ಡಿಎಫ್‌ಓ ಬರೆದ ಷರಾ ಓದಿದ ಸಿಎಂ ಚಿರತೆಯಿಂದ ಕಚ್ಚಿಸಿಕೊಂಡ ವ್ಯಕ್ತಿಯ ಫೋಟೋ ತರಿಸಿ ನೋಡಿದ್ದಾರೆ. ಆ ಗಾಯಗಳನ್ನು ನೋಡಿದ ಕೂಡಲೇ ಅವರಿಗೆ ನಖಶಿಖಾಂತ ಉರಿದುಹೋಗಿದೆ. ಯಾರ್ರೀ ಆಯಮ್ಮ. ಇದು ನಾಯಿ ಕಚ್ಚಿದ್ದು ಅಂತಾರಲ್ಲ. ಮೊದಲು ಆಯಮ್ಮನಿಗೆ ನಾಡಿನಲ್ಲಿ ನಾಯಿಗಳಿಂದ ಕಚ್ಚಿಸಿಕೊಳ್ಳುವುದು ಬಿಟ್ಟು ಕಾಡಿಗೆ ಕಳಿಸ್ರೀ... ಅಲ್ಲಿ ಚಿರತೆಯಿಂದ ಕಚ್ಚಿಸಿಕೊಳ್ಳಲಿ... ಎಂದು ಗುಡುಗಿದ್ದಾರೆ.
ಚಿರತೆಗಳಿಗೆ ನಾಯಿಗಳು ಅಂದರೆ ಚಿಕನ್ ಬಿರಿಯಾನಿ ಕಂಡಷ್ಟುಖುಷಿ. ಹೀಗಾಗಿಯೇ ಆಗಾಗ ಕಾಡು ಬಿಟ್ಟು ನಾಡಿನಲ್ಲಿ ಅಲೆದು ಅಬ್ಬೇಪಾರಿಯಾಗಿ ಸಿಗುವ ನಾಯಿಗಳನ್ನು ಬೇಟೆಯಾಡುವ ಪದ್ಧತಿ ಪಾಲಿಸುತ್ತಿವೆ. ಮೊನ್ನೆ ಏನಾಯಿತು ಎಂದರೆ ಕೊಳ್ಳೆಗಾಲದ ಕಾಡಿನಲ್ಲಿನ ಚಿರತೆಯೊಂದು ನಾಡಿಗೆ ನುಗ್ಗಿತ್ತು. ಅದೇನು ನಾಯಿ ಹಿಡಿಯಲು ಬಂದಿತ್ತೋ ಅಥವಾ ಕುರಿಗಳ ಮೇಲೆ ಕಣ್ಣಿಟ್ಟಿತ್ತೋ ಗೊತ್ತಿಲ್ಲ. ಆದರೆ, ಅದ್ಯಾವುದೂ ಸಿಗದೆ ಒಂಟಿಯಾಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿಬಿಟ್ಟಿದೆ. ಆ ವ್ಯಕ್ತಿ ಕೂಗಾಡಿದ್ದಕ್ಕೋ ಅಥವಾ ಜನ ಎಗರಾಡಿದ್ದಕ್ಕೋ ವ್ಯಕ್ತಿಗೆ ಚೆನ್ನಾಗಿ ಕಚ್ಚಿ ಹಾಕಿ ಜೀವಂತ ಬಿಟ್ಟು ಓಡಿಹೋಗಿದೆ.
