ಮೂರು ಮಹಾನಗರ ಪಾಲಿಕೆ ಚುನಾವಣೆಯನ್ನು ರಾಜ್ಯ ಕಾಂಗ್ರೆಸ್‌ ನಾಯಕತ್ವ ಗಂಭೀರವಾಗಿಯೇ ಪರಿಗಣಿಸಿರಲಿಲ್ಲ ಚುನಾವಣೆಯ ಅಷ್ಟುಹೊಣೆಯನ್ನು ಸ್ಥಳೀಯ ನಾಯಕತ್ವಕ್ಕೆ ಬಿಟ್ಟಿದ್ದ ಕಾಂಗ್ರೆಸ್‌

 ಬೆಂಗಳೂರು (ಸೆ.07):  ಮೂರು ಮಹಾನಗರ ಪಾಲಿಕೆ ಚುನಾವಣೆಯನ್ನು ರಾಜ್ಯ ಕಾಂಗ್ರೆಸ್‌ ನಾಯಕತ್ವ ಗಂಭೀರವಾಗಿಯೇ ಪರಿಗಣಿಸಿರಲಿಲ್ಲ. ಚುನಾವಣೆಯ ಅಷ್ಟುಹೊಣೆಯನ್ನು ಸ್ಥಳೀಯ ನಾಯಕತ್ವಕ್ಕೆ ಬಿಟ್ಟಿದ್ದ ಕಾಂಗ್ರೆಸ್‌ಗೆ ತಕ್ಕಂತಹ ಫಲಿತಾಂಶವೇ ಬಂದಿದೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆಯ ಪೈಕಿ ಯಾವ ಪಾಲಿಕೆಯನ್ನು ಕಾಂಗ್ರೆಸ್‌ ಧ್ವಜ ಹಾರುವ ಸಾಧ್ಯತೆಯಿಲ್ಲ. ಇದನ್ನು ಮೊದಲೇ ನಿರೀಕ್ಷಿಸಿದ್ದಂತೆ ಕಾಂಗ್ರೆಸ್‌ ರಾಜ್ಯ ನಾಯಕರು ಚುನಾವಣಾ ಪೂರ್ವದಲ್ಲೇ ವರ್ತಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಚುನಾವಣೆಯ ಹೊಣೆಯನ್ನು ಸಂಪೂರ್ಣವಾಗಿ ಸ್ಥಳೀಯ ನಾಯಕತ್ವಕ್ಕೆ ಬಿಟ್ಟುಕೊಟ್ಟಿದ್ದರು.

ಯಾರಾರ‍ಯರಿಗೆ ಹೊಣೆ?: ಬೆಳಗಾವಿಯ ಹೊಣೆಯನ್ನು ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಕಲಬುರಗಿಯನ್ನು ಈಶ್ವರ್‌ ಖಂಡ್ರೆ ಹಾಗೂ ಹುಬ್ಬಳ್ಳಿ-ಧಾರವಾಡದ ಹೊಣೆಯನ್ನು ಮತ್ತೊಬ್ಬ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್‌ ಅವರ ಹೆಗಲಿಗೆ ವಹಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷರು ಚುನಾವಣೆ ವೇಳೆ ಒಂದು ಸುತ್ತು ಈ ಪಾಲಿಕೆಗಳಿಗೆ ಹೋಗಿ ಪತ್ರಿಕಾಗೋಷ್ಠಿಯಷ್ಟೇ ನಡೆಸಿ ಹಿಂತಿರುಗಿದ್ದರೆ ಸಿದ್ದರಾಮಯ್ಯ ಅವರಂತೂ ಆರೋಗ್ಯ ಸುಧಾರಣೆ ನೆಪದಲ್ಲಿ ಜಿಂದಾಲ್‌ ಸೇರಿಕೊಂಡು ಪ್ರಚಾರದಿಂದ ದೂರವೇ ಉಳಿದಿದ್ದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಪಕ್ಕಾ, ಸಿಎಂ ಭೇಟಿಯಾದ ಎಚ್‌ಡಿಕೆ ನಿಯೋಗ

