ದೇಶದ ನೈಜ ಇತಿಹಾಸ ಎಂದಿಗೂ ಬದಲಾಗದು: ವಿನಯಕುಮಾರ್ ಸೊರಕೆ
- ದೇಶದ ನೈಜ ಇತಿಹಾಸ ಎಂದಿಗೂ ಬದಲಾಗದು: ವಿನಯಕುಮಾರ್ ಸೊರಕೆ
- ಸ್ವಾತಂತ್ರ್ಯ ಅಮೃತ ಮಹೋತ್ಸವ: ಪುತ್ತೂರಿನಿಂದ ವಿಟ್ಲಕ್ಕೆ ಕಾಂಗ್ರೆಸ್ ನಡಿಗೆ
ಪುತ್ತೂರು (ಆ.23) ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರಬಂದವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕೊಂದವರ ಪೀಳಿಗೆಯವರು ಇವತ್ತು ನಮಗೆ ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ. ನಕಲಿಗಳ ದೇಶಪ್ರೇಮದ ಮುಖವಾಡ ನಾವಿಂದು ಕಾಣುತ್ತಿದ್ದೇವೆ. ದೇಶದ ನೈಜ ಇತಿಹಾಸವನ್ನು ತಿರುಚುವ ಪ್ರಯತ್ನಗಳಾಗುತ್ತಿದೆ. ಆದರೆ ನೈಜ ಇತಿಹಾಸವನ್ನು ಎಂದಿಗೂ ತಿರುಚಿ ನಂಬಿಸಲು ಸಾಧ್ಯವಿಲ್ಲ. ಇತಿಹಾಸ ಯಾವತ್ತೂ ಬದಲಾಗದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಜನರಲ್ಲಿ ದೇಶಾಭಿಮಾನ ಮೂಡಿಸಲು ಕಾಂಗ್ರೆಸ್ ಪಾದಯಾತ್ರೆ
ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪುತ್ತೂರು ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡ ಪುತ್ತೂರಿನಿಂದ ವಿಟ್ಲದ ತನಕ ನಡೆದ ‘ಸ್ವಾತಂತ್ರ್ಯದ ನಡಿಗೆ’ ಪಾದಯಾತ್ರೆ ಕಾರ್ಯಕ್ರಮದಲ್ಲಿ ದರ್ಬೆಯಲ್ಲಿ ನಡೆದ ಉದ್ಘಾಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ. ಕ್ಸೇವಿಯರ್ ಡಿಸೋಜ ಪಾದಯಾತ್ರೆ ಉದ್ಘಾಟಿಸಿ, ಸುಮಾರು 200 ವರ್ಷಗಳ ಹೋರಾಟದ ಬಳಿಕ ಭಾರತ ಸ್ವಾತಂತ್ರ್ಯಗೊಂಡಿದೆ. 1885ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ಲಭಿಸಿತು. ಮಹಾತ್ಮ ಗಾಂಧೀಜಿಯವರು ಹೋರಾಟಕ್ಕೆ ಧುಮಿಕಿದ ಬಳಿಕ ಸ್ವಾತಂತ್ರ್ಯದ ಹೋರಾಟ ಸಾಮಾನ್ಯರ ಚಳುವಳಿಯಾಗಿ ಬೆಳೆಯಿತು. ಇದು ರಾಜಕೀಯ ಪಾದಯಾತ್ರೆಯಲ್ಲ, ದೇಶದ 75 ವರ್ಷಗಳ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ ಕಾರ್ಯಕ್ರಮವಾಗಿದೆ. ಇಲ್ಲಿ ಯಾವುದೇ ರಾಜಕೀಯ ಘೋಷಣೆಗಳು, ಧಿಕ್ಕಾರಗಳೂ ಇರುವುದಿಲ್ಲ. ಕೇವಲ ಭಾರತ ಮಾತೆಗೆ ಜೈಕಾರ ಇರಲಿದೆ. ಇತಿಹಾಸ ಒಂದು ಧರ್ಮ, ಬಣ್ಣಕ್ಕೆ ಸೀಮಿತವಲ್ಲ. ಹೋರಾಟವನ್ನು ನಮ್ಮ ಎಲ್ಲ ಹಿರಿಯರ ಶ್ರಮವನ್ನು ಅರಿತು ಗೌರವಿಸಬೇಕು ಎಂದರು.
ಮಾಜಿ ಶಾಸಕ ಜೆ.ಆರ್. ಲೋಬೋ, ಪಕ್ಷದ ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಕೃಪಾ ಅಮರ ಆಳ್ವ, ಎಂ.ಬಿ. ವಿಶ್ವನಾಥ ರೈ, ಎಚ್. ಮಹಮ್ಮದ್ ಆಲಿ, ಡಾ. ರಾಜಾರಾಂ, ಶ್ರೀಪ್ರಸಾದ್ ಪಾಣಾಜೆ, ದಿವ್ಯಪ್ರಭಾ ಚಿಲ್ತಡ್ಕ, ಅನಿತಾ ಹೇಮನಾಥ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ಎಂ.ಎಸ್. ಮಹಮ್ಮದ್, ಡಾ. ರಘು, ಧನಂಜಯ ಅಡ್ಪಂಗಾಯ, ಮಲ್ಲಿಕಾ ಪಕ್ಕಳ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ರಾಜ್ಯದಲ್ಲಿ ನಕಲಿ ಕಾಂಗ್ರೆಸ್ ಪಾದಯಾತ್ರೆ: ಎಚ್‌ಡಿಕೆ ವ್ಯಂಗ್ಯ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ, ತೆಂಗಿನ ಕಾಯಿ ಒಡೆದು ಹಾಗೂ ಹಿರಿಯ ಕಾಂಗ್ರೆಸ್ಸಿಗ ಮೊಯ್ದು ಕುಟ್ಟಿಹಾಜಿ ಪರ್ಲಡ್ಕ ತ್ರಿವರ್ಣ ಧ್ವಜವನ್ನು ಸೇವಾದಳದ ಮುಖಂಡರಿಗೆ ಹಸ್ತಾಂತರಿಸುವ ಮೂಲಕ ಸ್ವಾತಂತ್ರ್ಯದ ನಡಿಗೆಗೆ ಚಾಲನೆ ನೀಡಿದರು. ಬಳಿಕ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿತು. ಪುತ್ತೂರು ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಲ್ಲಿ ಗಾಂಧೀಜಿ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು. ಬಳಿಕ ನೆಹರೂನಗರದಲ್ಲಿ ಮುಂದುವರಿದು ಕಬಕ ಮೂಲಕ ವಿಟ್ಲಕ್ಕೆ ಸಾಗಿತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ಸ್ವಾಗತಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.