ಚಿರತೆಯಿಂದ ಕಚ್ಚಿದ್ದ ವ್ಯಕ್ತಿ ಆಸ್ಪತ್ರೆ ಸೇರಿ ಸುಧಾರಿಸಿಕೊಳ್ಳುತ್ತಿದ್ದಾನೆ. ಆದರೆ, ನಮ್ಮ ಡೈರಿಯ ವಿಷಯ ಅದಲ್ಲ. ಚಿರತೆಯಿಂದ ಕಚ್ಚಿಸಿಕೊಂಡಿದ್ದಕ್ಕೆ ಆ ವ್ಯಕ್ತಿ ಪರಿಹಾರ ಕೇಳಿದ್ದು, ಅದಕ್ಕೆ ಡಿಎಫ್‌ಓ ಮೇಡಂ ಆಕ್ಷೇಪಣೆ ಎತ್ತಿದ್ದು ಸುದ್ದಿಯಾಗಿಬಿಟ್ಟಿದೆ. ಏಕೆಂದರೆ, ಅರಣ್ಯ ಇಲಾಖೆಯ ಆರ್‌ಎಫ್‌ಓದಂತಹ ಅಧಿಕಾರಿಗಳು ‘ವ್ಯಕ್ತಿಗೆ ಚಿರತೆ ಕಚ್ಚಿದೆ, ಹೀಗಾಗಿ ಪರಿಹಾರ ನೀಡಬಹುದು’ ಎಂದು ಶಿಫಾರಸು ಮಾಡಿದ್ದರೆ, ಜಿಲ್ಲಾ ಮಟ್ಟದಲ್ಲಿ ಎ.ಸಿ. ಕೊಠಡಿಯಲ್ಲಿ ಕೂರುವ ಡಿಎಫ್‌ಓ ಮೇಡಂ ಮಾತ್ರ ಇದಕ್ಕೆ ಆಕ್ಷೇಪ ಎತ್ತಿದ್ದಾರೆ. ‘ವ್ಯಕ್ತಿಯನ್ನು ಕಚ್ಚಿದ್ದು ಚಿರತೆ ಅಲ್ಲ ಬದಲಾಗಿ ನಾಯಿ’ ಎಂದು ಷರಾ ಬರೆದುಬಿಟ್ಟಿದ್ದಾರೆ. ಏನು ಮಾಡಿದರೂ ಪರಿಹಾರ ದೊರಕದಂತೆ ಅಡ್ಡಿ ಹಾಕಿದ್ದಾರೆ.
ಸೌಜನ್ಯ ಕೇಸ್ ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್‌ಗೆ
ಪರಿಸ್ಥಿತಿ ಕೈಮೀರಿದ್ದರಿಂದ ಸ್ಥಳೀಯ ಶಾಸಕ ಎ.ಆರ್.ಕೃಷ್ಣ ಮೂರ್ತಿ ಅವರು ನಿರ್ವಾಹವಿಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅಹವಾಲು ತಂದಿದ್ದರು. ಡಿಎಫ್‌ಓ ಬರೆದ ಷರಾ ಓದಿದ ಸಿಎಂ ಸಿದ್ದರಾಮಯ್ಯ ಅವರು ಚಿರತೆಯಿಂದ ಕಚ್ಚಿಸಿಕೊಂಡ ವ್ಯಕ್ತಿಯ ಫೋಟೋಗಳನ್ನು ತರಿಸಿ ನೋಡಿದ್ದಾರೆ. ಫೋಟೋದಲ್ಲಿನ ಗಾಯಗಳನ್ನು ನೋಡಿದ ಕೂಡಲೇ ಸಿಎಂ ಅವರಿಗೆ ನಖಶಿಖಾಂತ ಉರಿದುಹೋಗಿದೆ. ಯಾರ್ರೀ ಆಯಮ್ಮ. ಇದು ನಾಯಿ ಕಚ್ಚಿದ್ದು ಅಂತಾರಲ್ಲ. ಮೊದಲು ಆಯಮ್ಮನಿಗೆ ನಾಡಿನಲ್ಲಿ ನಾಯಿಗಳಿಂದ ಕಚ್ಚಿಸಿಕೊಳ್ಳುವುದು ಬಿಟ್ಟು ಕಾಡಿಗೆ ಕಳಿಸ್ರೀ... ಅಲ್ಲಿ ಚಿರತೆಯಿಂದ ಕಚ್ಚಿಸಿಕೊಳ್ಳಲಿ... ಆಗ ಗೊತ್ತಾಗುತ್ತೆ ಎಂದವರೇ ವ್ಯಕ್ತಿಗೆ ಪರಿಹಾರ ಮಂಜೂರು ಮಾಡಿದ್ದಾರೆ.
