Asianet Suvarna News Asianet Suvarna News

ಬೊಮ್ಮಾಯಿ ನಾಯಕತ್ವಕ್ಕೆ ಮನ್ನಣೆ : ಸವಾಲು ಮೆಟ್ಟಿನಿಂತ ರಾಜ್ಯ ಬಿಜೆಪಿ ನಾಯಕತ್ವ

  • ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ಗಮನದ ಸವಾಲು ಮೆಟ್ಟಿ ನಿಮತ ಬಿಜೆಪಿ
  • ಬೊಮ್ಮಾಯಿ ನೇತೃತ್ವದ ಅಡಳಿತ ಸಿಕ್ಕ ಪಾಲಿಕೆ ಚುನಾವಣೆ ಜಯ
corporation election BJP wins challenge snr
Author
Bengaluru, First Published Sep 7, 2021, 11:57 AM IST

ಬೆಂಗಳೂರು (ಸೆ.07):  ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರ ನಿರ್ಗಮನ ಮತ್ತು ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆದ ಬೆನ್ನಲ್ಲೇ ನಡೆದ ಮೂರು ಮಹಾನಗರ ಪಾಲಿಕೆಗಳು ಹಾಗೂ ಇತರ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಮತದಾರ ಆಡಳಿತಾರೂಢ ಬಿಜೆಪಿಯನ್ನು ಕೈಹಿಡಿದಿರುವುದು ಪಕ್ಷದಲ್ಲಿ ಸಂಭ್ರಮ ಹೆಚ್ಚಿಸಿದೆ.

ಅದರಲ್ಲೂ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಪಕ್ಷ ಉತ್ತಮ ಸಾಧನೆ ತೋರಿದ್ದಲ್ಲದೆ ಅಧಿಕಾರದ ಗದ್ದುಗೆ ಏರುವ ಹಂತ ತಲುಪಿರುವುದು ಬೊಮ್ಮಾಯಿ ಅವರ ನಾಯಕತ್ವಕ್ಕೆ ಮನ್ನಣೆ ಸಿಕ್ಕಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜತೆಗೆ ಅಡುಗೆ ಅನಿಲ, ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಜನತೆಯ ಆಕ್ರೋಶ ಈ ಚುನಾವಣೆ ಮೂಲಕ ವ್ಯಕ್ತವಾಗಬಹುದು ಎಂಬ ಪ್ರತಿಪಕ್ಷಗಳ ನಿರೀಕ್ಷೆಯೂ ಹುಸಿಯಾಗಿದೆ.

ಹೀಗಾಗಿಯೇ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಜತೆಗೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಒಪ್ಪಿಕೊಂಡು ಪಕ್ಷ ಬೆಂಬಲಿಸಿದ್ದಾರೆ ಎಂದೇ ಹೇಳುತ್ತಿದ್ದಾರೆ.

ಹೋರಾಡದೆ ಸೋತ ಕಾಂಗ್ರೆಸ್‌! ಗಂಭೀರವಾಗಿ ಪರಿಗಣಿಸದ ನಾಯಕರು

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರಿಂದ ಈ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ಪಕ್ಷದ ನಾಯಕರಿಗೆ ಇತ್ತು. ಹೀಗಾಗಿಯೇ ಪಕ್ಷದ ಮುಖಂಡರು ಇದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ತಳಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಿಕೊಂಡು ಚುನಾವಣೆ ಎದುರಿಸಿದರು. ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನ ಮಾಡಿದರು.

ಈ ಮೂರು ಮಹಾನಗರ ಪಾಲಿಕೆಗಳ ಪೈಕಿ ಬೆಳಗಾವಿ ಪಾಲಿಕೆ ಚುನಾವಣೆಯೇ ಬಿಜೆಪಿ ಪಾಲಿಗೆ ಸವಾಲಾಗಿತ್ತು. ಇದುವರೆಗೆ ಅಲ್ಲಿ ಪಕ್ಷ ತನ್ನ ಚಿಹ್ನೆ ಅಡಿ ಸ್ಪರ್ಧಿಸುತ್ತಿರಲಿಲ್ಲ. ಈ ಬಾರಿ ಪಕ್ಷದ ಚಿಹ್ನೆಯಡಿಯೇ ಸ್ಪರ್ಧಿಸುವ ಮಹತ್ವದ ತೀರ್ಮಾನ ಕೈಗೊಂಡರು. ಆರಂಭದಲ್ಲಿ ಈ ಬಗ್ಗೆ ಅಳುಕಿತ್ತು. ಸ್ಥಳೀಯವಾಗಿ ಪ್ರಬಲವಾಗಿರುವ ಮರಾಠಿಗರ ಒಲವು ಗಳಿಸಿರುವ ಎಂಇಎಸ್‌ ಎದುರಿಸುವುದು ಕಷ್ಟವಾಗಬಹುದು ಎಂಬ ಆತಂಕವನ್ನು ಕೆಲವು ಸ್ಥಳೀಯ ಮುಖಂಡರು ಎಚ್ಚರಿಸಿದ್ದರೂ ಅದನ್ನು ಮೆಟ್ಟಿನಿಂತು ರಣತಂತ್ರ ರೂಪಿಸುವಲ್ಲಿ ರಾಜ್ಯ ಬಿಜೆಪಿ ನಾಯಕರು ಯಶಸ್ವಿಯಾದರು. ಅಧಿಕಾರ ಗದ್ದುಗೆ ಏರುವಂತೆ ಸ್ಥಾನ ಗಳಿಸಿ ಇತರ ರಾಜಕೀಯ ಪಕ್ಷಗಳಿಗೆ ಅಚ್ಚರಿ ಮೂಡಿಸಿದರು.

ಈ ಪಾಲಿಕೆಗಳ ಚುನಾವಣೆಯ ಉಸ್ತುವಾರಿಯನ್ನು ಹೊತ್ತಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ಅವರು ಕಳೆದ ಮೂರು ವಾರಗಳಿಂದ ಸತತವಾಗಿ ಮೂರು ಪಾಲಿಕೆಗಳ ಮುಖಂಡರೊಂದಿಗೆ ಸತತ ಸಂಪರ್ಕದಲ್ಲಿದ್ದು, ಪ್ರವಾಸ ಕೈಗೊಂಡು ರೂಪಿಸಿದ ತಂತ್ರಗಾರಿಕೆ ಬಿಜೆಪಿ ಗೆಲುವಿಗೆ ಕಾರಣಲಾಯಿತು ಎನ್ನಲಾಗಿದೆ.

Follow Us:
Download App:
  • android
  • ios