ಶಾಸಕ ಬಂಡಿ ಜತೆಗಿನ ಸಂಭಾಷಣೆ ತಮಾಷೆಗಾಗಿ: ಯಡಿಯೂರಪ್ಪ
ಇತ್ತೀಚಿಗೆ ಶಿರಹಟ್ಟಿಯಲ್ಲಿ ನಡೆದ ಜನಸಂಪರ್ಕ ಯಾತ್ರೆ ಸಂದರ್ಭದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ ಜತೆಗೆ ಅನೌಪಚಾರಿಕವಾಗಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇರೆ ಅರ್ಥದಲ್ಲಿ ಪ್ರಚಾರಗೊಳ್ಳುತ್ತಿದೆ.
ಗಜೇಂದ್ರಗಡ (ನ.11): ಇತ್ತೀಚಿಗೆ ಶಿರಹಟ್ಟಿಯಲ್ಲಿ ನಡೆದ ಜನಸಂಪರ್ಕ ಯಾತ್ರೆ ಸಂದರ್ಭದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ ಜತೆಗೆ ಅನೌಪಚಾರಿಕವಾಗಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇರೆ ಅರ್ಥದಲ್ಲಿ ಪ್ರಚಾರಗೊಳ್ಳುತ್ತಿದೆ. ಆದರೆ ಬಂಡಿ ಅವರ ಜೊತೆಗಿನ ಸಂಭಾಷಣೆ ಕೇವಲ ತಮಾಷೆಗಾಗಿತ್ತು ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನಾನು ನ 8 ರಂದು ಶಿರಹಟ್ಟಿಯಲ್ಲಿ ಜನಸಂಪರ್ಕ ಯಾತ್ರೆ ಮುಗಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ರೋಣ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಅವರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಿರುವಾಗ ಸ್ಪರ್ಧೆ ಮಾಡುತ್ತೀಯಾ ಅಂತಾ ಕೇಳಿದಾಗ ನನ್ನ ಮೇಲೆ ಜವಾಬ್ದಾರಿ ಹಾಕಿದ್ದರು. ಅದಕ್ಕೆ ನಾನು ಜನ ಈಗಾಗಲೇ ನೀನು ನಿಲ್ಲುವುದು ಬೇಡ ಅಂತಾ ಹೇಳುತ್ತಿದ್ದಾರೆ ಎಂದು ನಗೆ ಚಟಾಕಿ ಹಾರಿಸಿದ್ದೆ. ಅಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಕೂಡಾ ಇದ್ದರು. ಇದೊಂದು ಅನೌಪಚಾರಿಕ ತಮಾಷೆಯ ಸಂಭಾಷಣೆಯಾಗಿದ್ದು, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು.
Karnataka Politics: ಯಡಿಯೂರಪ್ಪ-ಕಳಕಪ್ಪ ಬಂಡಿ ಸಂಭಾಷಣೆ ವೈರಲ್
ನನಗೆ ಆಪ್ತರಾದವರೊಂದಿಗೆ ಈ ರೀತಿಯಲ್ಲಿ ತಮಾಷೆಗಾಗಿ ಮಾತನಾಡುತ್ತೇನೆ. ಅದೇ ರೀತಿಯಲ್ಲಿ ಕಳಕಪ್ಪ ಬಂಡಿ ಅವರೊಂದಿಗೆ ತಮಾಷೆಯಾಗಿ ಮಾತನಾಡಿದ್ದೇನೆಯೇ ಹೊರತು ಇನ್ನಾವುದೇ ಉದ್ದೇಶವಿರಲಿಲ್ಲ ಎಂದಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಅರ್ಥದಲ್ಲಿ ಪ್ರಚಾರಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಶಾಸಕ ಕಳಕಪ್ಪ ಬಂಡಿ ಅವರು ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಜನಪ್ರಿಯರಾಗಿದ್ದಾರೆ. ಚುನಾವಣೆ ಇನ್ನೂ ದೂರವಿದೆ. ಕ್ಷೇತ್ರದ ಜನರು ಇದಾವುದರ ಬಗ್ಗೆಯೂ ತಲೆ ಕೆಡೆಸಿಕೊಳ್ಳದೇ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಕೋರುತ್ತೇನೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚರ್ಚೆಯಲ್ಲೇನಿತ್ತು?: ಶಿರಹಟ್ಟಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಪರಮೋಚ್ಚ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ರೋಣ ಶಾಸಕರು ಭೇಟಿ ಮಾಡಿದ್ದು ಈ ವೇಳೆಯಲ್ಲಿ ಸ್ವಾರಸ್ಯಕರ ಸಂಭಾಷಣೆ ನಡೆದಿದ್ದು ಕನ್ನಡಪ್ರಭ ಸೋದರ ಸಂಸ್ಥೆಯಾದ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ‘ಚುನಾವಣೆಗೆ ನಿಲ್ಲುತ್ತೀಯಾ?’ ಎಂತಾ ಶಾಸಕ ಕಳಕಪ್ಪ ಬಂಡಿಗೆ ಯಡಿಯೂರಪ್ಪ ಎಲ್ಲರ ಸಮ್ಮುಖದಲ್ಲಿಯೇ ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ‘ನೀವು ನಿಲ್ಲು ಅಂದ್ರೆ ನಿಲ್ಲುತ್ತೇನೆ... ಬೇಡ ಅಂದ್ರೆ ಬೇಡ ಸರ್’ ಎನ್ನುತ್ತಾರೆ.
ರಾಜ್ಯದ ಜನತೆ ಸಿದ್ದರಾಮಯ್ಯ ಜೇಬಲ್ಲಿದ್ದಾರಾ?: ಬಿಎಸ್‌ವೈ
‘ಜನ ಬೇಡ ಅಂತಿದಾರೆ’ ಎಂದು ಯಡಿಯೂರಪ್ಪ ಮರು ಪ್ರಶ್ನೆ ಹಾಕುತ್ತಾರೆ. ಅದಕ್ಕೂ ಶಾಸಕರು ‘ನೀವು ಹೇಳಿದಂತೆ ಆಗಲಿ’ ಎಂದು ಉತ್ತರಿಸುತ್ತಾರೆ. ‘ಹಾಗಾದ್ರೆ ದುಡ್ಡು ಉಳೀತು ಅಂತಾ?’ ಎನ್ನುತ್ತಾ ಬಿಎಸ್‌ವೈ ಮುಖ ತಿರುಗಿಸುತ್ತಾರೆ. ಆಗ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರನ್ನು ಉದ್ದೇಶಿಸಿ ‘ಇವನಿಗೆ ಟಿಕೆಟ್ ಕೊಡ್ತೀರಾ?’ ಅಂತಾ ಯಡಿಯೂರಪ್ಪ ಕೇಳುತ್ತಾರೆ. ‘ಕೊಡದಿದ್ರೆ ನನಗೂ ಬಿಡಲ್ಲ ಅವ್ನು’ ಎಂದು ಸಿ.ಸಿ.ಪಾಟೀಲರು ನಗುತ್ತಲೇ ಉತ್ತರಿಸಿ ಪರಿಸ್ಥಿತಿ ತಿಳಿಗೊಳಿಸುತ್ತಾರೆ.