ಸಿಎಂ ಅವರು ಡಿಎಫ್‌ಓ ಮೇಡಂ ಬಗ್ಗೆ ಮಾಡಿದ ಕಮೆಂಟ್ ಅನ್ನು ಗಂಭೀರವಾಗಿ ತೆಗೆದುಕೊಂಡಿರೋ ಅರಣ್ಯ ಇಲಾಖೆ ಮೇಲಧಿಕಾರಿಗಳು ಇದೀಗ ಡಿಎಫ್‌ಓ ಮೇಡಂಗೆ ಚಿರತೆ ಕಚ್ಚಿದರೆ ಹೇಗಿರುತ್ತದೆ ಎಂಬ ಅನುಭವ ಪಡೆಯಲು ನಮೀಬಿಯಾದಿಂದ ಆಮದು ಮಾಡಿಕೊಂಡಿರೋ ಚೀತಾಗಳಿರುವ ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ವರ್ಗಾವಣೆ ಮಾಡಬಹುದೇ ಎಂಬ ಪತ್ತೇದಾರಿಕೆಯಲ್ಲಿ ತೊಡಗಿದ್ದಾರಂತೆ!
ನಾಯಿಗೆ ಕೇಕ್ ತಿನ್ನಿಸಿ ಶ್ವಾನ ದಿನಾಚರಣೆ!
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಸೆಲ್ಫಿ ಸ್ಪರ್ಧೆ ಏರ್ಪಡಿಸುವುದು, ನಾಲ್ಕಾರು ಮಂದಿಯ ಗುಂಪು ಆಗಾಗ ಮರಕ್ಕೆ ಚಿಕ್ಕ ಡಬ್ಬವನ್ನಿಟ್ಟು ನೀರು ಹಾಕುವುದು, ಮಕ್ಕಳ ದಿನಾಚರಣೆಯಲ್ಲಿ ಒಂದು ರುಪಾಯಿ ಚಾಕಲೆಟ್ ನೀಡುವುದು, ಯಾರಾದರೂ ಉದ್ಯಮಿ ಹುಟ್ಟುಹಬ್ಬವಾದರೆ ಇಂದ್ರ, ಚಂದ್ರ ಎಂದು ಹೊಗಳಿ ಸುದ್ದಿ ಕಳುಹಿಸುವುದು, ಬೇರೆಯವರಿಂದ ರಕ್ತ ಕೊಡಿಸಿ ನಾನು ಶಿಬಿರ ಮಾಡಿದೆ ಎಂದು ಬೀಗುವ ಹಾಗೂ ಅದಕ್ಕೆ ಪ್ರಚಾರ ಕೊಡಿ ಎಂದು ಮಾಧ್ಯಮದವರನ್ನು ಕಾಡುವ ಭೂಪರು ನಿಮಗೆ ನಾಡಿನ ಮೂಲೆ ಮೂಲೆಯಲ್ಲೂ ಸಿಗುತ್ತಾರೆ. ಆದರೆ, ಮೈಸೂರಿನ ಈ ಪ್ರಚಾರ ಪ್ರಿಯನೊಬ್ಬ ಇವರೆಲ್ಲರನ್ನೂ ಮೀರಿಸುತ್ತಾನೆ. ಇತ್ತೀಚೆಗೆ ಶ್ವಾನ ದಿನಾಚರಣೆಯಿತ್ತು.
ಅದಕ್ಕೆ ಪ್ರಚಾರ ಪಡೆಯಲು ಈತ ಬೀದಿ ನಾಯಿಗಳಿಗೆ ಆಶ್ರಯ ಕಲ್ಪಿಸುವುದೋ, ಅನಾರೋಗ್ಯ ಪೀಡಿತ ನಾಯಿಗಳಿಗೆ ಚಿಕಿತ್ಸೆ ಕೊಡಿಸುವುದೋ ಮಾಡಿದ್ದರೆ ನಮ್ಮ ಅಬ್‌ಜಕ್ಷನ್ ಇರುತ್ತಿರಲಿಲ್ಲ. ಆದರೆ, ಈ ಮನುಷ್ಯ ಶ್ವಾನ ದಿನಾಚರಣೆ ಅಂಗವಾಗಿ ನಾಯಿಗೆ ಕೇಕ್ ತಿನ್ನಿಸಿ ಮಾಧ್ಯಮಗಳಿಗೆ ಫೋಟೋ ರವಾನಿಸಿದ್ದರು. ಅಷ್ಟೇ ಅಲ್ಲ. ಬದುಕಿನ ಭದ್ರತೆ ಜೊತೆಗೆ ನಿಷ್ಠೆ, ಸ್ನೇಹಕ್ಕೆ ಶ್ವಾನ ಹೆಸರುವಾಸಿ ಎಂದು ತನ್ನಿಬ್ಬರು ಗೆಳೆಯರನ್ನೇ ಸಭಿಕರನ್ನಾಗಿಸಿಕೊಂಡು ಭಾಷಣ ಬಿಗಿದ ಚಿಕ್ಕ ವಿವರವನ್ನೂ ಕಳುಹಿಸಿದ್ದರು! ಅದಕ್ಕೆ ಪ್ರಚಾರ ಕೊಡಿ ಎಂದು ಪತ್ರಕರ್ತರ ಬೆನ್ನು ಬಿದ್ದಿದ್ದರು. ಹೋಗ್ಲಿ ಅತ್ಲಾಗೆ ಅಂತ ಪ್ರಚಾರ ಕೊಟ್ಟು ಬಿಡಬಹುದಿತ್ತು. ಆದರೆ, ಆ ವ್ಯಕ್ತಿ ಕೇಕ್ ತಿನ್ನಿಸಿದ್ದು ಬೀದಿ ನಾಯಿಗಳಿಗಲ್ಲ. ಬದಲಾಗಿ, ತನ್ನದೇ ಮನೆಯ ತನ್ನದೇ ಸಾಕು ನಾಯಿಗೆ!
ಗುದ್ದಿ ಕೋಮಾಗೆ ಹೋದ ಜಾಣ!
ಆ್ಯಕ್ಸಿಡೆಂಟ್ ಆದರೆ ಗುದ್ದಿದ ಗಾಡಿ ಸವಾರನಿಗೂ ಏಟು ಬಿದ್ದಿದ್ದರೆ ಆತ ಪಾರು. ಇಲ್ಲದಿದ್ದಲ್ಲಿ ಸಾರ್ವಜನಿಕರಿಂದ ಹೊಡೆತ ಖಚಿತ. ಆಮೇಲೆ ಆತನಿಗೂ ಆಸ್ಪತ್ರೆ ಉಚಿತ. ಇದು ಎಲ್ಲೆಡೆ ನಡೆಯುವ ಮಾಮೂಲು ದೃಶ್ಯ. ಆದರೆ, ಇಲ್ಲೊಬ್ಬ ಬೈಕ್ ಸವಾರ ಆ್ಯಕ್ಸಿಡೆಂಟ್ ಮಾಡಿ ತಾನೇ ಮೂರ್ಛೆ ಹೋಗುವ ಮೂಲಕ ಸಾರ್ವಜನಿಕರ ಹೊಡೆತ ತಪ್ಪಿಸಿಕೊಂಡ ಪ್ರಸಂಗ ನಡೆದಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಇತ್ತೀಚಿಗೆ ಬೈಕ್‌ವೊಂದು ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಆಕೆಯ ಕಾಲು, ಕೈಗಳಿಗೆ ಗಂಭೀರ ಗಾಯಗಳಾಗಿವೆ. ಈ ವೇಳೆ ಬೈಕ್ ಸವಾರನಿಗೂ ಕೆಳಕ್ಕೆ ಬಿದ್ದು ತರಚಿದ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಕೈಕಾಲು ನೋವಿನಿಂದ ಜೋರಾಗಿ ಕಿರುಚಾಡಲು ಶುರುಮಾಡಿದ್ದಾಳೆ. ಇದನ್ನು ನೋಡುತ್ತಿದ್ದಂತೆ ಇನ್ನು ಜನ ಸೇರಿದರೆ ತನಗೆ ಹೊಡೆತ ಬೀಳುವುದು ಗ್ಯಾರಂಟಿ ಎಂದುಕೊಂಡ ಆ ಬೈಕ್ ಸವಾರ ತಾನೇ ಕೋಮಾಕ್ಕೆ ಹೋದವನಂತೆ ಬಿದ್ದುಕೊಂಡಿದ್ದಾನೆ. ಸುತ್ತಮುತ್ತಲಿದ್ದ ಸಾರ್ವಜನಿಕರು ಬಂದು ಇಬ್ಬರನ್ನೂ ಎರಡು ಆ್ಯಂಬುಲೆನ್ಸ್ ತರಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆ್ಯಂಬುಲೆನ್ಸ್ ಸ್ವಲ್ಪ ದೂರ ಹೋಗುತ್ತಲೇ ಬೈಕ್ ಸವಾರ ಕಣ್ತೆರೆದಿದ್ದಾನೆ. ಆ್ಯಂಬುಲೆನ್ಸ್ ಸಿಬ್ಬಂದಿ, ಏನಪ್ಪ ಈಗ ಆರಾಮಾಗಿದ್ದೀಯಾ ಎಂದು ಪ್ರಶ್ನಿಸಿದ್ದಾರೆ.
ಮುನೇನಕೊಪ್ಪ, ಚಿಕ್ಕನಗೌಡ್ರ ಕಾಂಗ್ರೆಸ್‌ಗೆ ಬರ್ತಾರೆ: ಸಚಿವ ಸಂತೋಷ್ ಲಾಡ್
ಹಾಂ ಸಾರ್ ಆರಾಮ್ ಅದೇನಿ.. ನಾ ಹೋಗ್ತೇನಿ ಬಿಡಿ ನನ್ನ ಗಾಡಿ ಅಲ್ಲೇ ಐತಿ ಎಂದ್ಹೇಳಿ ಹೊರಡಲು ಅನುವಾಗಿದ್ದಾನೆ. ಆದರೆ ಇಲ್ಲಪ್ಪ ನೀ ಪ್ರಜ್ಞಾತಪ್ಪಿ ಬಿದ್ದಿದ್ದಿ ಅಲಾ ಎಂದು ಪ್ರಶ್ನಿಸಿದರೆ, ಇಲ್ಲ ಸಾರ್ ಗಾಡಿ ಡಿಕ್ಕಿ ಹೊಡೆದಾಗ ಆಯಮ್ಮಾ ಚೀರಾಡಾಕ ಶುರು ಮಾಡಿದಳು. ಜನ ನನಗೆ ಬಂದು ಎಲ್ಲಿ ಹೊಡಿತಾರೋ ಎಂದುಕೊಂಡು ಮೂರ್ಛೆ ಹೋದವರಂತೆ ನಾಟಕ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಇದನ್ನು ಕೇಳುತ್ತಿದ್ದಂತೆ ಆ್ಯಂಬುಲೆನ್ಸ್ ಸಿಬ್ಬಂದಿಗೆ ಕೋಮಾಕ್ಕೆ ಹೋಗುವ ಸ್ಥಿತಿ.
ಗಿರೀಶ್‌ಬಾಬು
ಮಹೇಂದ್ರ ದೇವನೂರು
ಶಿವಾನಂದ ಗೊಂಬಿ