ಸ್ಥಳೀಯರದ್ದೇ ಪಾರುಪತ್ಯ: ರಾಜ್ಯ ನಾಯಕತ್ವದ ವರ್ತನೆಗೆ ಮುಖ್ಯ ಕಾರಣ ಸ್ಥಳೀಯ ಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ನಗರ ಕೇಂದ್ರೀತ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಮಾನ್ಯವಾಗಿ ಆಡಳಿತ ಪಕ್ಷದ ಪರ ಇರುತ್ತದೆ ಎಂಬ ಸರಳ ಸತ್ಯ. ಜತೆಗೆ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಪಾಲಿಕೆಯಲ್ಲಿ ಈ ಹಿಂದೆಯೂ ಕಾಂಗ್ರೆಸ್‌ನ ಸಾಧನೆ ಉತ್ತಮವಾಗಿಯೇನೂ ಇರಲಿಲ್ಲ ಎಂಬ ಅರಿವು ಕಾರಣ. ಜತೆಗೆ, ಆಗಷ್ಟೇ ಅಧಿಕಾರ ಹಿಡಿದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಈ ಭಾಗದಲ್ಲೇ ನಡೆಯುವ ಚುನಾವಣೆಯಲ್ಲಿ ಗೆಲ್ಲಲು ಎಲ್ಲ ತಂತ್ರವನ್ನು ಬಳಸಲಿದ್ದಾರೆ ಎಂಬ ಅರಿವು ಇತ್ತು. ಜತೆಗೆ, ಕೇಂದ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ದೊಡ್ಡ ದಂಡೇ ನೆರೆದಿದ್ದರಿಂದ ಏನೇ ಹೋರಾಟ ಬೇಕಿದ್ದರೂ ಸ್ಥಳೀಯ ನಾಯಕರು ಮಾಡಿಕೊಳ್ಳಲಿ ಎಂಬ ನಿರ್ಧಾರಕ್ಕೆ ಬಂದಿದ್ದರು.

ಹೋರಾಡದೇ ಸೋಲು: ಇದ್ದುದ್ದರಲ್ಲೇ ಕಲಬುರಗಿ ಬಗ್ಗೆ ಕಾಂಗ್ರೆಸ್‌ಗೆ ಸ್ವಲ್ಪ ನಂಬಿಕೆಯಿತ್ತು. ಆದರೆ, ಸ್ಥಳೀಯ ನಾಯಕತ್ವದಲ್ಲಿ ಇದ್ದ ಒಳ ಜಗಳ ಸರಿಪಡಿಸಿ ಸೂಕ್ತ ಮಾರ್ಗದರ್ಶನ ನೀಡುವ ಆಸಕ್ತಿಯನ್ನು ರಾಜ್ಯ ನಾಯಕತ್ವ ತೋರಲಿಲ್ಲ. ರಾಜ್ಯ ನಾಯಕತ್ವ ಈ ರೀತಿ ಕೈ ತೊಳೆದುಕೊಂಡ ಕಾರಣ ಚುನಾವಣೆಗೆ ಬೇಕಾದ ಒಟ್ಟಾರೆ ಕಾರ್ಯತಂತ್ರವೇ ಚುನಾವಣೆ ವೇಳೆ ಕಂಡು ಬರಲಿಲ್ಲ. ಸಂಪನ್ಮೂಲದ ಕೊರತೆಯೂ ದೊಡ್ಡ ಮಟ್ಟದಲ್ಲೇ ಸ್ಥಳೀಯ ನಾಯಕರನ್ನು ಕಾಡಿತ್ತು. ಒಟ್ಟಾರೆ ಮೂರು ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೋರಾಡುವ ಗುಣವನ್ನೇ ತೋರಿರಲಿಲ್ಲ. ಕಾಂಗ್ರೆಸ್‌ ರಾಜ್ಯ ನಾಯಕತ್ವ ಈ ಚುನಾವಣೆ ಬಗ್ಗೆ ತೋರಿದ ನಿರ್ಲಕ್ಷ್ಯಕ್ಕೆ ಹೋಲಿಸಿದರೆ ಫಲಿತಾಂಶ ತುಸು ಉತ್ತಮವಾಗಿಯೇ ಇದೆ. ಹೀಗಾಗಿಯೇ ರಾಜ್ಯ ನಾಯಕರು ಫಲಿತಾಂಸ ಸಮಾಧಾನಕರವಾಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ.