ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣದವರು ಆಂತರಿಕ ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕಾಗಿ ಶಾಸಕರನ್ನು ಖರೀದಿ ಮಾಡಲು ಎರಡೂ ಬಣದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಬಾಗಲಕೋಟೆ (ಜೂ.22): ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣದವರು ಆಂತರಿಕ ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕಾಗಿ ಶಾಸಕರನ್ನು ಖರೀದಿ ಮಾಡಲು ಎರಡೂ ಬಣದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಗುಂಪಿನವರು ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಾರೆ. ಸಿದ್ದರಾಮಯ್ಯ ಬಣದವರು ಯಾವುದೇ ಬದಲಾವಣೆ ಇಲ್ಲ ಎನ್ನುತ್ತಾರೆ.
ಇದು ಆಡಳಿತದ ಮೇಲೂ ಪರಿಣಾಮ ಬೀರಿದೆ, ಶಾಸಕರನ್ನು ಖರೀದಿ ಮಾಡಲು ಈ ಎರಡೂ ಬಣದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ತಮ್ಮ ಪರ ಶಾಸಕರ ಖರೀದಿ ವ್ಯಾಪಾರಕ್ಕೆ ನಿಂತಿದ್ದಾರೆ, ಶಾಸಕರೂ ಸಹ ವೈಯಕ್ತಿಕ ಲಾಭಕ್ಕೆ ನಿಂತಿದ್ದಾರೆ. ಅವರಿಗೂ ಇದೊಂದು ಚಿನ್ನದಂತಹ ಅವಕಾಶ, ಬಾಚಿಕೊಳ್ಳೋದೆ ಎಂದು ಗೇಲಿ ಮಾಡಿದರು. ಭ್ರಷ್ಟಾಚಾರದ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸಿದವರು ಕಾಂಗ್ರೆಸ್ಸಿನವರು ಎಂದು ಕಿಡಿಕಾರಿದರು.
ಅವರದೇ ಪಕ್ಷದ ರಾಯರೆಡ್ಡಿ ಅವರು ನಮ್ಮ ಸರ್ಕಾರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೀತಿದೆ ಎಂದು ಈ ಮೊದಲು ಹೇಳಿದ್ದರು. ಈಗ ಆಡಿಯೋ ಬಿಡುಗಡೆ ಆಗಿದೆ. ಅಭಿವೃದ್ಧಿಗೆ ದುಡ್ಡಿಲ್ಲ, ಭ್ರಷ್ಟಾಚಾರ ಹೆಚ್ಚು ನಡೆದಿದೆ ಎಂದು ಉತ್ತರ ಕರ್ನಾಟಕದ ಶಾಸಕರು ಹೇಳಿದರು. ಈಗ ಆಡಿಯೋ ಬಿಡುಗಡೆ ಆಗಿದೆ, ನಾವೇನಾದರೂ ಹೇಳಿದರೆ ಬಿಜೆಪಿಗರಿಗೆ ಕೆಲಸ ಇಲ್ಲ ಎನ್ನುತ್ತಾರೆ. ಈಗ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು.
ರಾಗಾ ಲಾಂಚ್ ಆಗಿಲ್ಲ: ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೊನ್ನೆ ಅಂಕ ನೀಡುವುದಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜನರೇ ಝಿರೋ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು. ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಮೋದಿ ನೇತೃತ್ವದ 11 ವರ್ಷದ ಆಡಳಿತಕ್ಕೆ ಶೂನ್ಯ ಅಂಕ ನೀಡಿದ್ದು, ಮುಂದಿನ ಮೂರು ವರ್ಷ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಬೆಲೆ ಏರಿಕೆಗೆ ಮೋದಿ ಕಾರಣ ಎನ್ನುತ್ತಿದ್ದಾರೆ. 2014ರಿಂದ 30-32 ಬಾರಿ ರಾಹುಲ್ ಗಾಂಧಿಯನ್ನು ಲಾಂಚ್ ಮಾಡುಯ್ಯತ್ನ ನಡೆಯಿತು. ಚಂದ್ರಯಾನ ಒಂದು ಬಾರಿ ವಿಫಲಗೊಂಡ ಮೇಲೆ ಯಶಸ್ವಿಯಾಗಿ ಲಾಂಚ್ ಆಯಿತು. ಆದರೆ, ರಾಹುಲ್‌ಗಾಂಧಿ ಯಶಸ್ವಿಯಾಗಲಿಲ್ಲ, ಜನರು ಅವರಿಗೆ ಶೂನ್ಯ ಅಂಕ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಾಮಾಜಿಕ ಬದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಮರು ಜಾತಿ ಸಮೀಕ್ಷೆಗೆ ಮುಂದಾಗಿದ್ದಾರೆ. ಮೀಸಲಾತಿ ವಿರೋಧಿಸುವವರೇ ಅವರಾಗಿದ್ದಾರೆ. ಕಾಂಗ್ರೆಸ್‌ನ ನಾಯಕರಾದ ಜವಾಹರಲಾಲ್ ನೆಹರು ಅವರಿಂದ ರಾಜೀವ್ ಗಾಂಧಿವರೆಗೂ ಮೀಸಲಾತಿ ವಿರೋಧಿಸಿದವರು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು, ರಾಜೀವ್ ಗಾಂಧಿ ಅವರು ಮೀಸಲಾತಿ ವಿರೋಧ ಮಾಡಿರುವ ದೊಡ್ಡ ಭಾಷಣವೇ ಸಂಸತ್ತಿನಲ್ಲಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸಂಪೂರ್ಣವಾಗಿ ನೆಲಕ್ಕಚ್ಚಿದೆ. ಶೇ.60 ಪರ್ಸೆಂಟೇಜ್ ಸರ್ಕಾರವೆಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಅವರು ದೂರಿದರು.
