ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ರಾಜ್ಯ ನಾಯಕರು ಸಿದ್ಧಪಡಿಸಿದ ಹಿರಿಯ ಶಾಸಕರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ, ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾದವರಿಗೆ ಮಾತ್ರ ಈಗ ಅವಕಾಶ, ಮೊದಲ ಅಥವಾ 2ನೇ ಬಾರಿಯ ಶಾಸ ಕರಿಗೆ ನಿರಾಸೆ. ಮೇಲ್ಮನೆ ಸದಸ್ಯರಿಗೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ. 

ಬೆಂಗಳೂರು(ಡಿ.30): ಹಲವು ದಿನಗಳಿಂದ ಚರ್ಚೆಯಲ್ಲಿರುವ ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ರಾಜ್ಯ ನಾಯಕತ್ವ ನೀಡಿರುವ ಹಿರಿಯ ಶಾಸಕರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಪಟ್ಟಿ ಯಾವುದೇ ಕ್ಷಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜ್ಯ ನಾಯಕತ್ವ ಸಿದ್ದಪಡಿಸಿರುವ ಹಾಗೂ ಹೈಕಮಾಂಡ್ ಒಪ್ಪಿಗೆ ನೀಡಿರುವ ಪಟ್ಟಿಯಲ್ಲಿ ಕೇವಲ ಮೂರು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ನಿಗಮ ಮಂಡಳಿ ಆಕಾಂಕ್ಷಿಗಳಾಗಿದ್ದ ಮೊದಲ ಹಾಗೂ ಎರಡನೇ ಅವಧಿಯ ಶಾಸಕರಿಗೆ ನಿರಾಸೆ ಕಾದಿದೆ.

ಇನ್ನೂ ಒಂದು ವಾರ ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಳಂಬ: ಡಿಕೆಶಿ ಒತ್ತಡಕ್ಕೆ ಮಣಿದು ರಾಹುಲ್ ಈ ಸೂಚನೆ ನೀಡಿದ್ರಾ..!

ಅಷ್ಟೇ ಅಲ್ಲ ವಿಧಾನಪರಿಷತ್ ಸದಸ್ಯರಿಗೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹಿರಿಯ ಶಾಸಕರ ಜತೆಗೆ ಕಾರ್ಯಕರ್ತರಿಗೂ ಅವಕಾಶ ನೀಡಿ ಎಂದು ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಸೂಚಿಸಿತ್ತು. ಆದರೆ, ಆದರೆ ಕಾರ್ಯಕರ್ತರ ಪಟ್ಟಿ ಸಿದ್ದಪಡಿಸಲು ಕಾಲಾವಕಾಶವನ್ನು ರಾಜ್ಯ ನಾಯಕತ್ವ ಕೇಳಿರುವುದರಿಂದ ಮೊದಲಿಗೆ ಅಖೈರುಗೊಂಡಿರುವ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ಮೂಲಗಳು ಹೇಳಿವೆ.