಲಿ ಅವರ ಸದಸ್ಯತ್ವವನ್ನು ಕೋರ್ಟ್ ರದ್ದುಗೊಳಿಸಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ಸದಸ್ಯತ್ವ ಸಹ ಅಸಿಂಧುಗೊಂಡಿದೆ. ಇದೀಗ ಪಕ್ಷೇತರದಿಂದ ಗೆದ್ದು ಬಿಜೆಪಿ ಸೇರಿದ್ದ  ಶಂಭುಲಿಂಗ ಸದಸ್ಯತ್ವವನ್ನು ಸಹ ಕೋರ್ಟ್ ರದ್ದು ಮಾಡಿದ್ದು, ಬಿಜೆಪಿಗೆ ಶಾಕ್ ಮೇಲೆ ಶಾಕ್ ಕೊಟ್ಟಂತಾಗಿದೆ. ಅಲ್ಲದೇ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಕನಸು ಕಾಣುತ್ತಿದ್ದ ಬಿಜೆಪಿಗೆ ಕೋರ್ಟ್ ತಣ್ಣೀರು ಸುರಿದೆ.

Kalaburagi| 'ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ವಾಮಮಾರ್ಗ'

ಶಂಭುಲಿಂಗ ಬಳಬಟ್ಟಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅವರ ವಿರುದ್ದ ಬಿಜೆಪಿಯಿಂದ ಸ್ಪರ್ದಿಸಿ ಸೋತ ಅಭ್ಯರ್ಥಿ ಸೂರಜ್ ತಿವಾರಿ ಅವರ ಪತ್ನಿ ಆರತಿ ತಿವಾರಿ ನ್ಯಾಯಾಲಯದ ಮೊರೆ ಹೋಗಿದ್ದರು.  ಇವರು ಒಂದು ಕಡೆ ತಮ್ಮ ತಂದೆ ತಾಯಿ ಅವಲಂಬಿತ ಎಂದು ಹೇಳಿಕೊಂಡಿದ್ದು ತಂದೆಯ ಆಸ್ತಿ ವಿವರ ಘೋಷಣೆಯಲ್ಲಿ ಇಲ್ಲ. ಚುನಾವಣಾ ಆಯೋಗಕ್ಕೆ ಈ ಮೂಲಕ ಸುಳ್ಳು ಮಾಹಿತಿ ನೀಡಿದ್ದಾರೆ. ಇವರ ಆಯ್ಕೆಯನ್ನು ಅಸಿಂಧು ಗೊಳಿಸಬೇಕು ಎಂದು ಆರತಿ ಸೂರಜ್ ತಿವಾರಿ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಆರತಿ ಮನವಿ ಪುರಸ್ಕಾರ
ಪರಾಜಿತ ಅಭ್ಯರ್ಥಿ ಸೂರಜ್ ತಿವಾರಿ ಅವರ ಪತ್ನಿ ಆರತಿ ತಿವಾರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಚುನಾವಣಾ ಆಯೋಗಕ್ಕೆ ಸುಳ್ಳು ಅಫಿಡೆವಿಟ್ ಸಲ್ಲಿಸಿರುವ ಶಂಭುಲಿಂಗ ಬಳಬಟ್ಟಿ ಅವರ ಸದಸ್ಯತ್ವ ರದ್ದು ಮಾಡಿದ್ದಲ್ಲದೇ ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ದಿಸುವಂತಿಲ್ಲ ಎಂದು ಸೂಚಿಸಿದೆ. 

ಬಿಜೆಪಿ ಸಂಖ್ಯಾಬಲ ಮತ್ತೆ ಕುಸಿತ
ಶಂಭುಲಿಂಗ ಬಳಬಟ್ಟಿ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರೂ ಪಾಲಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದ್ರೆ, ಶಂಭುಲಿಂಗ ಬಳಬಟ್ಟಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿರುವ ಹಿನ್ನಲೆಯಲ್ಲಿ ಬಿಜೆಪಿಯ ಸಂಖ್ಯಾಬಲ ಮತ್ತೆ ಕುಸಿದಂತಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಶಂಭುಲಿಂಗ ಬಳಬಟ್ಟಿ ಆಯ್ಕೆಯಾಗಿದ್ದರೂ ಸಹ ಫಲಿತಾಂಶದ ನಂತ್ರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. 

ಬಿಜೆಪಿಗೆ ಅಸಿಂಧು ಕಾಟ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಶತಾಯ ಗತಾಯ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಅಸಿಂಧು ಕಾಟ ವಿಪರೀತವಾಗಿ ಕಾಡುತ್ತಿದೆ. ಈಗ ಶಂಭುಲಿಂಗ ಬಳಬಟ್ಟಿ ಅಸಿಂಧುಗೊಂಡ ರೀತಿಯಲ್ಲೇ ಬಿಜೆಪಿ ಸದಸ್ಯೆಯ ಸದಸ್ಯತ್ವ ಸಹ ಇದೇ ರೀತಿ ರದ್ದಾಗಿದೆ. 

24ನೇ ವಾರ್ಡ ಸದಸ್ಯತ್ವವೂ ರದ್ದು
ನಕಲಿ ವಯಸ್ಸಿನ ಪ್ರಮಾಣ ಪತ್ರ ಸಲ್ಲಿಕೆ ಹಿನ್ನಲೆ ವಾರ್ಡ್ ನಂಬರ್ 24 ರ ಬಿಜೆಪಿ ಸದಸ್ಯೆ ಪ್ರೀಯಾಂಕಾ ಎನ್ನುವ ಸದಸ್ಯೆಯ ಸದಸ್ಯತ್ವ ಸಹ ಇದೇ ರೀತಿ ರದ್ದುಗೊಂಡಿತ್ತು. ಕಲಬುರಗಿ 3ನೇ ಜೆಎಂಎಫ್ ಸಿ ಕೋರ್ಟ್ ಕಳೆದ ಆಗಸ್ಟ 17 ರಂದು ಆದೇಶಿಸಿತ್ತು. ಅಲ್ಲದೇ ಆ ಪ್ರಕರಣದಲ್ಲಿ ಸಮೀಪದ ಪ್ರತಿಸ್ಪರ್ದಿ ಪಕ್ಷೇತರ ಅಭ್ಯರ್ಥಿ ನೂರ ಫಾತಿಮಾರನ್ನು ಪಾಲಿಕೆ ಸದಸ್ಯೆ ಎಂದು ಪರಿಗಣಿಸಲು ನ್ಯಾಯಾಲಯ ಆದೇಶ ನೀಡಿತ್ತು. 

ಬಿಜೆಪಿ ಬಲ 22ಕ್ಕೆ ಇಳಿಕೆ
ವಾರ್ಡ್ ನಂಬರ್ 24ರ ಬಿಜೆಪಿ ಸದಸ್ಯೆ ಪ್ರೀಯಾಂಕಾ ಮತ್ತು ವಾರ್ಡ್ ನಂಬರ್ 36ರ  ಸದಸ್ಯ ಶಂಭುಲಿಂಗ ಬಳಬಟ್ಟಿ ಅವರ ಸದಸ್ಯತ್ವ ರದ್ದತಿಯಿಂದಾಗಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಬಲ 22ಕ್ಕೆ ಕುಸಿದಂತಾಗಿದೆ. ಒಟ್ಟು 55 ಸ್ಥಾನ ಬಲದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಸ್ವತಂತ್ರ ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಸೇರ್ಪಡೆಯೊಂದಿಗೆ ಬಿಜೆಪಿ 24 ಸ್ಥಾನ ಪಡೆದಿತ್ತು. ಇನ್ನು ಜೆಡಿಎಸ್ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ಇದೀಗ ಬದಲಾದ ಸನ್ನಿವೇಶದಲ್ಲಿ ಬಿಜೆಪಿಯ ಬಲ 22 ಕ್ಕೆ ಕುಸಿದಂತಾಗಿದೆ. 

ಈ ಬಾರಿ ಶತಾಯಗತಾಯವಾಗಿ ಅಧಿಕಾರ ಹಿಡಿಯಬೇಕೆಂಬ ಕಾತರದಲ್ಲಿದ್ದ ಬಿಜೆಪಿಗೆ ಇಬ್ಬರ ಸದಸ್ಯತ್ವ ರದ್ದುಗೊಂಡಿದ್ದರಿಂದ ಭಾರೀ ಹಿನ್ನಡೆಯಾದಂತಾಗಿದೆ. 

Follow Us:
Download App:
  • android
  • ios